ನಿಗದಿತ ಅವಧಿಯೊಳಗೆ ಸಾರ್ವಜನಿಕರ ಅರ್ಜಿ ವಿಲೇವಾರಿಗೊಳಿಸಿ

| Published : Dec 25 2024, 12:46 AM IST

ಸಾರಾಂಶ

ಉತ್ತಮ ಆಡಳಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಡಿಸಿ ಶಿಲ್ಪಾ ವರ್ಮಾ ಸೂಚನೆ

ಕನ್ನಡಪ್ರಭ ವಾರ್ತೆ ಬೀದರ್‌

ಡಿ.19 ರಿಂದ 24ರವರೆಗೆ ದೇಶಾದ್ಯಂತ ಉತ್ತಮ ಆಡಳಿತದ ಆಚರಣೆ ಮಾಡಲಾಗುತ್ತಿದ್ದು, ಅಧಿಕಾರಿಗಳು ತಮ್ಮ ಹಂತದಲ್ಲಿಯೇ ನಿಗದಿತ ಅವಧಿಯ ಒಳಗಾಗಿ ಸಾರ್ವಜನಿಕರ ಅಹವಾಲುಗಳನ್ನು ವಿಲೇವಾರಿಗೊಳಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡ ಉತ್ತಮ ಆಡಳಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ನ ವಿವಿಧ ಇಲಾಖೆಗಳು ತಳಮಟ್ಟದಲ್ಲಿಯೇ ಅರ್ಜಿಗಳನ್ನು ವಿಲೇವಾರಿ ಮಾಡಿದಲ್ಲಿ ತಾಲೂಕು ಅಥವಾ ಜಿಲ್ಲಾ ಮಟ್ಟಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಹೇಳಿದರು.

ಸಾರ್ವಜನಿಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಸದಾ ಕ್ರಿಯಾಶೀಲರಾಗಿರಬೇಕು. ಅರ್ಜಿಗಳು ಸಲ್ಲಿಕೆಯಾದ ತಕ್ಷಣವೇ ತಮ್ಮ ಮಟ್ಟದಲ್ಲಿ ಪರಿಶೀಲಿಸಿ ಪರಿಹರಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಎಲ್ಲ ಸಹಾಯ ಸೌಲಭ್ಯಗಳನ್ನು ನಿಗದಿತ ಸಮಯದೊಳಗೆ ಒದಗಿಸಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಮಾತನಾಡಿ, ಅಧಿಕಾರಿಗಳು ಸಕಾಲ ಹಾಗೂ ಐಪಿಜಿಆರ್‌ಎಸ್‌ ತಂತ್ರಾಂಶದಲ್ಲಿ ಬಾಕಿಯಿರುವ ಅರ್ಜಿಗಳನ್ನು ತಕ್ಷಣವೇ ವಿಲೇವಾರಿ ಮಾಡುವಂತೆ ತಿಳಿಸಿದರು.

ಬೀದರ್‌ ನಗರಸಭೆ 43 ಪ್ರಕರಣಗಳು ಬಾಕಿ ಇದ್ದು, ಸೇವಾ ಸಿಂಧು (ಎಸ್‌ಸಿ/ಎಸ್‌ಟಿ/ಓಬಿಸಿ) ಅಡಿ 181 ಪ್ರಕರಣ, ಸಹಕಾರ ಇಲಾಖೆಯ 25, ಕಾರ್ಮಿಕ ಇಲಾಖೆಯ 43, ಜಿಲ್ಲಾ ನೋಂದಣಿ 213, ಗ್ರಾಮಿಣ ಅಭಿವೃದ್ಧಿ ಪಂಚಾಯತ್‌ ರಾಜ್‌ 2, ಆರ್‌ಟಿಒ 15 ಸೇರಿ ಒಟ್ಟು 899 ವಿವಿಧ ಪ್ರಕರಣಗಳು ಬಾಕಿಯಿದ್ದು, ಅವುಗಳನ್ನು ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮೊಹಮ್ಮದ ಶಕೀಲ್‌, ಬೀದರ್‌ ವಿಶ್ವವಿದ್ಯಾಲಯದ ರಜಿಸ್ಟ್ರಾರ್‌ ಸುರೇಖಾ ಸೇರಿ ಅನೇಕರಿದ್ದರು.