ಸಾರಾಂಶ
- ಶೀಘ್ರವೇ ಅರಣ್ಯ ಹಕ್ಕು ಸಮಿತಿ ಸಭೆ ಕರೆಯಲು ಒತ್ತಾಯ
- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಅರಣ್ಯ ಹಕ್ಕು ಸಮಿತಿ ಸಭೆಗಳನ್ನು ಆದಷ್ಟು ಬೇಗನೆ ಕರೆದು ಅರಣ್ಯ ಭೂಮಿ ಸಾಗುವಳಿದಾರರ ಅರ್ಜಿ ವಿಲೇವಾರಿ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಪ್ರತಿಭಟಿಸಲಾಯಿತು.ನಗರದ ಶ್ರೀ ಜಯದೇವ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ರೈತ ಸಂಘ-ಹಸಿರು ಸೇನೆಯ ನೂರಾರು ಪದಾಧಿಕಾರಿಗಳು, ರೈತರು, ರೈತ ಮಹಿಳೆಯರು ಪಾಲ್ಗೊಂಡು, ಜಿಲ್ಲಾಡಳಿತ ಭವನಕ್ಕೆ ತೆರಳಿ, ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಿದರು.
ರಾಜ್ಯಾಧ್ಯಕ್ಷ ಮಂಜುನಾಥ ಮಾತನಾಡಿ, ಕೇಂದ್ರ ಸರ್ಕಾರದ ಅರಣ್ಯ ಹಕ್ಕು ಅಧಿನಿಯಮ 2006ಕ್ಕೆ 75 ವರ್ಷಗಳ ಸಾಕ್ಷಿ ದಾಖಲೆ ಇರುವ ಕಾನೂನನ್ನು 25 ವರ್ಷಕ್ಕೆ ಇಳಿಸಬೇಕು. ಖಾಸಗಿ ಎನ್.ಬಿ.ಎಫ್.ಸಿ. ಬ್ಯಾಂಕ್‌ಗಳು ಜಿಲ್ಲೆಯ ರೈತರ ಮೇಲೆ ಮುಂಬೈ, ಚೆನ್ನೈ, ಕೊಲ್ಕತ್ತಾ, ಹುಬ್ಬಳ್ಳಿ ಸೇರಿದಂತೆ ದೂರದ ಊರುಗಳಲ್ಲಿ ಸಾಲ ಮರುಪಾವತಿಸಿಲ್ಲ ಎಂದು ನ್ಯಾಯಾಲಯಗಳಲ್ಲಿ ದಾವೆಗಳನ್ನು ಹೂಡುತ್ತಿದ್ದಾರೆ. ಇದರಿಂದ ರೈತರು ಅಲ್ಲಿಗೆ ಹೋಗಿ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗದೇ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.ಬ್ಯಾಂಕುಗಳು ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದರೆ ಕಾನೂನು ರೀತ್ಯಾ ರೈತರು ಹೋರಾಟ ಮಾಡಲು ಅವಕಾಶವಿದೆ. ಈ ಕೂಡಲೇ ಸಂಬಂಧಿಸಿದ ಬ್ಯಾಂಕ್‌ಗಳಿಗೆ ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ದಾವೆಗಳನ್ನು ಹೂಡುವಂತೆ ನಿರ್ದೇಶನ ನೀಡಬೇಕು. ಚನ್ನಗಿರಿ ತಾಲೂಕು ಅಸ್ತಾಫನಹಳ್ಳಿಯಲ್ಲಿ ನಿವೇಶನರಹಿತ ಕುಟುಂಬಗಳಿಗೆ ನೀಡಲು 4 ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ. ಆದರೆ, ಜಮೀನಿನ ಮಾಲೀಕರು ಹೈಕೋರ್ಟಿಗೆ ಮೊರೆಹೋಗಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಜಿಪಂ ಸಿಇಒ ಅವರಿಗೆ ಪಾರ್ಟಿ ಮಾಡಿದ್ದಾರೆ. ಆದರೆ ಇದುವರೆಗೂ ಯಾರೂ ನಿವೇಶನರಹಿತರ ಪರ ಕೋರ್ಟಿಗೆ ಹಾಜರಾಗಿಲ್ಲ. ತಕ್ಷಣ ಈ ಸಮಸ್ಯೆ ಪರಿಹರಿಸಲಿ ಎಂದು ತಾಕೀತು ಮಾಡಿದರು.
ಶಿವಗಂಗೆಹಾಳ್ ಮತ್ತು ಮೆದಿಕೆರೆ ಈ ಗ್ರಾಮದಲ್ಲೂ ವಸತಿ ನಿವೇಶನ ಇಲ್ಲವೆಂದು ಹಲವಾರು ಬಾರಿ ತಾ.ಪಂ.ಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಚನ್ನಗಿರಿ ತಾಲೂಕಿನ ಗೌಳಿ ಜನಾಂಗದವರು ಕಾಡಿನಲ್ಲಿ ನೂರಾರು ವರ್ಷಗಳಿಂದ ದನಗಳನ್ನು ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈಚೆಗೆ ಅರಣ್ಯ ಇಲಾಖೆಯವರು ಗೌಳಿ ಜನರನ್ನು ಅರಣ್ಯದಿಂದ ಹೊರದಬ್ಬಲು ತೀವ್ರ ಪ್ರಯತ್ನ ಮಾಡುತ್ತಿದ್ದಾರೆ. ನಾಡು ಗೊತ್ತಿಲ್ಲದ ಅಂತಹವರಿಗೆ ಕಾಡಿನಂಚಿನಲ್ಲಿ ಸರ್ಕಾರಿ ಜಮೀನಿನಲ್ಲಿ ಪುನರ್ ವಸತಿ ಮಾಡಿದ ನಂತರವೇ ಅರಣ್ಯದಿಂದ ಕಳುಹಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ರೈತ ಸಂಘ-ಹಸಿರು ಸೇನೆಯ ಎಲ್ಲಾ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಅರಣ್ಯ ಹಕ್ಕು ಅಧಿನಿಯಮ 2006ಕ್ಕೆ 75 ವರ್ಷಗಳ ಸಾಕ್ಷಿ ದಾಖಲೆ ಇರುವ ಕಾನೂನನ್ನು 25 ವರ್ಷಗಳಿಗೆ ಇಳಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಭರವಸೆ ನೀಡಿದರು.ಸಂಘದ ಯಲೋದಹಳ್ಳಿ ರವಿ, ಕಡರನಾಯಕನಹಳ್ಳಿ ಪ್ರಭು, ಚಿಕ್ಕಮಲ್ಲನಹೊಳೆ ಚಿರಂಜೀವಿ, ರಾಜನಹಟ್ಟಿ ರಾಜು, ಹೂವಿನ ಮಡು ನಾಗರಾಜ್, ಚಿಕ್ಕಕೋಗಲೂರು ಕುಮಾರ್, ಆಲೂರು ಪರಶುರಾಮ್, ಅಸ್ತಪನಳ್ಳಿ ಗಂಡುಗಲಿ, ಶರಣಮ್ಮ, ಕುರ್ಕಿ ಹನುಮಂತ, ಹುಚ್ಚವ್ವನಹಳ್ಳಿ ಪ್ರಕಾಶ, ಗುಮ್ಮನೂರು ರುದ್ರೇಶ, ತಿಪ್ಪೇರುದ್ರಪ್ಪ ಟಿ.ಸಿ.ಮೆದಿಕೆರೆ, ಕೆ.ಎಸ್.ಹನುಮಂತ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
- - - -21ಕೆಡಿವಿಜಿ8, 9:ದಾವಣಗೆರೆಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.