ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ವ್ಯಕ್ತಿತ್ವ ವಿಕಸನದಲ್ಲಿ ಪಾಲಕರ ಪಾತ್ರ ಮುಖ್ಯವೋ ಅಥವಾ ಶಿಕ್ಷಕರ ಕೊಡುಗೆ ಶ್ರೇಷ್ಠವೋ? ಎಂಬ ವಿಷಯದ ಕುರಿತು ಹೊಸಳ್ಳಿಯ ಜಗದ್ಗುರು ಬೂದೀಶ್ವರ ಸಂಸ್ಥಾನ ಮಠದ ಆವರಣದಲ್ಲಿ ಶನಿವಾರ ಜರುಗಿದ ಜಿಲ್ಲಾ ದ್ವಿತೀಯ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದ ಮಕ್ಕಳ ಹರಟೆ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು.
ಗದಗ: ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ವ್ಯಕ್ತಿತ್ವ ವಿಕಸನದಲ್ಲಿ ಪಾಲಕರ ಪಾತ್ರ ಮುಖ್ಯವೋ ಅಥವಾ ಶಿಕ್ಷಕರ ಕೊಡುಗೆ ಶ್ರೇಷ್ಠವೋ? ಎಂಬ ವಿಷಯದ ಕುರಿತು ಹೊಸಳ್ಳಿಯ ಜಗದ್ಗುರು ಬೂದೀಶ್ವರ ಸಂಸ್ಥಾನ ಮಠದ ಆವರಣದಲ್ಲಿ ಶನಿವಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆ ವತಿಯಿಂದ ಜರುಗಿದ ಜಿಲ್ಲಾ ದ್ವಿತೀಯ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದ ಮಕ್ಕಳ ಹರಟೆ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು.
ಶಿಕ್ಷಕರೇ ಶ್ರೇಷ್ಠ ಎಂಬ ವಿಷಯದ ಕುರಿತು ಸೌಮ್ಯ ಕಜ್ಜಿ ಮಾತನಾಡಿ, ತಾಯಿ ಮೊದಲ ಗುರುವಾಗಿದ್ದರೂ, ಜೀವನದ ಉದ್ದಕ್ಕೂ ಸರಿಯಾದ ದಾರಿ ತೋರಿಸುವವರು ಶಿಕ್ಷಕರೇ. ಶಿಕ್ಷಕರ ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ನೋಡಿ ಮಕ್ಕಳು ಬೆಳೆಯುತ್ತಾರೆ. ವಿದ್ಯಾರ್ಥಿಯ ಪ್ರತಿಭೆಯನ್ನು ಗುರುತಿಸಿ, ಹಿಂಜರಿಕೆಯನ್ನು ಹೋಗಲಾಡಿಸಿ ಗುರಿ ತಲುಪಲು ಬೆಂಬಲ ನೀಡುವವರು ಶಿಕ್ಷಕರು ಎಂದರು.ಪಾಲಕರೇ ಶ್ರೇಷ್ಠ ಎಂಬ ತಂಡದ ಪರವಾಗಿ ವಿಜಯಲಕ್ಷ್ಮಿ ಕಲ್ಮಠ ಮಾತನಾಡಿ, ಕಟ್ಟಡ ಎಷ್ಟೇ ಸುಂದರವಾಗಿದ್ದರೂ ದೃಢವಾದ ಅಡಿಪಾಯವಿಲ್ಲದೆ ನಿಲ್ಲಲು ಸಾಧ್ಯವಿಲ್ಲ. ಮಗುವಿಗೆ ತಾಯಿ-ತಂದೆಯರೇ ಮೊದಲ ಅಡಿಪಾಯ. ಮಾನವೀಯ ಮೌಲ್ಯಗಳು, ಸಂಸ್ಕಾರ ಹಾಗೂ ಅಕ್ಕರೆಯನ್ನು ಶಾಲೆಯ ಮುಂಚೆಯೇ ಮನೆಯಲ್ಲಿ ಕಲಿಸುವವರು ಪಾಲಕರೇ ಎಂದರು.
