ಸರ್ಕಾರದೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಹರಿಸುವ ಪ್ರಯತ್ನ

| Published : Jun 09 2025, 03:29 AM IST

ಸರ್ಕಾರದೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಹರಿಸುವ ಪ್ರಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಮನವಿ ಕುರಿತು ಗಂಭೀರವಾಗಿ ಚಿಂತನೆ ನಡೆಸಿ, ಸರ್ಕಾರದೊಂದಿಗೆ ಚರ್ಚಿಸಿ, ಸಮಸ್ಯೆಗಳ ಪರಿಹಾರಕ್ಕೆ ನಾನು ಸಂಪೂರ್ಣ ಪ್ರಯತ್ನ ಮಾಡುತ್ತೇನೆ

ಕನ್ನಡಪ್ರಭ ವಾರ್ತೆ ಕಾಗವಾಡ

ಈ ಜೈನ ಸಮ್ಮೇಳನ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ದೃಷ್ಟಿಯಿಂದ ಅತ್ಯಂತ ಮಹತ್ವ ಪೂರ್ಣವಾಗಿದೆ. ಈಗಾಗಲೇ ಎಲ್ಲರೂ ಸಮಾಜದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಮಹಾರಾಜರು ಸಹ ಜೈನ ಸಮುದಾಯ ಬೇಡಿಕೆಗಳನ್ನು ಈಡೇರಿಸುವಂತೆ ನನಗೆ ಮನವಿ ಪತ್ರ ನೀಡಿದ್ದಾರೆ. ಈ ಮನವಿ ಕುರಿತು ಗಂಭೀರವಾಗಿ ಚಿಂತನೆ ನಡೆಸಿ, ಸರ್ಕಾರದೊಂದಿಗೆ ಚರ್ಚಿಸಿ, ಸಮಸ್ಯೆಗಳ ಪರಿಹಾರಕ್ಕೆ ನಾನು ಸಂಪೂರ್ಣ ಪ್ರಯತ್ನ ಮಾಡುತ್ತೇನೆ ಎಂದು ರಾಜ್ಯಪಾಲ ಥಾವರ್‌ ಚಂದ ಗೆಹ್ಲೋತ್‌ ಭರವಸೆ ನೀಡಿದರು.

ತಾಲೂಕಿನ ಐನಾಪುರ ಪಟ್ಟಣದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಭಟ್ಟಾರಕ ಸಮ್ಮೇಳನ ಹಾಗೂ ಜೈನ ಸಮಾವೇಶದಲ್ಲಿ ಅವರು ಮಾತನಾಡಿದರು.

