ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಇಂದು ಅನೇಕರು ಮದುಮೇಹ ಮತ್ತು ರಕ್ತದೊತ್ತಡದಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಹೇಳಿದರು.ತಿಕೋಟಾದ ಪ್ರಗತಿಪರ ರೈತ, ಕೃಷಿ ಪಂಡಿತ ರಾಜ್ಯ ಪ್ರಶಸ್ತಿ ಪುರಸ್ಕೃತ ಸಿದ್ದಪ್ಪ ಬೂಸಗೊಂಡ ತಮ್ಮ ಇಬ್ಬರ ಮಕ್ಕಳ ಮದುವೆಯಲ್ಲಿ ಏರ್ಪಡಿಸಿದ ಸಿರಿಧಾನ್ಯ ಕೃಷಿ ಚಿಂತನಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮದುವೆ ಎಂದರೆ ದುಂದುವೆಚ್ಚ ಜನಾಕರ್ಷಣೆಗಾಗಿ ಸಿಕ್ಕಾಪಟ್ಟೆ ಆಹಾರ ಪದಾರ್ಥಗಳನ್ನು ಬಡಿಸುವುದು ಟ್ರೆಂಡ್ ಆಗಿದೆ. ಈ ಆಹಾರ ಪದಾರ್ಥಗಳು ರುಚಿ ಇದ್ದರೂ ಆರೋಗ್ಯಕ್ಕೆ ಹಾನಿಕಾರಕ ಎಂದರು.ಪ್ರಗತಿಪರ ರೈತ ಸಿದ್ದಪ್ಪ ಬೂಸಗೊಂಡ ಅವರು ತಮ್ಮ ಮಕ್ಕಳ ಮದುವೆಯಲ್ಲಿ ಸಿರಿಧಾನ್ಯ ಚಿಂತನಾಗೋಷ್ಠಿ ಹಾಗೂ ಸಿರಿಧಾನ್ಯಗಳ ಆಹಾರ ಪದಾರ್ಥಗಳನ್ನು ಉಣಬಡಿಸಿ ಸಮಾಜಕ್ಕೆ ಸಿರಿಧಾನ್ಯದ ಪ್ರಾಮುಖ್ಯತೆ ಸಂದೇಶ ನೀಡಿದ್ದಾರೆ ಎಂದು ಶ್ಲಾಘಿಸಿದರು.ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ ವಿಜ್ಞಾನಿ ಡಾ.ಬಿ.ಸಿ.ಸಂಗಪ್ಪ ಮಾತನಾಡಿ, ಬರ ಪ್ರದೇಶದಲ್ಲೂ ಬೆಳೆಯುವ ಸಿರಿಧಾನ್ಯ ಹೆಚ್ಚು ಪೌಷ್ಟಿಕತೆ ಹಾಗೂ ನಾರಿನಾಂಶ ಒಳಗೊಂಡಿವೆ. ಸಿದ್ದಪ್ಪ ಬೂಸಗೊಂಡ ಅವರು ಮಕ್ಕಳ ಮದುವೆಯಲ್ಲಿ ಸಿರಿಧಾನ್ಯ ವಿಚಾರಗೋಷ್ಠಿ ಏರ್ಪಡಿಸಿದ್ದಲ್ಲದೇ ಸಿರಿಧಾನ್ಯ ಒಳಗೊಂಡ ಊಟದ ವ್ಯವಸ್ಥೆ ಮಾಡಿಸಿದ್ದು ಒಳ್ಳೆಯ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮಹಿಳಾ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಓಂಕಾರ ಕಾಕಡೆ ಮಾತನಾಡಿ, ಸಿರಿಧಾನ್ಯ ಕಲ್ಯಾಣೋತ್ಸವ ಒಂದು ವಿಶಿಷ್ಟ ಮತ್ತು ವಿನೂತನ ಕಾರ್ಯಕ್ರಮ. ಸಿರಿಧಾನ್ಯಗಳ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಹಳ್ಳಮನೆಯ ಬಾಣಸಿಗರು ಮಲ್ಲಿಕಾರ್ಜುನ ಹಟ್ಟಿ ನೇತೃತ್ವದಲ್ಲಿ ಸಂಪೂರ್ಣವಾಗಿ ಸಿರಿಧಾನ್ಯಗಳಿಂದಲೇ ಸಿದ್ಧಪಡಿಸಿದ ಭಕ್ಷ್ಯ ಭೋಜನ ವ್ಯವಸ್ಥೆಯನ್ನು ಭೂಸಗೊಂಡ ಪರಿವಾರದವರು ಏರ್ಪಡಿಸಿದ್ದರು. ಇದೊಂದು ಹೊಸ ಅನುಭವ ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಸಿರಿಧಾನ್ಯ ಅಡುಗೆ ಹಾಗೂ ಸಿರಿಧಾನ್ಯ ಬೇಸಾಯ ಕ್ರಮಗಳ ಕುರಿತು ಹೈದ್ರಾಬಾದ ಸಿರಿಧಾನ್ಯ ಸಂಸ್ಥೆಯಿಂದ ಪ್ರಕಟಗೊಂಡ ಪುಸ್ತಕ ಬಿಡುಗಡೆಗೊಳಿಸಲಾಯಿತು. ಸಿರಿಧಾನ್ಯ ಗೋಷ್ಠಿಯಲ್ಲಿ ಸಾವಯವ ಕೃಷಿಕರಾದ ಭೀಮನಗೌಡ ಪಾಟೀಲ, ಎಸ್.ಟಿ.ಪಾಟೀಲ, ಮಲ್ಲೇಶಪ್ಪ ಕಲ್ಯಾಣಶೆಟ್ಟಿ, ಕೆ.ವಿ.ಪಾಟೀಲ, ಜಿ.ಎಸ್.ಬೂಸಗೊಂಡ, ಬಿ.ಎಂ.ದೇವನಾಯಕ, ಅಪ್ಪಾಸಾಹೇಬ ಯರನಾಳ ಸೇರಿದಂತೆ ಮುಂತಾದವರು ಇದ್ದರು.ಬಾಕ್ಸ್....
ಬನ್ನಿ ಆಹಾರ ಪದ್ಧತಿ ಬದಲಿಸೋಣಮದುವೆಯಲ್ಲಿ ಸಿರಿಧಾನ್ಯ ವಿಚಾರಗೋಷ್ಠಿ ಏರ್ಪಡಿಸುವುದರ ಜತೆಗೆ ಬಂದವರಿಗೆಲ್ಲ ಸಿರಿಧಾನ್ಯಗಳಿಂದ ತಯಾರಿಸಿದ ಊಟದ ಸವಿಯನ್ನೂ ಉಣಬಡಿಸಿದರು. ಆಹ್ವಾನ ಪತ್ರಿಕೆಯಲ್ಲೂ ಬನ್ನಿ ಆಹಾರ ಪದ್ಧತಿ ಬದಲಾಯಿಸೋಣ. ಸಾವಯವ, ಸಿರಿಧಾನ್ಯ ತಿನ್ನೋಣ ಎಂಬ ಸಂದೇಶವನ್ನೂ ಮುದ್ರಿಸಿದ್ದರು. ಮದುವೆ ಊಟದಲ್ಲಿ ಸಿರಿಧಾನ್ಯಗಳಾದ ನವಣೆ ಉಪ್ಪಿಟ್ಟು, ಕೊರಲೆ ಮೈಸೂರಪಾಕ್, ರಾಗಿ ಕಲಾಕಂಡ, ನವಣೆ ಬರ್ಫಿ, ಸಾಮೆ ಪಾಯಸ, ಜೋಳದರೊಟ್ಟಿ, ಸಜ್ಜೆರೊಟ್ಟಿ, ಸಾವಯವ ಹುರುಳಿ ಪಲ್ಯೆ, ಹೆಸರು ಪಲ್ಯೆ, ಕೊರಲೆ ಬಜ್ಜಿ, ಊದುಲು ಬಿಸಿಬೇಳೆ ಬಾತ್, ಊದುಲು, ಹಾರಕ ಮೊಸರನ್ನ, ನವಣೆ ಸೇವು ಇದ್ದವು. ಸುಮಾರು ೧೫೦೦ ಜನಕ್ಕೆ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಪದಾರ್ಥಗಳಿರುವ ಊಟದ ವ್ಯವಸ್ಥೆ ಮಾಡಿಸಿದ್ದು ಜನರ ಗಮನ ಸೆಳೆಯಿತು.
