ಬೇರೆ ಯಾವುದೇ ಬೆಳೆಗಳಿಗೆ ಇಲ್ಲದಷ್ಟು ರೋಗಗಳು ಅಡಕೆ ಬೆಳೆಯನ್ನು ಬಾಧಿಸುತ್ತಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ಇದರ ತೀವ್ರತೆ ಹೆಚ್ಚಿದೆ. ಪ್ರಸ್ತುತ ಅಡಕೆ ಬೆಳೆಗಾರರು ಅತ್ಯಂತ ಸಂಕಷ್ಟಕ್ಕೆ ತಲುಪಿದ್ದು ರೈತರ ವಲಯದಲ್ಲಿ ಸೂತಕದ ಛಾಯೆ ಆವರಿಸಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತೀರ್ಥಹಳ್ಳಿ: ಬೇರೆ ಯಾವುದೇ ಬೆಳೆಗಳಿಗೆ ಇಲ್ಲದಷ್ಟು ರೋಗಗಳು ಅಡಕೆ ಬೆಳೆಯನ್ನು ಬಾಧಿಸುತ್ತಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ಇದರ ತೀವ್ರತೆ ಹೆಚ್ಚಿದೆ. ಪ್ರಸ್ತುತ ಅಡಕೆ ಬೆಳೆಗಾರರು ಅತ್ಯಂತ ಸಂಕಷ್ಟಕ್ಕೆ ತಲುಪಿದ್ದು ರೈತರ ವಲಯದಲ್ಲಿ ಸೂತಕದ ಛಾಯೆ ಆವರಿಸಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಆಗುಂಬೆ ಗ್ರಾಪಂ ಕಚೇರಿ ಸಭಾಂಗಣದಲ್ಲಿ ತೋಟಗಾರಿಕಾ ಇಲಾಖೆ, ಕೆಳದಿ ಶಿವಪ್ಪ ನಾಯ್ಕ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ,ತೋಟಗಾರಿಕಾ ಸಂಶೋಧನಾ ಕೇಂದ್ರ, ಕೃಷಿಕ ಸಮಾಜ ಮತ್ತು ಆಗುಂಬೆ ಗ್ರಾಪಂಯಿಂದ ಆಯೋಜಿಸಲಾಗಿದ್ದ ಎಲೆ ಚುಕ್ಕಿರೋಗ ನಿಯಂತ್ರಣ ಸಂಬಂಧ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಅಡಕೆ ಬೆಳೆಗೆ ತಗುಲಿರುವ ರೋಗದ ಬಾಧೆಯಿಂದ ಇದ್ದು ಆತ್ಮ ವಿಶ್ವಾಸವನ್ನೇ ಕಳೆದುಕೊಂಡಿರುವ ಬೆಳೆಗಾರರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ರೋಗಗಳ ನಿಯಂತ್ರಣಕ್ಕೆ ಸಂಬಂಧಿಸಿ ಕೃಷಿ ವಿಜ್ಞಾನಿಗಳು ಹೆಚ್ಚಿನ ಕಾಳಜಿಯಿಂದ ಕಾರ್ಯನಿರ್ವಹಿಸುವ ಅನಿವಾರ್ಯತೆ ಇದೆ. ರೋಗಗಳ ಸಂಶೋಧನೆಗೆ ಅಗತ್ಯ ಅನುದಾನವೂ ಬಂದಿದೆ. ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ತೀವ್ರ ಗತಿಯ ಸಂಶೋಧನೆ ಮೂಲಕ ಪರಿಹಾರ ರೂಪಿಸಲು ಮುಂದಾಗಬೇಕಿದೆ ಎಂದರು.ಇನ್ನೊಂದು ಬಜೆಟ್ ಹತ್ತಿರವಾಗಿದ್ದರೂ ರಾಜ್ಯ ಸರ್ಕಾರ ಕಳೆದ ಬಜೆಟ್ಟಿನಲ್ಲಿ ಸಂತ್ರಸ್ತ ಅಡಕೆ ಬೆಳೆಗಾರರಿಗೆ ವಿತರಿಸಲು ಕಾದಿರಿಸಿದ್ದ ಹಣ ಕೂಡಾ ಪೂರ್ತಿಯಾಗಿ ಬಿಡುಗಡೆಯಾಗಿಲ್ಲಾ. ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಿದೆ. ಈಚೆಗೆ ಶ್ರೀಲಂಕಾದಲ್ಲಿ ನಡೆದ ಜಾಗತಿಕ ಮಟ್ಟದ ಸಭೆಯಲ್ಲಿ ಅಡಕೆ ನಿರ್ಬಂಧದ ಬಗ್ಗೆಯೂ ಚರ್ಚೆ ನಡೆದಿದೆ. ಮಾರುಕಟ್ಟೆಯಲ್ಲಿ ಅಡಕೆ ಧಾರಣೆ ಏರಿದ ಅವಧಿಯಲ್ಲೇ ಅಡಕೆಗೆ ಸಮಸ್ಯೆಗಳು ಎದುರಾಗುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ ಎಂದು ಹೇಳಿದರು.ಕೃಷಿ ವಿದ್ಯಾಲಯದ ವಿಜ್ಞಾನಿ ಡಾ.ಜಿ.ಗಂಗಾಧರ ನಾಯ್ಕ್ ರೋಗದ ನಿಯಂತ್ರಣದ ಕುರಿತು ವಿವರಣೆ ನೀಡಿ, ಸಂಶೋಧನೆಗೆ ಸಂಬಂಧಿಸಿ ಬೇರೆಲ್ಲಾ ಬೆಳೆಗಳಿಗಿಂತ 12 ಬಗೆಯ ರೋಗಗಳಿರುವ ಅಡಕೆಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಇದರಲ್ಲಿ ಶೇ 80% ಯಶಸ್ವಿಯಾಗುವ ಭರವಸೆ ಇದೆ. ಹಿಂದಿನಿಂದಲೂ ಇರುವ ಎಲೆ ಚುಕ್ಕಿ ರೋಗ ಅಡಕೆಗೆ ಮಾತ್ರವಲ್ಲದೇ ಬಾಳೆ, ಮಾವು, ಪಪಾಯ ಮುಂತಾದ ಬೆಳೆಗೂ ಇದರ ಬಾಧೆ ಇದೆ. 9 ತಿಂಗಳು ಬದುಕಿರುವ ರೋಗಾಣು ಗಾಳಿಯಲ್ಲಿ ಹರಡುವ ಆತಂಕವಿದೆ. ರೈತರು ಔಷಧಿ ಸಿಂಪರಣೆ ಮತ್ತು ರಸಗೊಬ್ಬರ ಖರೀದಿ ಮುಂತಾದ ವಿಚಾರಗಳಲ್ಲಿ ಮಾರುಕಟ್ಟೆಯ ವಂಚನೆಯ ಜಾಲಕ್ಕೆ ಬಲಿಯಾಗದೇ ತಜ್ಞರ ಮಾಹಿತಿಯನ್ನು ಪಡೆಯುವುದು ಅಗತ್ಯ ಎಂದು ಹೇಳಿದರು.ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಕೆಸ್ತೂರು ಮಂಜುನಾಥ್ ಮಾತನಾಡಿದರು.
ಮ್ಯಾಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್ ಮಾತನಾಡಿದರು.ಸಭೆಯಲ್ಲಿ ಆಗುಂಬೆ ಗ್ರಾಪಂ ಅಧ್ಯಕ್ಷ ಎಂ.ಎಚ್.ಜಗದೀಶ್, ಸದಸ್ಯ ಶಶಾಂಕ ಹೆಗ್ಡೆ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಹೊಸ್ಮನೆ ಸತೀಶ್, ಕೃಷಿ ಸಂಶೋದನಾ ಕೇಂದ್ರದ ಡಾ.ಜಿ.ರವಿರಾಜ ಶೆಟ್ಟಿ, ತೋಟಗಾರಿಕಾ ಇಲಾಖೆ ಜಂಟಿ ನಿರ್ದೆಶಕ ಸಂಜಯ್, ಸಹಾಯಕ ನಿರ್ದೆಶಕ ಸೋಮಶೇಕರ್, ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಪ್ರವೀಣ್, ಮ್ಯಾಮ್ಕೋಸ್ ನಿರ್ದೆಶಕ ಹಸಿರುಮನೆ ನಂದನ್ ಮುಂತಾದವರು ಇದ್ದರು.