ವಿಜಯನಗರ ಜಿಲ್ಲೆ ಅಭಿವೃದ್ಧಿಗೆ ವಿಶೇಷ ಅನುದಾನಕ್ಕೆ ಸಿಎಂ ಬಳಿ ಚರ್ಚೆ: ಸಂಸದ ತುಕಾರಾಂ

| Published : Jan 18 2025, 12:45 AM IST

ವಿಜಯನಗರ ಜಿಲ್ಲೆ ಅಭಿವೃದ್ಧಿಗೆ ವಿಶೇಷ ಅನುದಾನಕ್ಕೆ ಸಿಎಂ ಬಳಿ ಚರ್ಚೆ: ಸಂಸದ ತುಕಾರಾಂ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಚರ್ಚಿಸಲಾಗಿದೆ.

ಹೊಸಪೇಟೆ: ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಚರ್ಚಿಸಲಾಗಿದೆ. ಜಿಲ್ಲೆ ಅಭಿವೃದ್ಧಿಗೆ ಎಲ್ಲ ಶಾಸಕರು, ಸಚಿವರ ಒಡಗೂಡಿ ಶ್ರಮಿಸಲಾಗುವುದು ಎಂದು ಬಳ್ಳಾರಿ ಸಂಸದ ಈ.ತುಕಾರಾಂ ಹೇಳಿದರು.

ವಿಜಯನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸಂಸದರ ನೂತನ ಕಚೇರಿ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಡಿಎಂಎಫ್‌, ಕೆಕೆಆರ್‌ಡಿಬಿ ಅನುದಾನ ಬಳಕೆಗೂ ಕ್ರಮ ವಹಿಸಲಾಗುವುದು. ಸರ್ಕಾರ ಮಟ್ಟದಲ್ಲಿ ಹೆಚ್ಚಿನ ಅನುದಾನ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಡಿಎಂಎಫ್‌ ಅನುದಾನದಲ್ಲಿ ನಿಯಮ ಪಾಲನೆ ಮಾಡಲು ಹೇಳಲಾಗಿತ್ತು. ಈಗಾಗಲೇ ವಿಜಯನಗರ ಜಿಲ್ಲೆಯಲ್ಲಿ ₹400 ಕೋಟಿ ಡಿಎಂಎಫ್‌ ಅನುದಾನದಲ್ಲಿ ಯೋಜನೆ ಕೈಗೊಳ್ಳಲಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಧಿಕಾರಿಗೆ ವೇದಿಕೆಯಲ್ಲಿ ಮಾತನಾಡಿರುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಾಲತಾಣದಲ್ಲಿ ವಿಮರ್ಶೆ ಮಾಡುವವರು ಶಿಷ್ಟಾಚಾರದ ಬಗ್ಗೆ ತಿಳಿಯಬೇಕು. ಮುಖ್ಯಮಂತ್ರಿ ಯಾವತ್ತೂ ಸರಿ ಇರುತ್ತಾರೆ. ಅವರು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಜಿಲ್ಲಾಧಿಕಾರಿ ಅವರನ್ನು ವರ್ಗಾವಣೆ ಕೂಡ ಮಾಡಲಾಗುವುದಿಲ್ಲ. ಈ ವಿಚಾರದ ಕುರಿತು ಈಗಾಗಲೇ ನಾವು ಚರ್ಚಿಸಿದ್ದೇವೆ ಎಂದರು.

ಹೊಸಪೇಟೆ ನಗರಸಭೆಯ ನೌಕರ ಮಂಜುನಾಥ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಘಟನೆ ಬಗ್ಗೆ ವರದಿ ಪಡೆಯಲಾಗುವುದು. ಪೊಲೀಸರು ಕೂಡ ಕಾನೂನು ಪ್ರಕಾರ ಕ್ರಮ ಜರುಗಿಸಲಿದ್ದಾರೆ. ಅಧಿಕಾರಿಗಳಿಂದ ಒತ್ತಡ ಇದ್ದರೆ, ಸಿಬ್ಬಂದಿ ಸಂಸದರ ಕಚೇರಿಗೆ ಸಂಪರ್ಕಿಸಬಹುದು ಎಂದರು.