----------ಬಾಕ್ಸ್....ಮದುವೆಯಲ್ಲಿ ಕೃಷಿ ಚಿಂತನಾಗೋಷ್ಠಿಅದ್ಧೂರಿ, ಆಡಂಭರ, ವೈಭವ, ವೆಚ್ಚದಾಯಕ ವಿವಾಹಗಳೇ ಸಾಮಾನ್ಯವಾಗಿರುವ ಇಂದಿನ ದಿನಮಾನಗಳಲ್ಲಿ ಅತ್ಯಪರೂಪ ಎನ್ನುವಂತೆ ಪ್ರಗತಿಪರ ರೈತನ ಮಕ್ಕಳ ಮದುವೆಯಲ್ಲಿ ಸಾವಯವ ಕೃಷಿ, ಸಿರಿಧಾನ್ಯ ಆಹಾರ ಪದ್ಧತಿ ಕುರಿತು ಜಾಗೃತಿ, ಚಿಂತನಾಗೋಷ್ಠಿ ಜತೆಗೆ ಮದುವೆಗೆ ಬಂದವರಿಗೆಲ್ಲ ಸಿರಿಧಾನ್ಯದಿಂದ ತಯಾರಿಸಿದ ಭೂರಿ ಭೋಜನ ಬಡಿಸುವ ಮೂಲಕ ಜಿಲ್ಲೆಯಲ್ಲಿ ಪ್ರಗತಿಪರ ರೈತರೊಬ್ಬರಿಂದ ಅಪರೂಪದ ಮದುವೆ ಸಮಾರಂಭ ಸಾಕ್ಷಿಯಾಯಿತು. ತಿಕೋಟಾದ ಪ್ರಗತಿಪರ ರೈತ, ಕೃಷಿ ಪಂಡಿತ ರಾಜ್ಯ ಪ್ರಶಸ್ತಿ ಪುರಸ್ಕೃತ ಸಿದ್ದಪ್ಪ ಬೂಸಗೊಂಡ ತಮ್ಮ ಇಬ್ಬರ ಮಕ್ಕಳ ಮದುವೆಯಲ್ಲಿ ಸಿರಿಧಾನ್ಯ ಕೃಷಿ ಚಿಂತನಾಗೋಷ್ಠಿ ಏರ್ಪಡಿಸಿದ್ದರು. ಸಿದ್ದಪ್ಪ ಬೂಸಗೊಂಡ ಅವರು ಸ್ವತಃ ಸಿರಿಧಾನ್ಯ ಬೆಳೆಯುತ್ತಿದ್ದು, ಮಕ್ಕಳ ಮದುವೆಯಲ್ಲಿ ಸಮಾಜಕ್ಕೆ ವಿಶೇಷವಾಗಿ ರೈತಾಪಿ ವರ್ಗಕ್ಕೆ ಏನಾದರೂ ಸಂದೇಶ ನೀಡಬೇಕೆಂಬ ಚಿಂತನೆಯೊಂದಿಗೆ ಮದುವೆ ಸಮಾರಂಭದ ವೇದಿಕೆಯಲ್ಲೇ ಸಿರಿಧಾನ್ಯ ಕಲ್ಯಾಣೋತ್ಸವ ಕೃಷಿ ಚಿಂತನಾಗೋಷ್ಠಿ ನಡೆಸಿ ಗಮನ ಸೆಳೆದರು. ಬೂಸಗೊಂಡ ಅವರ ಮಕ್ಕಳಿಗೂ ಕೃಷಿ ಬಗ್ಗೆ ಆಸಕ್ತಿ ಇರೋದರಿಂದ ತಂದೆಯ ಆಶಯದಂತೆ ತಮ್ಮ ಮದುವೆಯಲ್ಲಿ ವಿಚಾರಗೋಷ್ಠಿಗೆ ಒಪ್ಪಿದ್ದರು.