ವಿಳಂಬ ಮಾಡದೆ ಪ್ರಕರಣ ಇತ್ಯರ್ಥಗೊಳಿಸಿ

| Published : Aug 13 2025, 12:30 AM IST

ಸಾರಾಂಶ

ಹಳೆಯ ಸಾಲ ಕಟ್ ಬಾಕಿ ಪ್ರಕರಣಗಳಲ್ಲಿ ಕಟ್ ಬಾಕಿದಾರರಿಗೆ ಮನವೊಲಿಸಿ ಇತ್ಯರ್ಥಪಡಿಸಿಕೊಳ್ಳುವಂತೆ ವಿವಿಧ ಬ್ಯಾಂಕ್ ಸಿಬ್ಬಂದಿಗಳಿಗೆ ಸೂಚಿಸಿದರು

ಮುಂಡಗೋಡ: ಚೆಕ್ ಬೌನ್ಸ್ ಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಳಂಬ ಮಾಡದೆ ಸಮನ್ಸ್ ನೀಡಿ ತಕ್ಷಣ ವಾರೆಂಟ್ ಜಾರಿ ಮಾಡಿ ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ಇಲ್ಲಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಸಿ.ಆರ್.ಅಕ್ಷತಾ ಪೊಲೀಸ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಸಂಜೆ ಇಲ್ಲಿಯ ಸಿವಿಲ್ ನ್ಯಾಯಾಲಯ ಸಭಾಂಗಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿ ಹಾಗೂ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ವಿಶೇಷ ಅಭಿಯಾನ ಸಭೆಯಲ್ಲಿ ಮಾತನಾಡಿದರು.

ಪೊಲೀಸ್‌ ಹಾಗೂ ಬ್ಯಾಂಕ್ ಮತ್ತು ಸಹಕಾರಿ ಸಂಘ ಸಂಸ್ಥೆ ಸಿಬ್ಬಂದಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಹಳೆಯ ಸಾಲ ಕಟ್ ಬಾಕಿ ಪ್ರಕರಣಗಳಲ್ಲಿ ಕಟ್ ಬಾಕಿದಾರರಿಗೆ ಮನವೊಲಿಸಿ ಇತ್ಯರ್ಥಪಡಿಸಿಕೊಳ್ಳುವಂತೆ ವಿವಿಧ ಬ್ಯಾಂಕ್ ಸಿಬ್ಬಂದಿಗಳಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ೯೦ದಿನಗಳ ವಿಶೇಷ ಅಭಿಯಾನದಡಿಯಲ್ಲಿ ಮಹಿಳೆಯರು, ಅಂಗವಿಕಲರು, ಪರಿಶಿಷ್ಟ ಜನಾಂಗ, ನೈಸರ್ಗಿಕ ವಿಕೋಪಕ್ಕೆ ಬಾದಿತರಾದವರು, ಬಡ ಹಾಗೂ ನಿರ್ಗತಿಕರಿಗೆ ಶುಲ್ಕವಿಲ್ಲದೆ ಉಚಿತ ಕಾನೂನು ಸೇವೆ ಪಡೆಯಲು ರಾಷ್ಟ್ರೀಯ ಕಾನೂನು ಸೇವೆ ಪ್ರಾಧಿಕಾರವು ಅನುವು ಮಾಡಿಕೊಟ್ಟಿದ್ದು, ಅಗತ್ಯವುಳ್ಳವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನ್ಯಾಯಾಧೀಶೆ ಸಿ.ಆರ್. ಅಕ್ಷತಾ ಸಭೆಯಲ್ಲಿ ತಿಳಿಸಿದರು.

ಸರ್ಕಾರಿ ಸಹಾಯಕ ಅಭಿಯೋಜಕ ಸಂತೋಷ ಹೆಗಡೆ, ಸಿಪಿಐ ರಂಗನಾಥ ನೀಲಮ್ಮನವರ, ಪಿಎಸ್ಐ ಪರಶುರಾಮ ಮಿರ್ಜಗಿ, ನ್ಯಾಯವಾದಿಗಳು ಹಾಗೂ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.