ಜನಸಾಮಾನ್ಯರ ಸಮಸ್ಯೆಗೆ ಶೀಘ್ರ ಸ್ಪಂದಿಸಲು ಸಂಸದರ ಕಚೇರಿ ಸದಾ ಸಿದ್ಧ ಇರಲಿದೆ. ಅಭಿವೃದ್ಧಿಗೆ ಆದ್ಯತೆ ನೀಡುವಲ್ಲಿ ಜನಸಂಪರ್ಕ ಕಚೇರಿ ಸಹಕಾರಿಯಾಗಲಿದೆ. ಸಾಮಾನ್ಯ ಜನರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಸಂಸದರ ಗಮನಕ್ಕೆ ತರಲು ಅವಕಾಶಕ್ಕಾಗಿ ಜನಸಂಪರ್ಕ ಕಚೇರಿ ತೆರೆಯಲಾಗಿದೆ. ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸಲು ಪ್ರಾಮಾಣಿಕವಾದ ಕಾರ್ಯ ನಿರ್ವಹಿಸಲಿದ್ದೇವೆ. ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ ಕಾರ್ಯ ನಿರ್ವಹಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ನಗರದ ಬಿಡಿಸಿಸಿ ಬ್ಯಾಂಕಿನ ಆವರಣದಲ್ಲಿ ಸಂಸದರ ಕಚೇರಿ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದರು.

ಭಾಗವತ್‌ ಹೇಳಿಕೆಗೆ ಖಂಡನೆ:

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್‌ ಭಾಗವತ್ ರಾಮಮಂದಿರ ಕಟ್ಟಿದ ಮೇಲೆ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಎಂದು ಹೇಳಿಕೆ ನೀಡಿದ್ದಾರೆ. ಮೋಹನ್‌ ಭಾಗವತ್ ಸಂವಿಧಾನ ಓದಲಿ. ಈ ರೀತಿ ಹೇಳುವ ಮೂಲಕ ಇಡೀ‌ ದೇಶಕ್ಕೆ ಭಾಗವತ್ ಅವಮಾನ ಮಾಡಿದ್ದಾರೆ. 1947ರಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಆರ್ ಎಸ್ ಎಸ್ ಕಚೇರಿಯಲ್ಲಿ ಏನಾದ್ರೂ ಈಗ ಸ್ವಾತಂತ್ರ್ಯ ಸಿಕ್ಕಿರಬಹುದು.

ಮೊದಲು‌ ಮೋಹನ್‌ ಭಾಗವತ್ ದೇಶದ ಜನರಿಗೆ ಕ್ಷಮೆಯಾಚಿಸಬೇಕು ಎಂದರು.

ರಾಮಮಂದಿರ ಕಟ್ಟುವುದಕ್ಕೆ ಭೂಮಿಪೂಜೆಗೆ ಚಾಲನೆ ಕೊಟ್ಟಿದ್ದೇ ರಾಜೀವ್‌ ಗಾಂಧಿ‌. ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. 1947ರ ಸ್ವಾತಂತ್ರ್ಯ ಹೇಗಿರುತ್ತೆ ಅಂತ ತೋರಿಸ್ತೀವಿ ಕಾಯ್ತಾ ಇರಿ ಎಂದು ಸಂಸದ ತುಕಾರಾಂ ಹೇಳಿದರು.

ಈ ವೇಳೆ ಸಂಡೂರು ಶಾಸಕಿ ಅನ್ನಪೂರ್ಣ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಜಿಪಂ ಸಿಇಒ ಅಕ್ರಮ್ ಅಲಿ ಶಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಹುಡಾ ಅಧ್ಯಕ್ಷ ಎಚ್‌ಎನ್‌ಎಫ್‌ ಇಮಾಮ್‌, ಮುಖಂಡರಾದ ಎಲ್‌. ಸಿದ್ದನಗೌಡ, ಅಕ್ಕಿ ತೋಟೇಶ್‌, ಮುಕ್ತಿಯಾರ್‌ ಪಾಷಾ ಮತ್ತಿತರರಿದ್ದರು.