ಏಡ್ಸ್ ಕುರಿತ ತಪ್ಪು ಕಲ್ಪನೆ ಹೋಗಲಾಡಿಸಿ

| Published : Dec 05 2024, 12:31 AM IST

ಸಾರಾಂಶ

ವಿಶ್ವ ಏಡ್ಸ್ ದಿನದ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ಕೋರ್ಟ್ ಆವರಣದಲ್ಲಿ ನಡೆದ ಜಾಥಾ ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರಾ ನ್ಯಾಯಾಧೀಶರಾದ ಮಂಜುನಾಥ್ ನಾಯಕ್ ಚಾಲನೆ ನೀಡಿದರು.

ವಿಶ್ವ ಏಡ್ಸ್ ದಿನದ ಪ್ರಯುಕ್ತ ಜಿಲ್ಲಾ ಕೋರ್ಟ್ ಆವರಣದಲ್ಲಿ ನಡೆದ ಜಾಥಾ ಕಾರ್ಯಕ್ರಕ್ಕೆ ಚಾಲನೆ ನೀಡಿ ನ್ಯಾ.ಸಂತೋಷ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಎಚ್ಐವಿ ಸೋಂಕಿತ ರೋಗಿಯ ಬಗ್ಗೆ ಅಪಪ್ರಚಾರ ಮಾಡುವುದು, ರೋಗಿಯ ಅನುಮತಿ ಇಲ್ಲದೆ ಮತ್ತೊಬ್ಬರಿಗೆ ಹೇಳುವುದು ಕಾನೂನಾತ್ಮಕವಾಗಿ ಶಿಕ್ಷಾರ್ಹ ಅಪರಾಧ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿವಮೊಗ್ಗ ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ವಿಶ್ವ ಏಡ್ಸ್ ದಿನದ ಅಂಗವಾಗಿ ಜಿಲ್ಲಾ ಕೋರ್ಟ್ ಆವರಣದಲ್ಲಿ ಆಯೋಜಿಸಿದ್ದ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಎಚ್‌ಐವಿ ಕಾಯಿಲೆ ಬಗ್ಗೆ ತಪ್ಪು ಕಲ್ಪನೆಗಳಿವೆ. ಅದ್ದರಿಂದ ಎಚ್ಐವಿ ಸೊಂಕಿತರನ್ನು ಸಾಮಾಜಿಕ ಬಹಿಷ್ಕಾರ ಮಾಡುವ ಅಥವಾ ಅಸಹ್ಯ ರೀತಿಯಲ್ಲಿ ನೋಡುವ ಮನೋಭಾವ ಬೆಳೆದು ಬಂದಿದೆ. ಎಚ್‌ಐವಿ ಸೋಂಕಿತ ರೋಗಿಯ ಬಗ್ಗೆ ಅಪಪ್ರಚಾರ ಮಾಡುವುದು, ರೋಗಿಯ ಅನುಮತಿ ಇಲ್ಲದೆ ಮತ್ತೊಬ್ಬರಿಗೆ ಹೇಳುವುದು ಕಾನೂನಾತ್ಮಕವಾಗಿ ಶಿಕ್ಷಾರ್ಹ ಅಪರಾಧ. ಕಾನೂನಿನ ಉಲ್ಲಂಘನೆಯಾದಲ್ಲಿ 2 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 1ಲಕ್ಷಕ್ಕೂ ಮೀರಿದ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿದ್ಯಾರ್ಥಿಗಳು ಏಡ್ಸ್ ಬಗ್ಗೆ ತಿಳಿದುಕೊಂಡು ಸಾರ್ವಜನಿಕರಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಜಿಲ್ಲೆಯಲ್ಲಿ ಎಚ್ಐವಿ ಪರೀಕ್ಷೆಗೆ ಹೆಚ್ಚು ಜನರು ಒಳಗಾಗುತ್ತಿರುವುದು ಒಳ್ಳೆಯ ಬೆಳವಣಿಗೆಯ ನೋಟವನ್ನು ತೋರುತ್ತದೆ. ಎಚ್ಐವಿ ಪರೀಕ್ಷೆ ಮಾಡಿದರೆ ಅದು ಏಡ್ಸ್ ಇದೆ ಎಂದು ಅರ್ಥ ಅಲ್ಲ. ಸಾರ್ವಜನಿಕರ ಹಿತ ದೃಷ್ಠಿಯಿಂದ ಮಾಡಲಾಗುತ್ತದೆ. ಏಡ್ಸ್ ಕಾಯಿಲೆ ಕುರಿತು ಸಾರ್ವಜನಿಕರು ಹೆಚ್ಚು ಅರಿವು ಮೂಡಿಸಿಕೊಳ್ಳಬೇಕು ಎಂದು ತಿಳಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್, ಯುವಜನರಿಗೆ ಒಂದು ಸಂದೇಶ ನೀಡಿದರೆ ಅದು ಎಲ್ಲರಿಗೂ ತಲುಪುತ್ತದೆ. ಅದೆ ರೀತಿ ವಿದ್ಯಾರ್ಥಿಗಳಾದ ನೀವುಗಳು ನಿಮ್ಮ ಸುತ್ತಮುತ್ತಲಿನ ಸಾರ್ವಜನಿಕರಿಗೆ, ಸ್ನೇಹಿತರಿಗೆ ಹೆಚ್ಐವಿ ಕುರಿತು ಮಾಹಿತಿ ನೀಡಿ ಅರಿವು ಮೂಡಿಸಬೇಕಾಗುತ್ತದೆ. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಅರೋಗ್ಯದ ಬಗ್ಗೆ ಜಾಗೃತಿವಹಿಸಿ ಎಂದು ಹೇಳಿದರು.

