ಶುದ್ಧ ಕುಡಿವ ನೀರಿಗಾಗಿ ಖಾಲಿ ಕೊಡಗಳ ಪ್ರದರ್ಶನ

| Published : Feb 25 2024, 01:45 AM IST

ಸಾರಾಂಶ

ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಬೇಡಿಕೆ ಈಡೇರಿಸುವ ಭರವಸೆ ನೀಡಲು ಬಂದಿದ್ದ ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಒ ಪರಸ್ಪರ ಪ್ರತ್ಯಾರೋಪ ಮಾಡುವ ಮೂಲಕ ಕೆಸರೆರಚಾಡಿದ ಪ್ರಸಂಗ ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಕುಡಿವ ನೀರು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮಸ್ಥರು ಪಂಚಾಯ್ತಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಬೇಡಿಕೆ ಈಡೇರಿಸುವ ಭರವಸೆ ನೀಡಲು ಬಂದಿದ್ದ ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಒ ಪರಸ್ಪರ ಪ್ರತ್ಯಾರೋಪ ಮಾಡುವ ಮೂಲಕ ಕೆಸರೆರಚಾಡಿದ ಪ್ರಸಂಗ ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮದಲ್ಲಿ ನಡೆಯಿತು.

ಹಳಕರ್ಟಿ ಗ್ರಾಮದ ನೂರಾರು ಮಹಿಳೆಯರು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಖಾಲಿ ಕೊಡಗಳ ಪ್ರದರ್ಶನ ನಡೆಸಿದ ವೇಳೆ ಈ ಕಿರಿಕ್ ಘಟನೆ ಸಂಭವಿಸಿದ್ದು, ಪ್ರತಿಭಟನಾಕಾರರ ಸಮಸ್ಯೆ ಆಲಿಸುವ ಮುನ್ನವೇ ಮೈಕ್ ಕಸಿದುಕೊಂಡು ಮಾತಿಗಿಳಿದ ಗ್ರಾಪಂ ಅಧ್ಯಕ್ಷ, ಕಾಂಗ್ರೆಸ್‌ನ ರಾಕೇಶ ಸಿಂಧೆ, ಜನರ ಕುಂದು ಕೊರತೆಗಳನ್ನು ನೀಗಿಸಿ ಗ್ರಾಮದ ಅಭಿವೃದ್ಧಿ ಮಾಡಬೇಕೆಂಬುದು ನನ್ನ ಕನಸಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮಸ್ಥರಿಗೆ ಕೆಲಸ ನೀಡಬೇಕು ಎಂಬ ಆಸೆಯಿದೆ. ಆದರೆ, ಪಿಡಿಒ ನಮ್ಮ ಆದೇಶ ಪಾಲಿಸುತ್ತಿಲ್ಲ. ಯಾವುದೇ ಕಾಮಗಾರಿಯ ಬಿಲ್ ಪಾವತಿಸುತ್ತಿಲ್ಲ. ಎನ್‌ಎಂಆರ್ ತೆಗೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ಆಪಾದಿಸಿದರು.

ನಂತರ ಮಾತನಾಡಿದ ಪ್ರಭಾರ ಪಿಡಿಒ ಗೋಪಾಲ ಕಟ್ಟಿಮನಿ, ನಾನು ಎನ್‌ಎಂಆರ್ ತೆಗೆದು ಉದ್ಯೋಗ ಖಾತ್ರಿ ಆರಂಭಿಸಲು ಮುಂದಾಗಿದ್ದೆ. ಆದರೆ, ಗ್ರಾಪಂ ಅಧ್ಯಕ್ಷರೇ ಇದಕ್ಕೆ ಅಡ್ಡಗಾಲು ಹಾಕಿ ತಡೆಹಿಡಿದಿದ್ದಾರೆ. ಪಂಚಾಯಿತಿ ನಿಯಮಗಳಿಗೆ ಬದ್ಧವಾಗಿ ಕರ್ತವ್ಯ ನಿರ್ವಹಿಸಲು ಬಿಡುತ್ತಿಲ್ಲ. ಬೇಕಾಬಿಟ್ಟಿ ಕೆಲಸ ಮಾಡಲು ನನ್ನಿಂದ ಆಗಲ್ಲ. ಹೇಳಬೇಕಾದ್ದು ಇನ್ನೂ ಸಾಕಷ್ಟಿದೆ. ಆದರೆ ಜನರ ಮುಂದೆ ಹೇಳುವುದಿಲ್ಲ ಎಂದು ಪಿಡಿಒ ಗೋಪಾಲ, ಅಧ್ಯಕ್ಷ ರಾಕೇಶಗೆ ತಿರುಗೇಟು ನೀಡಿದರು.

