ಸಾರಾಂಶ
ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಗಳನ್ನು ಶೀಘ್ರ ಭರ್ತಿ ಮಾಡುವಂತೆ ನಾನು ಈಗಾಗಲೇ ಪಶು ಸಂಗೋಪನಾ ಇಲಾಖೆ ಸಚಿವ ವೆಂಕಟೇಶ್ ಅವರೊಂದಿಗೆ ಚರ್ಚೆ ನಡೆಸಿ ಮನವಿ ಮಾಡಿದ್ದೇನೆ. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ಕ್ಷೇತ್ರದಲ್ಲಿ ಪಶು ವೈದ್ಯಕೀಯ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರು ಹಾಗೂ ಸಿಬ್ಬಂದಿಯ ನೇಮಕ ಕುರಿತಂತೆ ಇಲಾಖೆ ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಶಾಸಕ ಕೆ.ಎಂ. ಉದಯ್ ಗುರುವಾರ ಹೇಳಿದರು.ತಾಲೂಕಿನ ಬೆಸಗರಹಳ್ಳಿಯಲ್ಲಿ ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಿರುವ ಪಶು ಆಸ್ಪತ್ರೆ ಉದ್ಘಾಟಿಸಿ ಮಾತನಾಡಿ, ಕ್ಷೇತ್ರ ವ್ಯಾಪ್ತಿಯ ಪಶು ಆಸ್ಪತ್ರೆಗಳಲ್ಲಿ 30 ವೈದ್ಯರ ಪೈಕಿ ಕೇವಲ 10 ವೈದ್ಯರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಶೇ. 70ರಷ್ಟು ಸಿಬ್ಬಂದಿಯ ಕೊರತೆ ಇದೆ ಎಂದರು.
ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಗಳನ್ನು ಶೀಘ್ರ ಭರ್ತಿ ಮಾಡುವಂತೆ ನಾನು ಈಗಾಗಲೇ ಪಶು ಸಂಗೋಪನಾ ಇಲಾಖೆ ಸಚಿವ ವೆಂಕಟೇಶ್ ಅವರೊಂದಿಗೆ ಚರ್ಚೆ ನಡೆಸಿ ಮನವಿ ಮಾಡಿದ್ದೇನೆ. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.ಪಶು ಇಲಾಖೆ ವೈದ್ಯರು ಹಾಗೂ ಸಿಬ್ಬಂದಿ ಜಾನುವಾರುಗಳನ್ನು ಕಾಡುವ ರೋಗಗಳ ನಿಯಂತ್ರಣದ ಬಗ್ಗೆ ರೈತರಿಗೆ ಕಾಲಕಾಲಕ್ಕೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು. ನಂತರ ಶಾಸಕರು ಊತಗೆರೆ ಗ್ರಾಮದಲ್ಲಿ ಪಶು ಇಲಾಖೆ ವತಿಯಿಂದ ಪ್ರಾರಂಭಿಸಲಾಗಿರುವ ಗೋಶಾಲೆಯನ್ನು ಉದ್ಘಾಟಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಕೆ.ವಿವೇಕಾನಂದ, ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ. ಗೋವಿಂದು, ಡಾ. ಶೃತಿ, ಡಾ. ಕಾರ್ತಿಕ್, ಜಾನುವಾರು ಅಭಿವೃದ್ಧಿ ಅಧಿಕಾರಿ ರಾಮಕೃಷ್ಣಯ್ಯ, ಸಿದ್ದರಾಮಯ್ಯ, ಗ್ರಾಪಂ ಅಧ್ಯಕ್ಷೆ ರಾಧಿಕಾ ಮತ್ತು ಸದಸ್ಯರು, ಮುಖಂಡರಾದ ಕೆರೆಮೇಗಲ ದೊಡ್ಡಿ ಶೇಖರ, ಪಣ್ಣೆ ದೊಡ್ಡಿ ಸುಧಾಕರ ಇದ್ದರು.