ಬ್ಯಾಡಗಿ ಪಟ್ಟಣ ಅಭಿವೃದ್ಧಿಗೆ ವಿಶೇಷ ಅನುದಾನಕ್ಕಾಗಿ ಸಿಎಂ ಬಳಿ ಚರ್ಚೆ: ಶಾಸಕ ಶಿವಣ್ಣನವರ

| Published : Sep 20 2025, 01:01 AM IST

ಬ್ಯಾಡಗಿ ಪಟ್ಟಣ ಅಭಿವೃದ್ಧಿಗೆ ವಿಶೇಷ ಅನುದಾನಕ್ಕಾಗಿ ಸಿಎಂ ಬಳಿ ಚರ್ಚೆ: ಶಾಸಕ ಶಿವಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಜನಸಂಖ್ಯೆ ಈಗಾಗಲೇ 40 ಸಾವಿರ ದಾಟಿದ್ದು, ನಗರಸಭೆ ಹಂತಕ್ಕೆ ತಲುಪಿದ್ದು, ಹೀಗಾಗಿ ಇಲ್ಲಿರುವ ಜನರಿಗೆ ಅಭಿವೃದ್ಧಿ ಕಾರ್ಯಕ್ರಮಗಳು ಅತ್ಯವಶ್ಯವಾಗಿದೆ.

ಬ್ಯಾಡಗಿ: ಹೆಚ್ಚಾಗುತ್ತಿರುವ ಜನಸಂಖ್ಯೆಗೆ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಮಾರುಕಟ್ಟೆಗೆ ತಕ್ಕಂತೆ ವಿಶೇಷ ಅನುದಾನ ಬಿಡುಗಡೆಗೊಳಿಸಿ ಅಭಿವೃದ್ಧಿಗೆ ವೇಗ ನೀಡುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.

ಶುಕ್ರವಾರ ಪಟ್ಟಣದ ಪುರಸಭೆ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸಿದ ಸದಸ್ಯ ಈರಣ್ಣ ಬಣಕಾರ ಪಟ್ಟಣದ, ಪಟ್ಟಣದ ಜನಸಂಖ್ಯೆ ಈಗಾಗಲೇ 40 ಸಾವಿರ ದಾಟಿದ್ದು, ನಗರಸಭೆ ಹಂತಕ್ಕೆ ತಲುಪಿದ್ದು, ಹೀಗಾಗಿ ಇಲ್ಲಿರುವ ಜನರಿಗೆ ಅಭಿವೃದ್ಧಿ ಕಾರ್ಯಕ್ರಮಗಳು ಅತ್ಯವಶ್ಯವಾಗಿದೆ. ಎರಡು ವರ್ಷಗಳಿಗೊಮ್ಮ ಎಸ್‌ಎಫ್‌ಸಿ ಅನುದಾನ ಬಿಡುಗಡೆಯಾಗುತ್ತಿದ್ದು, ವಿಶೇಷ ಅನುದಾನವಿಲ್ಲದೇ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಶಿವಣ್ಣನವರ ಅವರು, ವಿಶೇಷ ಅನುದಾದ ಕುರಿತು ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಳಿ ಚರ್ಚಿಸಿದ್ದೇನೆ. ಅನುದಾನ ಒದಗಿಸುವ ಭರವಸೆ ಸಿಕ್ಕಿದೆ. ವಿಶೇಷ ಅನುದಾನ ಬಿಡುಗಡೆ ಬಳಿಕ ತಮ್ಮ ಬಳಿ ಚರ್ಚಿಸಿ ಪಟ್ಟಣದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳೋಣ ಎಂದರು.

