ಸಾರಾಂಶ
ಕ್ಷೇತ್ರ ವ್ಯಾಪ್ತಿಯಲ್ಲಿ 234 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 160 ಶಿಕ್ಷಕರ ಹುದ್ದೆ ಖಾಲಿ ಇರುವುದು ನಮ್ಮ ಗಮನಕ್ಕೆ ಬಂದಿದೆ. ಖಾಲಿ ಇರುವ ಶಿಕ್ಷಕರು ಹುದ್ದೆ ಭರ್ತಿ ಮಾಡುವ ಸಂಬಂಧ ತಾವು ಶಿಕ್ಷಣ ಸಚಿವರೊಂದಿಗೆ ಚರ್ಚೆ ನಡೆಸುವುದರೊಂದಿಗೆ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು.
ಕನ್ನಡಪ್ರಭ ವಾರ್ತೆ ಮದ್ದೂರು
ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳಿಗೆ ಶೀಘ್ರ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವರೊಂದಿಗೆ ಚರ್ಚೆ ನಡೆಸುವುದಾಗಿ ಶಾಸಕ ಕೆ.ಎಂ.ಉದಯ್ ಸೋಮವಾರ ಹೇಳಿದರು.ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನವಿಲೆ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ 29 ಲಕ್ಷ ರು. ವೆಚ್ಚದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ 234 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 160 ಶಿಕ್ಷಕರ ಹುದ್ದೆ ಖಾಲಿ ಇರುವುದು ನಮ್ಮ ಗಮನಕ್ಕೆ ಬಂದಿದೆ. ಖಾಲಿ ಇರುವ ಶಿಕ್ಷಕರು ಹುದ್ದೆ ಭರ್ತಿ ಮಾಡುವ ಸಂಬಂಧ ತಾವು ಶಿಕ್ಷಣ ಸಚಿವರೊಂದಿಗೆ ಚರ್ಚೆ ನಡೆಸುವುದರೊಂದಿಗೆ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಸರ್ಕಾರಿ ಶಾಲೆಗಳತ್ತ ಹೆಚ್ಚಾಗಿ ಮಕ್ಕಳನ್ನು ಆಕರ್ಷಣೆ ಮಾಡಬೇಕೆಂಬ ತಮ್ಮ ಕೆ.ಎಂ.ಉದಯ್ ಚಾರಿಟಬಲ್ ಟ್ರಸ್ಟ್‌ನಿಂದ ಕಳೆದ ಶೈಕ್ಷಣಿಕ ಸಾಲಿನಲ್ಲಿ ಶಾಲಾ ಶುಲ್ಕ ಭರಿಸುವ ಜೊತೆಗೆ ಬ್ಯಾಗ್ ಮತ್ತಿತರ ಲೇಖನ ಸಾಮಗ್ರಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿತ್ತು. ಈ ವರ್ಷವು ವಿತರಣೆ ಮಾಡಲಾಗುವುದು ಎಂದರು.ಶಿಥಿಲಗೊಂಡ ಸರ್ಕಾರಿ ಶಾಲೆಗಳ ಕೊಠಡಿಗಳನ್ನು ಸರ್ಕಾರ ಅನುದಾನದಲ್ಲಿ ಶೀಘ್ರ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ಬಿಇಒ ಎಸ್.ಬಿ.ಧನಂಜಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಸ್.ದೇವರಾಜು, ಮುಖ್ಯ ಶಿಕ್ಷಕರಾದ ಫಕ್ರುದ್ದೀನ್, ಮಂಜುನಾಥ್, ತಾಲೂಕು ಸೊಸೈಟಿ ನಿರ್ದೇಶಕ ಶಂಕರಲಿಂಗೇಗೌಡ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರವಿ, ಮುಖಂಡರಾದ ಲಿಂಗರಾಜು, ಪ್ರಸಾದ್ ಇದ್ದರು.ಜಾತಿಗಣತಿ ಲೋಪ ಸರಿಪಡಿಸಿ ಅನುಷ್ಠಾನಕ್ಕಾಗಿ ಸಿಎಂಗೆ ಮನವಿ: ಕೆ.ಎಂ.ಉದಯ್ಮದ್ದೂರು: ಜಾತಿಗಣತಿ ಲೋಪ ಸರಿಪಡಿಸಿದ ನಂತರ ಅನುಷ್ಠಾನಕ್ಕೆ ತರುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಸೋಮವಾರ ಹೇಳಿದರು.
ನವಿಲೆ ಗ್ರಾಮದಲ್ಲಿ ಜಾತಿಗಣತಿ ವಿಚಾರದಲ್ಲಿ ವಿವಾದ ಕುರಿತು ಪ್ರತಿಕ್ರಿಯಿಸಿ, ಜಾತಿಗಣತಿ ಮಾಡಿ ಈಗಾಗಲೇ ಹತ್ತು ವರ್ಷ ಸಂದಿದೆ. ಇದರಲ್ಲಿ ಕೆಲವು ಲೋಪ ದೋಷಗಳು ಇವೆ ಎಂದು ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಲೋಪ ದೋಷಗಳನ್ನು ಸರಿಪಡಿಸಿದ ನಂತರ ಜಾರಿಗೆ ತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಗಿದೆ ಎಂದರು.ಜಾತಿ ಗಣತಿಯಲ್ಲಿ ಎಲ್ಲರಿಗೂ ನ್ಯಾಯ ಒದಗಿಸಲಾಗುವುದು, ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಕೆಲವೊಂದು ಲೋಪದೋಷ ಸರಿಪಡಿಸಿ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ ಎಂದರು.