ಜಿಲ್ಲಾ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಶ್ರೀಧರ್ ಮಾತನಾಡಿ, ಭಾರತ ಸಧೃಡ ಮತ್ತು ಅಭಿವೃದ್ಧಿ ಹೊಂದಲು ಎಲ್ಲರೂ ಆರೋಗ್ಯವಾಗಿರಬೇಕು. ಸರ್ಕಾರಗಳು ಏಡ್ಸ್ ರೋಗಗಳಂತಹ ಕಾಯಿಲೆಗಳ ಬಗ್ಗೆ ಹೆಚ್ಚು ಅರಿವು ಮತ್ತು ಪ್ರಚಾರ ಮಾಡುತ್ತವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಂಶೋಧನೆ ಮತ್ತು ಕೌಶಲ್ಯಗಳ ಬಗ್ಗೆ ಗಮನ ಹರಿಸಬೇಕು. ವಿದ್ಯಾರ್ಥಿಗಳು ಎಲ್ಲಾ ಸಮುದಾಯಗಳಿಗೂ ತಲುಪುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮತ್ತು ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಈ ವೇಳೆ ಜಿಲ್ಲೆಯಲ್ಲಿ ಏಡ್ಸ್ ಕುರಿತು ಜಾಗೃತಿ ನೀಡುತ್ತಿರುವ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ಎಚ್‌ಐವಿ ಪರೀಕ್ಷಕರು ಹಾಗೂ ಈ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ನಿರ್ವಹಿಸಿ ಪ್ರಶಸ್ತಿ ಪಡೆದ ಗೌರವಾನ್ವಿತರಿಗೆ ಸನ್ಮಾನಿಸಲಾಯಿತು.

ವಿಶ್ವ ಏಡ್ಸ್ ದಿನದ ಅಂಗವಾಗಿ ಜಿಲ್ಲಾ ಕೋರ್ಟ್ ಆವರಣದಿಂದ ಭಾರತೀಯ ವೈದ್ಯಕೀಯ ಸಂಘದವರಗೆ ಜಾಥಾ ಕಾರ್ಯಕ್ರಮವನ್ನು ಗೌರವಾನಿತ್ವ ಪ್ರಧಾನ ಜಿಲ್ಲಾ ಮತ್ತು ಸತ್ರಾ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ್ ನಾಯಕ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ, ಜಿಲ್ಲಾ ಕ್ಷಯಾ ಮತ್ತು ಏಡ್ಸ್ ರೋಗ ನಿಯಂತ್ರಣಾಧಿಕಾರಿಗಳಾದ ಡಾ.ಬಿ.ಪಿ.ನಾಗೇಶ್, ಎಫ್‌ಬಿಐ ಶಿವಮೊಗ್ಗದ ಡಾ.ಸಾದ್ವಿಕ್, ಎ.ಕೆ.ಆರ್ ಆಡಳಿತಾಧಿಕಾರಿ ರವಿಕುಮಾರ್ ಮತ್ತಿತರರು ಇದ್ದರು.