ಬಿಜೆಪಿಗೆ ಮರಳಿ ಸೇರುವ ಕುರಿತು ರಾಷ್ಟ್ರಭಕ್ತರ ಬಳಗ ಸಂಘಟನೆಯ ನಗರದ ಪದಾಧಿಕಾರಿಗಳು ಸೇರಿದಂತೆ 50 ಪ್ರಮುಖರೊಂದಿಗೆ ಮೂರು ಹಂತಗಳಲ್ಲಿ ಚರ್ಚೆ ನಡೆಸಿದ್ದೇನೆ. ಸರಿಯಾದ ವ್ಯಕ್ತಿಗಳು ಭರವಸೆ ನೀಡಿದರೆ ಮಾತ್ರ ಚುನಾವಣೆಗೆ ಸ್ಪರ್ಧಿಸುವಂತೆ ಅವರೆಲ್ಲರೂ ಸಲಹೆ ನೀಡಿದ್ದಾರೆ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಕೂಡ ಪಕ್ಷಕ್ಕೆ ಮರಳುವಂತೆ ಆಹ್ವಾನಿಸಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬಿಜೆಪಿಗೆ ಮರಳಿ ಸೇರುವ ಕುರಿತು ರಾಷ್ಟ್ರಭಕ್ತರ ಬಳಗ ಸಂಘಟನೆಯ ನಗರದ ಪದಾಧಿಕಾರಿಗಳು ಸೇರಿದಂತೆ 50 ಪ್ರಮುಖರೊಂದಿಗೆ ಮೂರು ಹಂತಗಳಲ್ಲಿ ಚರ್ಚೆ ನಡೆಸಿದ್ದೇನೆ. ಸರಿಯಾದ ವ್ಯಕ್ತಿಗಳು ಭರವಸೆ ನೀಡಿದರೆ ಮಾತ್ರ ಚುನಾವಣೆಗೆ ಸ್ಪರ್ಧಿಸುವಂತೆ ಅವರೆಲ್ಲರೂ ಸಲಹೆ ನೀಡಿದ್ದಾರೆ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಕೂಡ ಪಕ್ಷಕ್ಕೆ ಮರಳುವಂತೆ ಆಹ್ವಾನಿಸಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನನ್ನ ಜೀವನಕ್ಕೆ ಮಾರ್ಗದರ್ಶನ ನೀಡಿದ್ದು ಸಂಘ ಪರಿವಾರ. ಈ ಆರ್‌ಎಸ್‌ಎಸ್ ನ ಪ್ರಮುಖರು ಬಂದು ಬಿಜೆಪಿಗೆ ಸೇರುವಂತೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ 50 ಪ್ರಮುಖರೊಂದಿಗೆ ಚರ್ಚೆ ನಡೆಸಿದ್ದೇನೆ. ಈ ಬಾರಿ ಸರಿಯಾದ ವ್ಯಕ್ತಿಗಳು ಭರವಸೆ ನೀಡಿದರೆ ಮಾತ್ರ ಚುನಾವಣೆಯಲ್ಲಿ ನಿಂತು ಗೆದ್ದು ಬನ್ನಿ. ಯಾರ್ಯಾರೋ ಹೇಳಿದರು ಎಂದು ಹೋಗಿ, ಕಳೆದ ಬಾರಿಯಂತೆ ಆಗುವುದು ಬೇಡ ಎಂದು ಇವರೆಲ್ಲರೂ ಸಲಹೆ ನೀಡಿದ್ದಾರೆ ಎಂದರು.
ಟಿಕೆಟ್ ಸಂಬಂಧ ನಾನು ಇದುವರೆಗೆ ಯಾರ ಜೊತೆಗೂ ಚರ್ಚಿಸಿಲ್ಲ. ಚುನಾವಣೆಗೆ ಇನ್ನೂ ಒಂದುವರೆ ವರ್ಷ ಇದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದರೆ ಪಕ್ಷ ಬಿಟ್ಟು ಹೋದ, ಪಕ್ಷ ಕಟ್ಟಿದವರೆಲ್ಲರೂ ಪಕ್ಷಕ್ಕೆ ವಾಪಾಸ್ ಬರಬೇಕು. ಆಗ 2028ರಲ್ಲಿ ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯ ಎಂದರು.ಪವನ್ ಕಲ್ಯಾಣ ಪಕ್ಷದಿಂದ ಆಫರ್: ಕಳೆದ ವಾರ ಪವನ್ ಕಲ್ಯಾಣ್ ಅವರು ತಮ್ಮ ಪಕ್ಷ ಸೇರಿ, ರಾಜ್ಯದ ಉಸ್ತುವಾರಿ ವಹಿಸಿಕೊಳ್ಳುವಂತೆ ಅವರ ಪಕ್ಷದ ಶಾಸಕರೊಬ್ಬರ ಮೂಲಕ ಹೇಳಿ ಕಳುಹಿಸಿದರು. ಪವನ್ ಕಲ್ಯಾಣ ಅವರ ಪಕ್ಷ ಕೂಡ ಎನ್‌ಡಿಎ ಅಂಗ ಪಕ್ಷವಾಗಿದ್ದು, ಹಿಂದುತ್ವಕ್ಕೆ ಒತ್ತು ನೀಡುತ್ತಿದೆ. ಆದರೆ ಬಿಜೆಪಿ ನನ್ನ ಮಾತೃ ಪಕ್ಷ. ನಾನು ನನ್ನ ಕೊನೆ ಉಸಿರು ಇರುವವರೆಗೂ ಬಿಜೆಪಿಯಲ್ಲಿ ಮಾತ್ರ ಇರುತ್ತೇನೆ. ಒಂದು ಪಕ್ಷ ಬಿಜೆಪಿಗೆ ಮರಳಲು ಸಾಧ್ಯವೇ ಆಗದಿದ್ದರೆ ನಾನು ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ, ಗೆದ್ದು ಬಳಿಕ ಬಿಜೆಪಿ ಸೇರಿಕೊಳ್ಳುತ್ತೇನೆ. ನನ್ನ ಜೊತೆ ಇರುವ ಕಾರ್ಯಕರ್ತರನ್ನು ಮತ್ತೆ ಬಿಜೆಪಿ ಸೇರಿಸುವುದು ಕೂಡ ನನ್ನ ಆಸೆ ಎಂದು ಹೇಳಿದರು.
