ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಮದ್ದೂರು ಕ್ಷೇತ್ರದ ನೀರಿನ ಸಮಸ್ಯೆ ಬಗ್ಗೆ ಮುಂದಿನ 2-3 ದಿನಗಳಲ್ಲಿ ಸದನದಲ್ಲಿ ಚರ್ಚೆ ನಡೆಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸಲಾಗುವುದು ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.ತಾಲೂಕಿನ ಬೆಸಗರಹಳ್ಳಿ ಅಡ್ಡ ರಸ್ತೆಯಲ್ಲಿ ಕಾವೇರಿ ನೀರಾವರಿ ನಿಗಮದಿಂದ 5 ಲಕ್ಷದಲ್ಲಿ ಕೆರೆಗೂಡು ಶಾಖೆ ನಾಲೆಯಿಂದ ಬರುವ ನಾಲ್ಕನೇ ಮುಖ್ಯನಾಲೆ, ಆನೆ ದೊಡ್ಡಿ ವಿತರಣಾ ನಾಲೆ ಮತ್ತು ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿದರು. ಮದ್ದೂರು ಭಾಗದಲ್ಲಿ ನೀರಾವರಿ ಸಮಸ್ಯೆ ಈಗ ಉದ್ಭವವಾಗಿಲ್ಲ. ಬಹಳ ಹಿಂದಿನಿಂದಲೂ ಇದೆ. ಹೀಗಾಗಿ ಕೊನೆ ಭಾಗದ ಜಮೀನುಗಳಿಗೆ ನೀರು ಸಮರ್ಪಕವಾಗಿ ತಲುಪುತ್ತಿಲ್ಲ ಎನ್ನುವುದು ಕೃಷಿಕರ ಸಾಮಾನ್ಯ ಆರೋಪ. ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾದರೆ ಮೊದಲು ಪ್ರತಿಯೊಂದು ನಾಲೆಯಲ್ಲಿ ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಗಟ್ಟಬೇಕಾಗಿದೆ ಎಂದರು.
ಮುಖ್ಯ ನಾಲೆಗಳನ್ನು ಆಧುನೀಕರಣ ಗೊಳಿಸುವ ಜೊತೆಗೆ ಬಾಕ್ಸ್ ಡ್ರೈನ್ ನಿರ್ಮಾಣ, ವಿತರಣಾ ವ್ಯವಸ್ಥೆ ಸಮರ್ಪಕಗೊಳಿಸಿದಾಗ ಮಾತ್ರ ನಾಲೆಗಳಲ್ಲಿ ನೀರಿನ ವೇಗ ಹೆಚ್ಚಾಗಿ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ತಲುಪುತ್ತದೆ ಎಂದರು.ಕ್ಷೇತ್ರದ ಕುಡಿಯುವ ನೀರು ಯೋಜನೆಗಾಗಿ ಸರ್ಕಾರ 180 ಕೋಟಿ ರು. ವೆಚ್ಚದ ಅನುಮೋದನೆ ನೀಡಿದೆ. ವಿದ್ಯುತ್ ಸಮಸ್ಯೆ ನಿವಾರಣೆಗಾಗಿ 220 ಕೆ.ವಿ.ವಿದ್ಯುತ್ ವಿತರಣಾ ಉಪ ಕೇಂದ್ರದ ನಿರ್ಮಾಣಕ್ಕೂ ಅನುಮೋದನೆ ದೊರೆತಿದೆ. ಇವುಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದರು.
ಈ ವೇಳೆ ಮನ್ಮುಲ್ ನಿರ್ದೇಶಕ ಹರೀಶ, ಬೆಸಗರಹಳ್ಳಿ ಗ್ರಾಪಂ ಉಪಾಧ್ಯಕ್ಷ ಶಾಹಿನ್ ತಾಜ್, ಸದಸ್ಯರಾದ ಪ್ರಸನ್ನ ಕುಮಾರ್, ಮುರಳಿ, ವೆಂಕಟೇಶ್, ಮೂರ್ತಿ, ಶೋಭಾ, ಕಾಂಗ್ರೆಸ್ ಮುಖಂಡರಾದ ಅಡ್ಡರಸ್ತೆ ಗೋಪಿ, ಪನ್ನೇ ದೊಡ್ಡಿ ಸುಧಾಕರ, ಮಾರ ಸಿಂಗನಹಳ್ಳಿ ರಾಮಚಂದ್ರ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.ಬಿಜೆಪಿ ನಾಯಕರಿಗೆ ಅಭಿವೃದ್ಧಿ ಬಗ್ಗೆ ಅರಿವಿಲ್ಲ: ಶಾಸಕ ಕೆ.ಎಂ.ಉದಯ್ಮದ್ದೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಆ ಪಕ್ಷದ ನಾಯಕರಿಗೆ ಅಭಿವೃದ್ಧಿ ಬಗ್ಗೆ ಅರಿವಿಲ್ಲ. ಕೇವಲ ಪ್ರಚಾರಕ್ಕಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಗುರುವಾರ ಕಿಡಿಕಾರಿದರು. ಸುದ್ದಿಗಾರರಿಗೆ ಮಾತನಾಡಿ, ವಿಜಯೇಂದ್ರ ಯಾವುದೊ ಆಂಗ್ಲ ಶಾಲೆಯಲ್ಲಿ ಓದಿಕೊಂಡು ಬಂದು ಗದ್ದೆಯಲ್ಲಿ ನಾಟಿ ಮಾಡಿ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ಈ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ರಾಜಕೀಯ ನಾಯಕರಿಗೆ ರೈತರ ಸಮಸ್ಯೆ ಬಗ್ಗೆ ಸಂಪೂರ್ಣವಾಗಿ ಅರಿವಿಲ್ಲ. ಸಮಸ್ಯೆ ಬಗ್ಗೆ ಅರಿವಿಲ್ಲದವರು ಪ್ರಚಾರಕ್ಕಾಗಿ ಈ ರೀತಿಯ ಟೀಕೆ, ಟಿಪ್ಪಣಿಗಳನ್ನು ಮಾಡುತ್ತಾರೆ ಎಂದು ಆರೋಪಿಸಿದರು.
ಬಿಜೆಪಿ ಮತ್ತು ಜೆಡಿಎಸ್ ನಾಯಕರು ಅಧಿಕಾರವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಅಭಿವೃದ್ಧಿ ವಿಚಾರ ಮುಂದೆ ಇಟ್ಟುಕೊಂಡು ಮಾಧ್ಯಮಗಳ ಮೂಲಕ ಟೀಕೆ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಇದಕ್ಕೆ ಜಿಲ್ಲೆಯ ಜನ ಸೊಪ್ಪು ಹಾಕುವುದಿಲ್ಲ ಎಂದು ಲೇವಡಿ ಮಾಡಿದರು.ಬಿಜೆಪಿ ಮತ್ತು ಜೆಡಿಎಸ್ ನಾಯಕರು ಈ ಹಿಂದೆ ಅಭಿವೃದ್ಧಿ ಕಾಮಗಾರಿಗಳ ಕಮಿಷನ್ ಗಿರಾಕಿಗಳಾಗಿದ್ದರು. ಈ ನಾಯಕರು ತಮ್ಮ ಕಮಿಷನ್ ಚಟ ವನ್ನು ನಮ್ಮ ಮೇಲು ಹಾಕುತ್ತಿದ್ದಾರೆ. ಅವರ ಬಳಿ ದಾಖಲೆ ಇದ್ದರೆ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.