ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಬೆಳಗಾವಿಯ ಸುವರ್ಣ ಸೌಧದಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಹಾಗೂ ಶಿಕ್ಷಣ ಆಯುಕ್ತರು ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಅನುದಾನಿತ ಶಾಲೆಯ ಶಿಕ್ಷಕರ ವೇತನ, ನೇಮಕಾತಿ, ಬಡ್ತಿ (ಟೈಮ್ ಬಾಂಡ್) ನೀಡುವಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ನಡೆದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಚಿದಾನಂದ್ ಎಂ ಗೌಡ ಅವರು ಭಾಗವಹಿಸಿ, ನೌಕರರ ಸೇವಾ ಸಮಸ್ಯೆಗಳ ಸಂಬಂಧಿಸಿದಂತೆ ಸಚಿವರಲ್ಲಿ ಚರ್ಚಿಸಿದರು.ರಾಜ್ಯದ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ವೇತನ ಹೆಚ್ಚಿಸುವ ಕುರಿತು, ಎಸ್ ಡಿ ಎ ಹಾಗೂ ಅಟೆಂಡರ್ ಹುದ್ದೆಯನ್ನು ತುಂಬಿಕೊಳ್ಳಲು ಅನುಮತಿ ನೀಡುವುದು, ನಿವೃತ್ತಿಯಿಂದ ತೆರವಾಗಿರುವ ಹುದ್ದೆಗಳನ್ನು ತುಂಬುವುದು ಹಾಗೂ ಓಪಿಎಸ್ ಪಿಂಚಣಿ ಸೌಲಭ್ಯ ನೀಡುವುದರ ಕುರಿತಂತೆ ಶಿಕ್ಷಣ ಸಚಿವರ ಗಮನಕ್ಕೆ ತಂದರು. ಸಮಸ್ಯೆಗಳನ್ನು ಆಲಿಸಿದ ಶಿಕ್ಷಣ ಸಚಿವರು ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಎಸ್.ವಿ ಸಂಕನೂರ್, ಹನುಮಂತ ನಿರಾಣಿ, ಧನಂಜಯ್ ಸರ್ಜಿ, ಡಿ.ಟಿ.ಶ್ರೀನಿವಾಸ್, ಎಸ್.ಎಲ್ ಭೋಜೇಗೌಡ ಸೇರಿದಂತೆ ಅನೇಕ ಶಾಸಕರು ಹಾಗೂ ಅಧಿಕಾರಿಗಳು ಹಾಜರಿದ್ದರು.