ಸಾರಾಂಶ
ದೇವರಹಿಪ್ಪರಗಿ ಪಟ್ಟಣದ ಸಂತೆಯ ಕರವಸೂಲಿ ಹರಾಜು ತುರ್ತು ಕ್ರಮಕ್ಕೆ ಕೆಲ ಸದಸ್ಯರು ಒತ್ತಾಯಿಸಿದ್ದರಿಂದ ಅದರ ಕುರಿತಾದ ಚರ್ಚೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಮಾತ್ರವಲ್ಲ, ಇಲ್ಲಿಯವರೆಗೆ ಸಂತೆಯ ಕರ ವಸೂಲಿ ಕುರಿತಾದ ಮಾಹಿತಿ ನೀಡುವಂತೆಯೂ ಕೆಲ ಸದಸ್ಯರು ಆಗ್ರಹಿಸಿದ ಘಟನೆ ಜರುಗಿತು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಪಟ್ಟಣದ ಸಂತೆಯ ಕರವಸೂಲಿ ಹರಾಜು ತುರ್ತು ಕ್ರಮಕ್ಕೆ ಕೆಲ ಸದಸ್ಯರು ಒತ್ತಾಯಿಸಿದ್ದರಿಂದ ಅದರ ಕುರಿತಾದ ಚರ್ಚೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಮಾತ್ರವಲ್ಲ, ಇಲ್ಲಿಯವರೆಗೆ ಸಂತೆಯ ಕರ ವಸೂಲಿ ಕುರಿತಾದ ಮಾಹಿತಿ ನೀಡುವಂತೆಯೂ ಕೆಲ ಸದಸ್ಯರು ಆಗ್ರಹಿಸಿದ ಘಟನೆ ಜರುಗಿತು.ಪಟ್ಟಣದ ಪಪಂ ಸಭಾಭವನದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಘಟನೆ ನಡೆಯಿತು. ಸಭೆಯ ಆರಂಭದಲ್ಲಿಯೇ ಇಂತಹ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿತು. ನಾಮ ನಿರ್ದೇಶಿತ ಸದಸ್ಯರಿಗೆ ಹಿಂದಿನ ಸಭೆಯ ನೋಟಿಸ್ ಕುರಿತಾದ ಮಾಹಿತಿ ನೀಡದ ಕಾರಣ ಆಕ್ರೋಶಗೊಂಡು ನಾಮನಿರ್ದೇಶಿತ ಸದಸ್ಯ ರಾಜು ಮೆಟಗಾರ ಸಭೆಯಿಂದ ಹೊರ ನಡೆದರು.
ಸದಸ್ಯರಾದ ಬಸೀರ ಅಹ್ಮದ್ ಬೇಪಾರಿ, ಕಾಸುಗೌಡ ಜಲಕತ್ತಿ, ಕಾಸು ಜಮಾದಾರ, ಉಮೇಶ ರೂಗಿ ಹಾಗೂ ಕಾಸು ಭಜಂತ್ರಿ ಮಾತನಾಡಿ, ಸಂತೆಯ ಕರವಸೂಲಿ ಹಾಗೂ ಹರಾಜು ಪ್ರಕ್ರಿಯೆ ಮಾಡದಿರುವುದು, ನೂತನ ಪಪಂ ಪೀಠೋಪಕರಣಗಳ ಖರ್ಚಿನ ಮಾಹಿತಿ, ವಾರ್ಡ್‌ಗಳಲ್ಲಿ ಸುಮಾರು ₹2 ಲಕ್ಷ ವೆಚ್ಚದಲ್ಲಿ ಕೈಗೊಂಡ ಕಾಮಗಾರಿಗಳ ಕುರಿತು ಮಾತನಾಡಿದರು.ಕರವಸೂಲಿ ಕುರಿತಾದ ರಶೀದಿಗಳನ್ನು ಮುಂದಿನ ಸಭೆಯಲ್ಲಿ ನೀಡುವಂತೆ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟೆ ಅವರನ್ನು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.
ಸಭೆಯಲ್ಲಿ ಅಧ್ಯಕ್ಷೆ ಜಯಶ್ರೀ ದೇವಣಗಾಂವ, ಉಪಾಧ್ಯಕ್ಷ ರಮೇಶ ಮಸಿಬಿನಾಳ, ಸದಸ್ಯರಾದ ಕಾಸುಗೌಡ ಬಿರಾದಾರ ಜಲಕತ್ತಿ, ಬಸೀರ ಅಹ್ಮದ್ ಬೇಪಾರಿ, ಕಾಸು ಜಮಾದಾರ, ಉಮೇಶ ರೂಗಿ, ಶಾಂತಯ್ಯ ಜಡಿಮಠ, ಕಾಶಿನಾಥ ಭಜಂತ್ರಿ, ಸಿಂಧೂರ ಡಾಲೇರ, ನಾಮ ನಿರ್ದೇಶಿತ ಸದಸ್ಯರಾದ ಸುನಿಲ್ ಕನಮಡಿ, ಹುಸೇನ ಕೊಕಟನೂರ ಸೇರಿದಂತೆ ಮಹಿಳಾ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ಸಾಮಾನ್ಯ ಸಭೆಯಲ್ಲಿ ಸದಸ್ಯರು ಯಾವ ರೀತಿ ಮಾತನಾಡಬೇಕು ಎಂದು ಸಭಾ ನಡವಳಿಕೆಗಳನ್ನು ಅಳವಡಿಸಿಕೊಳ್ಳಬೇಕು. ನೂತನ ಸದಸ್ಯರು, ಮಹಿಳಾ ಸದಸ್ಯರು ಹಾಗೂ ಮಹಿಳಾ ಅಧಿಕಾರಿಗಳು ಸಿಬ್ಬಂದಿ ವರ್ಗ ಇರುತ್ತಾರೆ. ಅವಾಚ್ಯ ಶಬ್ದಗಳನ್ನು ಬಳಸಬಾರದು. ಮಾಹಿತಿ ಕೇಳಿದರೆ ಕೊಡುತ್ತೇವೆ. ಕೆಲ ಸದಸ್ಯರ ನಡವಳಿಕೆ ಸಭೆಗೆ ವಿರುದ್ಧವಾಗಿದೆ.-ಸುರೇಖಾ ಬಾಗಲಕೋಟೆ. ಮುಖ್ಯಾಧಿಕಾರಿ, ಪಪಂ ದೇವರಹಿಪ್ಪರಗಿ