ಮನವಿ ಸ್ವೀಕರಿಸಲು ಆಗಮಿಸಿದ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಪಂಡೀತ್ ಸಿಂಧೆ ಅವರ ಸಮ್ಮುಖದಲ್ಲೇ ಈ ಘಟನೆ ನಡೆದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಯಿತು. ಮಹಿಳೆಯರು ದೊಡ್ಡ ದನಿಯಲ್ಲಿ ಪಂಚಾಯಿತಿ ಆಡಳಿತಕ್ಕೆ ಧಿಕ್ಕಾರದ ಘೋಷಣೆ ಮೊಳಗಿಸಿದರು. ಇದೇ ವೇಳೆ ಅಧಿಕಾರಿಗಳನ್ನು ಮತ್ತು ಗ್ರಾಪಂ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡ ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯ ವೀರಭದ್ರಪ್ಪ ಆರ್.ಕೆ, ನಿಮ್ಮ ರಾಜಕೀಯ ದುರಾಡಳಿತದಿಂದಾಗಿ ಗ್ರಾಮದ ಜನರು ಚರಂಡಿ ನೀರು ಮಿಶ್ರಿತ ಕೊಳೆ ನೀರು ಕುಡಿಯುತ್ತಿದ್ದಾರೆ. ಕುಡಿಯಲು ಶುದ್ಧ ನೀರು ಕೊಡಲು ನಿಮಗೆ ಯೋಗ್ಯತೆಯಿಲ್ಲ. ದುಡಿಯುವ ಕೈಗಳು ಕೆಲಸ ಕೇಳುತ್ತಿವೆ. ಉದ್ಯೋಗ ಖಾತ್ರಿ ಯೋಜನೆ ಆರಂಭಿಸಿಲ್ಲ.

ಸಾರ್ವಜನಿಕ ಶೌಚಾಲಯಗಳಿಲ್ಲದೆ ಮಹಿಳೆಯರು ಬಹಿರ್ದೆಸೆ ಪದ್ದತಿ ಅನುಸರಿಸುತ್ತಿದ್ದಾರೆ. ಕಟ್ಟಿಸಿಕೊಂಡ ವೈಯಕ್ತಿಕ ಶೌಚಾಲಯಕ್ಕೆ ಸಹಾಯಧನ ಬಿಡುಗಡೆಯಾಗಿಲ್ಲ. ಗ್ರಾಮದಾದ್ಯಂತ ನೇತಾಡುತ್ತ ಅಪಾಯಕಾರಿಯಾಗಿರುವ ವಿದ್ಯುತ್ ತಂತಿಗಳ ದುರಸ್ಥಿ ಮಾಡಿಸಿಲ್ಲ. ಕುಡಿಯುವ ನೀರಿನ ಪೈಪ್‌ಗಳು ಬಹುತೇಕ ಕಡೆ ಒಡೆದು ಚರಂಡಿ ನೀರು ಹೀರಿಕೊಳ್ಳುತ್ತಿವೆ. ಕೊಳೆ, ಹೂಳು, ಹುಳು ಹುಪ್ಪಡಿಯಿಂದ ಕೂಡಿದ ಕಲುಷಿತ ನೀರು ಕುಡಿದು ಜನರು ಅನಾರೋಗ್ಯಪೀಡಿತರಾಗಿದ್ದಾರೆ. ಇದನ್ನೆಲ್ಲ ಬಗೆಹರಿಸುವುದು ಬಿಟ್ಟು ಒಬ್ಬರಮೇಲೆ ಒಬ್ಬರು ಗೂಬೆ ಕೂಡಿಸುವ ನಾಟಕವಾಡುತ್ತಿದ್ದೀರಿ ಎಂದು ಆಕ್ರೋಶ ಹೊರಹಾಕಿದರು. ತಕ್ಷಣ ಉದ್ಯೋಗ ಖಾತ್ರಿ ಶುರುವಾಗಬೇಕು. ಹದಿನೈದು ದಿನಗಳಲ್ಲಿ ಶುದ್ಧ ನೀರು ಪೂರೈಕೆಯಾಗಬೇಕು. ನಿರ್ಲಕ್ಷ್ಯ ವಹಿಸಿದರೆ ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮನವಿಪತ್ರ ಸ್ವೀಕರಿಸಿ ಮಾತನಾಡಿದ ಉದ್ಯೋಗಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಪಂಡೀತ್ ಸಿಂಧೆ, ಸೋಮವಾರವೇ ಎನ್‌ಎಂಆರ್ ತೆಗೆದು ಗ್ರಾಮಸ್ಥರಿಗೆ ಉದ್ಯೋಗ ನೀಡಲಾಗುವುದು ಎಂದು ಭರವಸೆ ನೀಡಿದರು. ಎಸ್‌ಯುಸಿಐ ಮುಖಂಡರಾದ ಗೌತಮ ಪರ್ತೂರಕರ, ಈರಣ್ಣ ಇಸಬಾ, ಶಿವುಕುಮಾರ ಅಂದೋಲಾ, ವೆಂಕಟೇಶ ದೇವದುರ್ಗಾ, ಗೋವಿಂದ ಯಳವಾರ, ಗೋದಾವರಿ ಕಾಂಬಳೆ, ಸಿದ್ಧಾರ್ಥ ತಿಪ್ಪನೋರ, ದತ್ತಾತ್ರೇಯ ಹುಡೇಕರ, ಜೈಭೀಮ್ ದಾಸ್, ಚೌಡಪ್ಪ ಗಂಜಿ, ಗ್ರಾಮಸ್ಥರಾದ ಭಾಗಮ್ಮ ಪರ್ತುರಕರ, ಕರಣಪ್ಪ ಇಸಬಾ, ಈರಣ್ಣ ಚೆನ್ನೂರ ಸೇರಿದಂತೆ ನೂರಾರುಜನ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.