ಪ್ರತಿಯಾಗಿ ಚೈತ್ರಾ ರೋಣದ, ಪಾಲಕರು ಕೇವಲ ಅಡಿಪಾಯ (ಬುನಾದಿ) ಹಾಕಬಹುದು. ಆದರೆ ಆ ಅಡಿಪಾಯದ ಮೇಲೆ ಸುಂದರವಾದ ಕಟ್ಟಡವನ್ನು ನಿರ್ಮಿಸುವವರು ಶಿಕ್ಷಕರು. ಸ್ವಾಮಿ ವಿವೇಕಾನಂದರಿಗೆ ರಾಮಕೃಷ್ಣ ಪರಮಹಂಸರು, ಚಂದ್ರಗುಪ್ತ ಮೌರ್ಯನಿಗೆ ಚಾಣಕ್ಯ ಸಿಕ್ಕಿದ್ದರಿಂದಲೇ ಅವರು ಜಗತ್ತಿನಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು ಎಂದರು. ಸಾತ್ವಿಕ್ ಬುಟ್ಟಾ ಹಾಗೂ ಸಂಜನಾ ಗಾಜಿ ಮಕ್ಕಳು ಅತಿ ಹೆಚ್ಚು ಸಮಯವನ್ನು ಶಿಕ್ಷಕರೊಂದಿಗೆ ಕಳೆಯುತ್ತಾರೆ. ಕೇವಲ ಪುಸ್ತಕದ ಜ್ಞಾನವಷ್ಟೇ ಅಲ್ಲದೆ, ಹೊಡೆಯದೆ-ಬಡಿಯದೆ ಸರಿ-ತಪ್ಪುಗಳನ್ನು ತಿದ್ದಿ ಸರಿದಾರಿಗೆ ತರುವ ಶಕ್ತಿ ಶಿಕ್ಷಕರಿಗಿದೆ ಎಂದು ಪ್ರತಿಪಾದಿಸಿದರು.ಯಶಸ್ವಿನಿ ಪಾಟೀಲ್ ಹಾಗೂ ತನುಶ್ರೀ ಬದಿ ಮಾತನಾಡಿ, ಮಗು ಜಗತ್ತಿಗೆ ಕಾಲಿಟ್ಟ ತಕ್ಷಣ ನೋಡುವ ಮೊದಲ ಮುಖವೇ ಪಾಲಕರದ್ದು. ಸ್ವಾಮಿ ವಿವೇಕಾನಂದರ ವೀರತ್ವ ಮತ್ತು ಸಂಸ್ಕಾರಕ್ಕೆ ಅವರ ತಾಯಿಯೇ ಕಾರಣ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಾಜರ್ಷಿಯಾಗಲು ಅವರ ತಾಯಿ ವಾಣಿ ವಿಲಾಸರ ಮಾರ್ಗದರ್ಶನವೇ ಬುನಾದಿ. ಪಾಲಕರು ಧೈರ್ಯ ಮತ್ತು ಆತ್ಮವಿಶ್ವಾಸ ತುಂಬದಿದ್ದರೆ ಮಗು ಶಾಲೆಯವರೆಗೂ ತಲುಪಲು ಸಾಧ್ಯವಿಲ್ಲ ಎಂದು ಪಾಲಕರ ಪರವಾಗಿ ಮಾತನಾಡಿದರು.
ಚರ್ಚೆಯ ಕೊನೆಯಲ್ಲಿ ಸಂವಾದ ಕಾರ್ಯಕ್ರಮ ನಿರ್ವಹಿಸಿದ ಸಾಹಿತಿ ಈಶ್ವರ ಮಡ್ಲೇರಿ, ಬೀಜ ಮತ್ತು ವೃಕ್ಷದಂತೆ ಪಾಲಕರು ಹಾಗೂ ಶಿಕ್ಷಕರು ಒಂದೇ ನಾಣ್ಯದ ಎರಡು ಮುಖಗಳು. ಇಬ್ಬರನ್ನೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಅತ್ಯಂತ ಅರ್ಥಪೂರ್ಣವಾಗಿ ಚರ್ಚೆಯನ್ನು ಸಮಾರೋಪಗೊಳಿಸಿದರು.ಚಿಂತಕ ಡಾ. ಜಿ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪನಿರ್ದೇಶಕ ಐ.ಬಿ. ಬೆನಕೊಪ್ಪ ಮಾತನಾಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ. ನಿಂಗು ಸೊಲಗಿ, ಶಸಾಪ ಜಿಲ್ಲಾಧ್ಯಕ್ಷ ಕೆ.ಎ. ಬಳಿಗೇರ, ನಾಗರಾಜ, ವೀರೇಶ ಬದಾಮಿ, ಮಂಜುನಾಥ ಮಟ್ಟಿ, ರಾಜೇಶ್ವರಿ ಬಡ್ನಿ ಉಪಸ್ಥಿತರಿದ್ದರು. ತೇಜಸ್ವಿನಿ ಉಮರ್ಜಿ ಸ್ವಾಗತಿಸಿದರು. ಅಪೂರ್ವಾ ಶೆಲಿಯಪ್ಪನವರ ಕಾರ್ಯಕ್ರಮ ನಿರೂಪಿಸಿದರು. ಭೂಮಿಕಾ ಬಾರಕೇರ ವಂದಿಸಿದರು.