ಬಿಜೆಪಿಗೆ ಸೇರಿಕೊಳ್ಳಬೇಕೆಂದು ರಾಜ್ಯದ ಸಾವಿರಾರು ಕಾರ್ಯಕರ್ತರು ಕೇಳಿಕೊಳ್ಳುತ್ತಿದ್ದಾರೆ. ನಾನು ಮುಂಬರುವ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಸ್ಪರ್ಧೆ ಮಾಡುತ್ತೇನೆ. ಯಾರೇ ಬಂದು ಹೇಳಿದರೂ ಚುನಾವಣೆಯಿಂದ ದೂರ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು ನಾನು ಸ್ಪರ್ಧಿಸುತ್ತೇನೋ ಅಥವಾ ಕಾಂತೇಶ್ ಸ್ಪರ್ಧಿಸುತ್ತಾರೋ ಎಂಬುದು ಬಳಿಕ ನಿರ್ಧಾರವಾಗುತ್ತದೆ ಎಂದರು.ಈಶ್ವರಪ್ಪಗೆ ಘರ್ ವಾಪಾಸಿಗೆ ವಿಜಯೇಂದ್ರ ಆಫರ್: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕೆ.ಈ.ಕಾಂತೇಶ್ ಅವರನ್ನು ಭೇಟಿ ಮಾಡಿದ್ದು, ಬಿಜೆಪಿಗೆ ಮರಳುವಂತೆ ಕರೆದಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಈ ಮೊದಲು ಅವರೇ ಕರೆದು ಮೋಸ ಮಾಡಿದ್ದಾರೆ. ಮತ್ತೆ ಮೋಸ ಮಾಡ್ತೀನಿ ಅಂದ್ರೆ ಹೋಗ್ತಾರಾ? ಎಂದ ಅವರು, ಈ ಹಿಂದೆ ಆದ ತಪ್ಪು ಮತ್ತೆ ಆಗಲ್ಲ, ಬನ್ನಿ ಎಂದು ವಿಜಯೇಂದ್ರ ಹೇಳಿದ್ದು, ನನಗೆ ನಂಬಿಕೆ ಇದೆ ಎಂದರು.ನಾನು ಈಗಲೂ ವಿಜಯೇಂದ್ರ ಅವರನ್ನು ನಂಬುತ್ತೇನೆ, ಇಲ್ಲ ಅಂತ ಹೇಳಲ್ಲ. ಆದರೆ ಇನ್ನೂ ಸಮಯ ಇದೆ. ನಮ್ಮ ಹಿತೈಷಿಗಳು ಸಾಕಷ್ಟು ಸಲಹೆ ಕೊಡುತ್ತಿದ್ದಾರೆ. ರಾಜ್ಯದಿಂದಲೂ ಸಲಹೆ ಬರುತ್ತಿದೆ. ನಂತರ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಉಗ್ರಗಾಮಿಯಿಂದ ನೂರಾರು ಜನರ ಜೀವ ಉಳಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸದ ಕುರಿತು ಕಾಂಗ್ರೆಸ್ ನಾಯಕರು ಮೌನ ವಹಿಸಿರುವುದು ವಿಷಾದನೀಯ. ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದಿಂದಲೇ ಕಾಂಗ್ರೆಸ್ ಈ ಪರಿಸ್ಥಿತಿಗೆ ತಲುಪಿದೆ. ಬಹುಸಂಖ್ಯಾತ ಹಿಂದೂಗಳು ಜಾಗೃತರಾಗಿದ್ದು, ಇಂತಹ ರಾಜಕಾರಣ ಯಾವುದೇ ಕಾರಣಕ್ಕೂ ಯಶಸ್ವಿಯಾಗುವುದಿಲ್ಲ ಎಂದರು.ದುಬೈನಿಂದ ಇಸ್ರೇಲ್‌ಗೆ ತೆರಳುತ್ತಿದ್ದ ದುಬೈ ವಿಮಾನದಲ್ಲಿ ಸ್ಮಿತ್ ಮಚ್ಚರ್, ಉಗ್ರಗಾಮಿಯೂ ಆದ ಸಹ ಪೈಲಟ್‌ನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದರೂ, 172 ಪ್ರಯಾಣಿಕರ ಜೀವ ರಕ್ಷಿಸಲು ಧೈರ್ಯ, ಸಮಯಪ್ರಜ್ಞೆ ಹಾಗೂ ಕರ್ತವ್ಯನಿಷ್ಠೆ ತೋರಿದ್ದು, ಇವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಗೋಷ್ಠಿಯಲ್ಲಿ ಕೆ.ಈ.ಕಾಂತೇಶ್, ಈ. ವಿಶ್ವಾಸ್, ಮೋಹನ್ ಜಾಧವ್, ಗೋವಿಂದಪ್ಪ, ನಾಗರಾಜ್, ರಾಜಯ್ಯ, ಶ್ರೀಕಾಂತ್ ಇದ್ದರು.