ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರುಜಿಲ್ಲೆ ವಿವಿಧ ಪೊಲೀಸ್ ಠಾಣೆಗಳಿಂದ ಜಪ್ತಿ ಮಾಡಿದ್ದ 1,26,150 ರು. ಬೆಲೆ ಬಾಳುವ 11 ಕೆಜಿ 27 ಗ್ರಾಂ ತೂಕದ ಮಾದಕ ವಸ್ತು ಗಾಂಜಾವನ್ನು ಇಲ್ಲಿನ ಯಕ್ಲಾಸಪುರ ರಸ್ತೆಯಲ್ಲಿರುವ ವೈದ್ಯಕೀಯ ತಾಜ್ಯ ವಿಲೇವಾರಿ ಘಟಕದಲ್ಲಿ ಗುರುವಾರ ವಿಲೇವಾರಿ ಮಾಡಲಾಯಿತು. ಜಿಲ್ಲೆಯ ಬಳಗಾನೂರು ಠಾಣೆ, ತುರ್ವಿಹಾಳ ಠಾಣೆ, ಯರಗೇರಾ ಠಾಣೆ, ಮಸ್ಕಿ ಠಾಣೆ, ರಾಯಚೂರು ಗ್ರಾಮೀಣ ಠಾಣೆ, ರಾಯಚೂರು ಸೆನ್ ಪೊಲೀಸ್ ಠಾಣೆ, ಸಿಂಧನೂರು ಗ್ರಾಮೀಣ ಠಾಣೆ, ಸದರ್ ಬಜಾರ್ ಠಾಣೆ, ಲಿಂಗಸುಗೂರು ಠಾಣೆಗಳಲ್ಲಿ 2023 ಹಾಗೂ 2024 ಸಾಲಿನಲ್ಲಿ ವರದಿಯಾದ ಒಟ್ಟು 13 ಪ್ರಕರಣ ಗಳಲ್ಲಿ ವಶಪಡಿಸಿಕೊಳ್ಳಲಾದ ಗಾಂಜಾವನ್ನು ಕರ್ನಾಟಕ ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾ ನಿರೀಕ್ಷರ ಸೂಚನೆ ಮೇರೆಗೆ ಜನವರಿ 23ರಂದು ವಿಲೇವಾರಿ ಪ್ರಕ್ರಿಯೆ ನಡೆಯಿತು. ಮಾದಕ ವಸ್ತು ವಿಲೇವಾರಿ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ.ಪುಟ್ಟಮಾದಯ್ಯ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ-2 ಜಿ ಹರೀಶ್ ಹಾಗೂ ಸದಸ್ಯರಾದ ರಾಯಚೂರ ಉಪವಿಭಾಗದ ಡಿ.ಎಸ್.ಪಿ ಎಂ.ಜಿ.ಸತ್ಯನಾರಾಯಣ ರಾವ್, ಲಿಂಗಸುಗೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ದತ್ತಾತ್ರೇಯ. ಎನ್. ಕರ್ನಾಡ್, ರಿಮ್ ಆಕ್ಟ್ ರಾಯಚೂರದ ಅಧ್ಯಕ್ಷರಾದ ಡಾ.ಶ್ರೀಶೈಲೇಶ್ ಅಮರಖೇಡ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣದ ಪರಿಸರ ಅಧಿಕಾರಿಗಳಾದ ಶ್ರೀ ಪ್ರಕಾಶ, ಉಪ ಪರಿಸರ ಅಧಿಕಾರಿ ಶೈಲಜಾ.ವಿ.ಅಮೀನಗಡ, ರಿಮ್ ಆಕ್ಟ್ನ ಟಿಕ್ನಿಕಲ್ ಆಫೀಸರ್ ಜಯಕುಮಾರ, ಡಿ.ಸಿ.ಆರ್.ಬಿ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ತಿಮ್ಮಣ್ಣ ಎಸ್. ಅವರಿ ಹಾಜರಿದ್ದು, ಸರಕಾರಿ ಪಂಚರ ಸಮಕ್ಷಮದಲ್ಲಿ ವಿಲೇವಾರಿ ಮಾಡಲಾಯಿತು.