ಜನಸ್ಪಂದನದಲ್ಲಿ ಸಲ್ಲಿಕೆಯಾದ ಅರ್ಜಿ ತ್ವರಿತಗತಿಯಲ್ಲಿ ವಿಲೇವಾರಿ ಮಾಡಿ: ಸಚಿವ ಚಲುವರಾಯಸ್ವಾಮಿ ತಾಕೀತು

| Published : Feb 02 2024, 01:02 AM IST

ಜನಸ್ಪಂದನದಲ್ಲಿ ಸಲ್ಲಿಕೆಯಾದ ಅರ್ಜಿ ತ್ವರಿತಗತಿಯಲ್ಲಿ ವಿಲೇವಾರಿ ಮಾಡಿ: ಸಚಿವ ಚಲುವರಾಯಸ್ವಾಮಿ ತಾಕೀತು
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಸಚಿವನಾಗಿ ರಾಜ್ಯದ ಜವಾಬ್ದಾರಿ ಇರುವುದರಿಂದ ನಾಗಮಂಗಲ ತಾಲೂಕಿಗೆ ಹೆಚ್ಚು ಭೇಟಿ ಕೊಡಲು ಸಾಧ್ಯವಾಗುತ್ತಿಲ್ಲ. ಆದರೂ ಸಹ ಜನರ ಕೆಲಸ ಕಾರ್ಯಗಳಿಗೆ ಯಾವುದೇ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸಬೇಕೆಂದು ಎಲ್ಲ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಜನಸ್ಪಂದನದಲ್ಲಿ ಸಲ್ಲಿಕೆಯಾದ ಎಲ್ಲ ಅರ್ಜಿಗಳನ್ನು ಆಯಾ ಇಲಾಖೆ ಅಧಿಕಾರಿಗಳು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿ ಒಂದು ತಿಂಗಳೊಳಗೆ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಲೂಕಿನ ಭೀಮನಹಳ್ಳಿ, ದೇವಲಾಪುರ ಹಾಗೂ ಕರಡಹಳ್ಳಿ ಗ್ರಾಪಂ ಆವರಣದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕಿನ ರೈತರು ಮತ್ತು ಸಾರ್ವಜನಿಕರು ಕಂದಾಯ ಇಲಾಖೆ ಅಥವಾ ಇನ್ನಿತರೆ ಯಾವುದೇ ಇಲಾಖೆಗಳಲ್ಲಿ ಆಗಬೇಕಿರುವ ಕೆಲಸ ಕಾರ್ಯಗಳಿಗೆ ಅಧಿಕಾರಿಗಳು ಅಥವಾ ಮಧ್ಯವರ್ತಿಗಳಿಗೆ ಲಂಚ ಕೊಡುವ ಅಗತ್ಯವಿಲ್ಲ ಎಂದರು.

ತಾಲೂಕಿನಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಉಪವಿಭಾಗಾಧಿಕಾರಿಗಳ ವ್ಯಾಪ್ತಿಗೆ ಬರುವ 2 ಸಾವಿರಕ್ಕೂ ಹೆಚ್ಚು ಕಡತಗಳ ಪೈಕಿ ಬಹುತೇಕ ಕಡತಗಳು ವಿಲೇವಾರಿಯಾಗಿವೆ. ಅಂತೆಯೇ ತಹಸೀಲ್ದಾರ್ ವ್ಯಾಪ್ತಿಗೊಳಪಡುವ 500ಕ್ಕೂ ಹೆಚ್ಚು ಕಡತಗಳ ಪೈಕಿ ಕೇವಲ 30 ರಿಂದ 40 ಕಡತಗಳು ಮಾತ್ರ ಬಾಕಿ ಇವೆ. ಅವುಗಳನ್ನೂ ಸಹ ಕಾನೂನಾತ್ಮಕವಾಗಿ ವಿಲೇವಾರಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ನಿರ್ದೇಶನ ನೀಡಲಾಗಿದೆ ಎಂದರು.

ನಾನು ಸಚಿವನಾಗಿ ರಾಜ್ಯದ ಜವಾಬ್ದಾರಿ ಇರುವುದರಿಂದ ತಾಲೂಕಿಗೆ ಹೆಚ್ಚು ಭೇಟಿ ಕೊಡಲು ಸಾಧ್ಯವಾಗುತ್ತಿಲ್ಲ. ಆದರೂ ಸಹ ಜನರ ಕೆಲಸ ಕಾರ್ಯಗಳಿಗೆ ಯಾವುದೇ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸಬೇಕೆಂದು ಎಲ್ಲ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿರುವುದಾಗಿ ತಿಳಿಸಿದರು.

ಇದಕ್ಕೂ ಮುನ್ನ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸದಾಗಿ ತೆರೆದಿರುವ ಕೂಸಿನ ಮನೆಯನ್ನು ಸಚಿವರು ಉದ್ಘಾಟಿಸಿದರು. ಸಮಸ್ಯೆ ಹೊತ್ತು ಬಂದಿದ್ದ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರು ಸಚಿವರಿಗೆ ಅಹವಾಲು ಸಲ್ಲಿಸಿದರು. ಸಲ್ಲಿಕೆಯಾದ ಎಲ್ಲ ಅರ್ಜಿಗಳನ್ನು ಆಯಾ ಇಲಾಖೆಯ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ವರ್ಗಾಯಿಸಿದ ಸಚಿವರು ತಿಂಗಳೊಳಗೆ ಸಮಸ್ಯೆ ಬಗೆಹರಿಸಬೇಕೆಂದು ತಾಕೀತು ಮಾಡಿದರು. ಸಭೆಯಲ್ಲಿ ಗ್ರಾಪಂ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಇಸ್ವತ್ತು ಸೇರಿದಂತೆ ವಿವಿಧ ಯೋಜನೆಗಳ ಮಾಶಾಸನ ಮಂಜೂರಾತಿ ಪತ್ರವನ್ನು ವಿತರಿಸಿದರು.

ಈ ವೇಳೆ ಚಲುವರಾಯಸ್ವಾಮಿ ಪುತ್ರ ಸಚ್ಚಿನ್, ಗ್ರಾಪಂ ಅಧ್ಯಕ್ಷೆ ಸಾಕಮ್ಮ, ಉಪಾಧ್ಯಕ್ಷೆ ಜಯಲಕ್ಷ್ಮಿ, ತಹಸೀಲ್ದಾರ್ ನಯೀಂಉನ್ನೀಸಾ, ತಾಪಂ ಇಒ ಚಂದ್ರಮೌಳಿ, ಡಿವೈಎಸ್‌ಪಿ ಲಕ್ಷ್ಮೀ ನಾರಾಯಣಪ್ರಸಾದ್, ಸಿಪಿಐ ನಿರಂಜನ್, ಬಿಇಒ ಸುರೇಶ್, ಸಿಡಿಪಿಒ ಕೃಷ್ಣಮೂರ್ತಿ, ಆರ್‌ಎಫ್‌ಒ ಮಂಜುನಾಥ್, ಕೆ.ನಾಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡರಾದ ಎಂ.ಹುಚ್ಚೇಗೌಡ, ಮಾವಿನಕೆರೆ ಸುರೇಶ್, ದಂಡಿಗನಹಳ್ಳಿ ಶಿವಣ್ಣ, ಆರ್.ಕೃಷ್ಣೇಗೌಡ, ನರಸಿಂಹಮೂರ್ತಿ, ಗ್ರಾಪಂ ಪಿಡಿಓ ವಿಜಯಕುಮಾರಿ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ಗ್ರಾಪಂ ಸದಸ್ಯರು ಇದ್ದರು.