ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಎಂ.ಇ.ಎಸ್. ಪುಂಡಾಟಿಕೆ ಹಾಗೂ ಇನ್ನಿತರ ಜ್ವಲಂತ ಸಮಸ್ಯಗಳ ವಿರುದ್ಧ ಕನ್ನಡಪರ ಸಂಘಟನೆಗಳು ನೀಡಿದ್ದ ಕರ್ನಾಟಕದ ಬಂದ್ ಕರೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.ಎಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಬಂದ್ ಬೆಂಬಲಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಎಂಇಎಸ್ ಸಂಘಟನೆಯ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು. ಇತರೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ದೂರ ಉಳಿದಿದ್ದರು. ನಗರದಲ್ಲಿ ಬಸ್ ಹಾಗೂ ವಾಹನ ಸಂಚಾರ, ಮಾರುಕಟ್ಟೆ ಮೇಲೆ ಬಂದ್ ಯಾವುದೇ ಪ್ರಭಾವ ಬೀರಲಿಲ್ಲ. ಎಂದಿನಂತೆ ವ್ಯಾಪಾರ, ವಹಿವಾಟು ನಡೆಯಿತು. ಬಸ್ ಸಂಚಾರವೂ ಸಾಮಾನ್ಯವಾಗಿತ್ತು. ಶಾಲಾ ವಿದ್ಯಾರ್ಥಿಗಳ ಪರೀಕ್ಷೆಗಳು ಯಾವುದೇ ಆತಂಕವಿಲ್ಲದೆ ನಡೆದವು. ಎರಡನೇ ಶನಿವಾರವಾಗಿದ್ದರಿಂದ ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು ಬಂದಾಗಿದ್ದವು. ಉಳಿದಂತೆ ಎಲ್ಲವೂ ಸಾಮಾನ್ಯವಾಗಿತ್ತು.
ಪ್ರತಿಕೃತಿ ದಹಿಸಿ ಕರವೇ ಆಕ್ರೋಶ:ಬಂದ್ ಬೆಂಬಲಿಸಿ ನಗರದ ಬಸವೇಶ್ವರ ವೃತ್ತದಲ್ಲಿ ರಾಜ್ಯ ವಕ್ತಾರ ಬಿ.ಎಂ.ಪಾಟೀಲ ಹಾಗೂ ಜಿಲ್ಲಾಧ್ಯಕ್ಷ ಆತ್ಮಾರಾಮ ನೀಲನಾಯಕ ನೇತೃತ್ವದಲ್ಲಿ ಕರವೇ ಶಿವರಾಮೇಗೌಡ ಬಣದ ಪದಾಧಿಕಾರಿಗಳು ಎಂಇಎಸ್ ಪ್ರತಿಕೃತಿ ದಹನ ಮಾಡಿ ಪ್ರತಿಭಟಿಸಿದರು.
ಕರವೇ ರಾಜ್ಯ ವಕ್ತಾರ ಬಿ.ಎಂ.ಪಾಟೀಲ ಮಾತನಾಡಿ, ಕನ್ನಡ ಅಸ್ಮಿತೆ ಉಳಿಸಲು ಬೆಳೆಸಲು ಜನ್ಮತಾಳಿದ ಕರ್ನಾಟಕ ರಾಜ್ಯದ ಕನ್ನಡಪರ ಸಂಘಟನೆಗಳು ನಾಡು, ನುಡಿ, ಜಲ, ಪರಿಸರ ಸಂರಕ್ಷಣೆಗೆ ಬದ್ಧವಾಗಿವೆ. ಎಮ್.ಇ.ಎಸ್ ಪುಂಡರ ವಿರುದ್ಧ ಕ್ರಾಂತಿಕಾರಿ ಹೋರಾಟದ ಅನಿವಾರ್ಯತೆ ಇದೆ. ನಮ್ಮನ್ನಾಳುವ ಆಡಳಿತರೂಢ ಸರಕಾರ ಕೂಡಲೇ ಎಂ.ಇ.ಎಸ್ ನಿಷೇಧಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಎಂ.ಇ.ಎಸ್ ಪುಂಡಾಟಿಕೆ ಸಹಿಸಲು ಸಾಧ್ಯವಿಲ್ಲ. ನಮ್ಮ ತಾಳ್ಮೆಯನ್ನು ಪರೀಕ್ಷಸಿದರೆ ರಾಜ್ಯ ಮಟ್ಟದಲ್ಲಿ ಉಗ್ರ ಸ್ವರೂಪದ ಹೋರಾಟ ಹಮ್ಮಿ ಕೊಳ್ಳಲಾಗುವು ಎಂದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಕರವೇ ಜಿಲ್ಲಾಧ್ಯಕ್ಷ ಆತ್ಮಾರಾಮ ನಿಲನಾಯಕ ಮಾತನಾಡಿ, ಕನ್ನಡಿಗರ ಬೇಡಿಕೆಗಳನ್ನು ಸರ್ಕಾರ ಶೀಘ್ರದಲ್ಲಿ ಈಡೇರಿಸಬೇಕು. ಕನ್ನಡ ನಾಡಲ್ಲಿ ಎಂ.ಇ.ಎಸ್.ಪುಂಡರ ಪುಂಡಾಟಿಕೆ ಪದೇ ಪದೇ ನೋಡಿಕೊಂಡು ಕೆಲವು ಕನ್ನಡಪರ ಸಂಘಟನೆಗಳು ಮೌನ ವಹಿಸುವುದು ಖಂಡನೀಯ. ಇಂತಹ ಪುಂಡಾಟಿಕೆ ಮೆರೆದವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ಶಂಕರ ಮುತ್ತಲಗೇರಿ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಪರಶುರಾಮ ಬುಳ್ಳಾಪೂರ, ಸಹ ಸಂಚಾಲಕ ಸಂತೋಷ ಚಿನಿವಾಲ, ಶರಣು ಗಾಣಿಗೇರ,ಶಿವು ಪಾದಗಟ್ಟಿ, ಮಂಜುನಾಥ ಸವದಿ, ತಿಮ್ಮಣ್ಣ ಕುರುಬರ, ವಿಷ್ಣು ಬಾರಕೇರ, ಸಾದೀಕ ಶೇಖ ಭಾಗವಹಿಸಿದ್ದರು.