ವೈದ್ಯರು, ಸಿಬ್ಬಂದಿ ನೇಮಕಕ್ಕೆ ಆರೋಗ್ಯ ಸಚಿವರೊಂದಿಗೆ ಚರ್ಚೆ: ಶಾಸಕ ಕೆ.ಎಂ.ಉದಯ್

| Published : Jun 24 2024, 01:33 AM IST

ವೈದ್ಯರು, ಸಿಬ್ಬಂದಿ ನೇಮಕಕ್ಕೆ ಆರೋಗ್ಯ ಸಚಿವರೊಂದಿಗೆ ಚರ್ಚೆ: ಶಾಸಕ ಕೆ.ಎಂ.ಉದಯ್
Share this Article
  • FB
  • TW
  • Linkdin
  • Email

ಸಾರಾಂಶ

ಮದ್ದೂರು ಸಾರ್ವಜನಿಕ ಆಸ್ಪತ್ರೆ ಹಾಗೂ ಹಳ್ಳಿಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಮತ್ತು ಅಗತ್ಯ ಸಿಬ್ಬಂದಿ ಹಾಗೂ ಆಂಬ್ಯುಲೆನ್ಸ್ ವಾಹನದ ಕೊರತೆ ಬಗ್ಗೆ ನಾನು ಈಗಾಗಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಮನವಿ ಸಲ್ಲಿಸಿದ್ದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮತ್ತು ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರು, ಸಿಬ್ಬಂದಿ ನೇಮಕಕ್ಕೆ ಆರೋಗ್ಯ ಸಚಿವರೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಭಾನುವಾರ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ರಾಜ್ಯ ಸರ್ಕಾರ ಆರೋಗ್ಯ ಕವಚ ಯೋಜನೆ ಅಡಿ ಮಂಜೂರು ಮಾಡಿರುವ 108 ಆಂಬ್ಯುಲೆನ್ಸ್ ವಾಹನವನ್ನು ಸಾರ್ವಜನಿಕ ರ ಸೇವೆಗೆ ಸಮರ್ಪಣೆ ಮಾಡಿ ಮಾತನಾಡಿದರು.

ಮದ್ದೂರು ಸಾರ್ವಜನಿಕ ಆಸ್ಪತ್ರೆ ಹಾಗೂ ಹಳ್ಳಿಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಮತ್ತು ಅಗತ್ಯ ಸಿಬ್ಬಂದಿ ಹಾಗೂ ಆಂಬ್ಯುಲೆನ್ಸ್ ವಾಹನದ ಕೊರತೆ ಬಗ್ಗೆ ನಾನು ಈಗಾಗಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಮನವಿ ಸಲ್ಲಿಸಿದ್ದೆ ಎಂದರು.

ಚರ್ಚೆಯ ಮೊದಲ ಹಂತವಾಗಿ ಮದ್ದೂರು ಆಸ್ಪತ್ರೆಗೆ ಆಂಬ್ಯೂಲೆನ್ಸ್ ಮಂಜೂರು ಮಾಡಿದ್ದಾರೆ. ಇತರ ಬೇಡಿಕೆಗಳ ಬಗ್ಗೆ ಶೀಘ್ರವಾಗಿ ಪರಿಹಾರ ದೊರಕುತ್ತದೆ. ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಹಾಲಿ ಇರುವ ಬೆಸಗರಹಳ್ಳಿ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉನ್ನತ ದರ್ಜೆಗೆ ಏರಿಸಲು, ವಾರದಲ್ಲಿ ದಿನದ 24 ಗಂಟೆಗಳ ಕಾಲ ಜನರಿಗೆ ಆರೋಗ್ಯ ಸೇವೆ ದೊರಕಲು ಕ್ರಮ ಕೈಗೊಳ್ಳುವಂತೆ ಸಚಿವರಲ್ಲಿ ಬೇಡಿಕೆ ಸಲ್ಲಿಸಲಾಗಿದೆ. ಪ್ರಗತಿ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಜನರಿಗೂ ಉತ್ತಮ ಚಿಕಿತ್ಸೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ತಾಲೂಕು ಆರೋಗ್ಯ ಅಧಿಕಾರಿ ಡಾ. ರವೀಂದ್ರ ಬಿ ಗೌಡ, ಆಸ್ಪತ್ರೆ ಆಡಳಿತ ವೈದ್ಯ ಡಾ. ಬಾಲಕೃಷ್ಣ, ಆರೋಗ್ಯ ಶಿಕ್ಷಣಾಧಿಕಾರಿ ತಮ್ಮೇಗೌಡ, ತಾಲೂಕು ಸೊಸೈಟಿ ಉಪಾಧ್ಯಕ್ಷ ರಾಘವ, ನಿರ್ದೇಶಕ ಬೆಸಗರಹಳ್ಳಿ ಗೋಪಿ, ಪುರಸಭಾ ಸದಸ್ಯರಾದ ಕೋಕಿಲ ಅರುಣ, ಎಂ.ಬಿ.ಸಚಿನ್ ಮನೋಜ್, ಸಿದ್ದರಾಜು, ವೆಂಕಟೇಶ್, ಸರ್ವ ಮಂಗಳ, ಅಸ್ಲಾಂ ಖಾನ್. ಮುಖಂಡರಾದ ಆರೀಫ್ ಪಾಷಾ, ಅವಿನಾಶ್, ಕೃಷ್ಣ ಮತ್ತಿತರರು ಇದ್ದರು.