ಜೈನ ಧರ್ಮದ ಅನುಯಾಯಿಗಳು ಕಾಲಕಾಲಕ್ಕೆ ವಿಭಿನ್ನ ಸಮ್ಮೇಳನ, ಧರ್ಮಸಭೆ, ಸಮಾರಂಭಗಳ ಮೂಲಕ ಅವರ ವಿಚಾರಗಳನ್ನು ಪ್ರಸ್ತುತ ಪಡಿಸುತ್ತಾರೆ. ಜೈನ ಧರ್ಮ ಯಾವಾಗಲೂ ಸೇವೆಗೆ ಮೊದಲ ಆದ್ಯತೆ ನೀಡಿದೆ. ಅಗತ್ಯ ಅಸಹಾಯಕರಿಗೆ ಸಹಾಯ ಮಾಡುವುದು. ಗೋಶಾಲೆಗಳನ್ನು ನಿರ್ವಹಿಸುವುದು, ಶೈಕ್ಷಣಿಕ ಸಮಸ್ಯೆಗಳನ್ನು ಹೋಗಲಾಡಿಸುವುದು, ಆಸ್ಪತ್ರೆ ಹಾಗೂ ವೃದ್ಧಾಶ್ರಮದ ವ್ಯವಸ್ಥೆ ಮಾಡುವುದು ಹೀಗೆ ಇವೆಲ್ಲ ಜೈನ ಸಮಾಜದ ಸೇವಾ ಕಾರ್ಯಗಳ ವೈಖರಿಯಾಗಿದೆ. ಧರ್ಮಗಳು ಆತ್ಮ ಶುದ್ಧಿ, ನೈತಿಕತೆ ಹಾಗೂ ಮೋಕ್ಷದೆಡೆಗೆ ಪ್ರೇರಣೆ ನೀಡುತ್ತವೆ. ಸಮಾಜವನ್ನು ಸತ್ಯ ಹಾಗೂ ಅಹಿಂಸೆ ಮಾರ್ಗದಲ್ಲಿ ಸಾಗುವಂತೆ ಮಾಡುತ್ತವೆ. ಭಗವಾನ್ ಮಹಾವೀರರು ಸತ್ಯ, ಅಹಿಂಸಾ, ಅಸ್ಥೆ, ಬ್ರಹ್ಮಚರ್ಯ ಹಾಗೂ ಅಪರಿಗ್ರಹದಂತಹ ಸಿದ್ಧಾಂತಗಳ ಮೂಲಕ ಶಾಂತಿ ಪೂರ್ಣ ಸಹ ಅಸ್ತಿತ್ವ ಹಾಗೂ ಸಾರ್ವಜನಿಕ ಸಹೋದರತ್ವದ ಪರಿಚಾರಕತೆಯ ಮಾರ್ಗವನ್ನು ಹುಟ್ಟು ಹಾಕಿದ್ದಾರೆ ಎಂದು ತಿಳಿಸಿದರು.

ಜೈನ ಸಮುದಾಯ ಶಾಂತಿ ಪ್ರೀಯ ಸಮಾಜ. ದೇಶದ ಹಾಗೂ ಜನ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಆರ್ಥಿಕತೆ ದೃಷ್ಟಿಯಿಂದಲೂ ದೇಶದ ಸಮೃದ್ಧತೆಯಲ್ಲಿ ಪಾಲ್ಗೊಳ್ಳುವ ಸಮುದಾಯವಾಗಿದೆ. ಧರ್ಮ ಹಾಗೂ ಸಂಸ್ಕೃತಿಯ ರಕ್ಷಣೆ, ಸಂವರ್ಧನೆಯ ಜೊತೆಗೆಯೇ ಶಿಕ್ಷಣ, ಆರೋಗ್ಯ ಹಾಗೂ ಸೇವೆಯ ಕ್ಷೇತ್ರದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ನಮ್ಮ ಸಾಂಸ್ಕೃತಿಕ ಪರಂಪರೆ ಅತ್ಯಂತ ಪ್ರಾಚೀನವಾದದ್ದಾಗಿದೆ. ಅದರಂತೆಯೇ ಪ್ರಾಚೀನ ಕಾಲದಿಂದಲೂ ವಸುದೇವ ಕುಟುಂಬಕಂ ಎನ್ನುವ ತತ್ವ ಹಾಗೂ ಧ್ಯಾನವನ್ನು ಕೇಂದ್ರಿಕರಿಸುವುದರ ಮೂಲಕ ಸರ್ವೇ ಭವಂತು ಸುಖಿನೋ, ಸರ್ವೇ ಸಂತು ನಿರಾಮಯ ಎಂಬ ಭಾವನೆಗಳಿಂದ ಪ್ರೇರಣೆಯಾಗಿದೆ. ಅಲ್ಲದೆ ಯಾವತ್ತೂ ವಿಶ್ವ ಬಂಧುತ್ವ, ವಿಶ್ವ ಶಾಂತಿ, ಸಮತೆ ಹಾಗೂ ಸಮೃದ್ಧತೆಗೆ ಪ್ರೇರೇಪಿಸುತ್ತದೆ. ಇದು ಸರ್ಕಾರಕ್ಕೂ ಅನ್ವಯವಾಗುತ್ತದೆ. ಇದೇ ನಿರೀಕ್ಷೆಯಲ್ಲಿ ನಾನು ಭರವಸೆ ನೀಡುವೆ ಎಂದರು.