ಉದ್ಯಾನ ಅಭಿವೃದ್ಧಿ ಅವಶ್ಯ: ಸದಸ್ಯ ಬಸವರಾಜ ಛತ್ರದ ಮಾತನಾಡಿ, ವಾಹನ ದಟ್ಟಣೆ ಹೆಚ್ಚಾಗಿದೆ. ರಸ್ತೆಯಲ್ಲಿ ವಾಯುವಿಹಾರ ಮಾಡುವ ಜನರು ಭಯದಲ್ಲಿ ಹೋಗುವ ಸ್ಥಿತಿ ಎದುರಾಗಿದೆ. ಹೀಗಾಗಿ ಅನುದಾನ ಲಭ್ಯತೆಗೆ ಅನುಗುಣವಾಗಿ ಪಟ್ಟಣದಲ್ಲಿನ ಉದ್ಯಾನಗಳ ಅಭಿವೃದ್ಧಿಗೆ ಒತ್ತು ನೀಡುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ಎಲ್ಲ ವಾರ್ಡ್‌ಗಳನ್ನು ಹಂತ- ಹಂತವಾಗಿ ಅಭಿವೃದ್ಧಿಪಡಿಸುವುದು ಸೇರಿದಂತೆ ಸಾರ್ವಜನಿಕರಿಗೆ ಅತಿ ಅವಶ್ಯವಾದ ಎರಡು ಉದ್ಯಾನಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿದರು.

ಸಿಸಿ ಕ್ಯಾಮೆರಾ ಕಡ್ಡಾಯ: ಸುಭಾಸ ಮಾಳಗಿ ಮಾತನಾಡಿ, ಪಟ್ಟಣದಲ್ಲಿ ನಡೆಯುತ್ತಿರುವ ಕಳ್ಳತನ ಹಾಗೂ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಹೊಸದಾಗಿ ಮನೆ ನಿರ್ಮಿಸಿಕೊಳ್ಳುವ ಮಾಲೀಕರಿಗೆ ಸ್ವಂತ ಹಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯಗೊಳಿಸಬೇಕು. ಪುರಸಭೆ ವತಿಯಿಂದ ಅನುಮತಿ ಕೊಡುವ ಸಮಯದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯ ಎಂದು ನಮೂದಿಸಬೇಕು ಈ ಕರಾರಿನಿಂದ ಬಡವರನ್ನು ಮುಕ್ತಗೊಳಿಸಿ 30 ಲಕ್ಷಕ್ಕೂ ಅಧಿಕ ಅಂದಾಜು ಮೊತ್ತದ ಮನೆಗಳಿಗೆ ಇದನ್ನು ಕಡ್ಡಾಯಗೊಳಿಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಶಿವಣ್ಣನವರ ಇದೊಂದು ಉತ್ತಮ ಸಲಹೆ. ಆದರೆ ಕಡ್ಡಾಯ ಎನ್ನುವುದನ್ನು ಸದಸ್ಯರ ಸರ್ವಾನುಮತದ ನಿರ್ಣಯಕ್ಕೆ ಬಿಡಲಿದ್ದೇನೆ ಎಂದರು.

ಹಗಲುವೇಳೆ ನೀರು ಪೂರೈಸಿ: ಪಟ್ಟಣದಲ್ಲಿ ನೀರು ಪೂರೈಕೆ ಮಾಡುವುದಕ್ಕೆ ಯಾವುದೇ ಸಮಯವಿಲ್ಲ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ಹೊತ್ತಿನಲ್ಲಿಯೂ ನೀರು ಬಿಡಲಾಗುತ್ತಿದೆ. ಇದರಿಂದ ರೈತರಿಗೆ, ಕೂಲಿ ಕಾರ್ಮಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಎಲ್ಲರಿಗೂ ಅನುಕೂಲವಾಗುವ ಹಾಗೆ ಒಂದು ಸಮಯವನ್ನು ನಿಗದಿ ಮಾಡುವಂತೆ ಆಗ್ರಹಿಸಿದರು.

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಣ್ಣ ಶೆಟ್ಟರ ಸೇರಿದಂತೆ ಸದಸ್ಯರು ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.