ಕಾಲಾವಧಿಯೊಳಗೆ ಈ ಸ್ವತ್ತು ಅರ್ಜಿ ವಿಲೇವಾರಿ ಮಾಡಿ: ಶಾಸಕ ಚನ್ನಬಸಪ್ಪ

| Published : Jul 30 2025, 12:45 AM IST

ಕಾಲಾವಧಿಯೊಳಗೆ ಈ ಸ್ವತ್ತು ಅರ್ಜಿ ವಿಲೇವಾರಿ ಮಾಡಿ: ಶಾಸಕ ಚನ್ನಬಸಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಈ ಸ್ವತ್ತು ದಾಖಲೆಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬವಾಗದಂತೆ ಅಧಿಕಾರಿಗಳು ನಿಗದಿತ ಕಾಲಾವಧಿಯೊಳಗೆ ಕೆಲಸ ಮುಗಿಸುವಂತೆ ಶಾಸಕ ಎಸ್.ಎನ್. ಚನ್ನಬಸಪ್ಪ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಈ ಸ್ವತ್ತು ದಾಖಲೆಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬವಾಗದಂತೆ ಅಧಿಕಾರಿಗಳು ನಿಗದಿತ ಕಾಲಾವಧಿಯೊಳಗೆ ಕೆಲಸ ಮುಗಿಸುವಂತೆ ಶಾಸಕ ಎಸ್.ಎನ್. ಚನ್ನಬಸಪ್ಪ ಸೂಚನೆ ನೀಡಿದರು.

ಇಲ್ಲಿನ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಈ ಸ್ವತ್ತು ದಾಖಲೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಸಾಕಷ್ಟು ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಕಚೇರಿ ಮಟ್ಟದಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ಅಲೆದಾಟವನ್ನು ನಿವಾರಿಸಬೇಕು. ನಿಗದಿತ ಕಾಲಾವಧಿಯೊಳಗೆ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಸೂಚನೆ ನೀಡಿದರು.

ಮನೆ ಬಾಗಿಲಿಗೆ ತೆರಿಗೆ ಸೌಲಭ್ಯ ಒದಗಿಸುವ ಕುರಿತಂತೆ ಚರ್ಚೆ ನಡೆಸಿದ ಅವರು, ಬಿ ಖಾತಾ ನಿರ್ವಹಣೆಯಲ್ಲಿ ಕಂದಾಯ ಇಲಾಖೆಯ ಕೆಲವೊಂದು ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಗಳಡಿ ನೀಡಲಾಗುವ ಅನುದಾನವನ್ನು ಸಮರ್ಪಕ ಬಳಕೆ ಮಾಡಿಕೊಳ್ಳಬೇಕು. ನಗರಾದ್ಯಂತ ಇರುವ ಹೊಂಡ ಗುಂಡಿಗಳಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಅವುಗಳನ್ನು ತಕ್ಷಣ ಸರಿಪಡಿಸಲು ಸೂಚಿಸಿದರು. ಪಾಲಿಕೆ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗದಂತೆ ಒಳಚರಂಡಿ ವ್ಯವಸ್ಥೆ ಮತ್ತು ಮಳೆನೀರಿನ ನಿರ್ವಹಣೆ ಬಗ್ಗೆ ತಕ್ಷಣದ ಕ್ರಮ ಕೈಗೊಳ್ಳಲು ಎಂಜಿನಿಯರಿಂಗ್ ವಿಭಾಗಕ್ಕೆ ಆದೇಶಿಸಿದರು.

ಬೀದಿ ದೀಪ ನಿರ್ವಹಣೆಯಲ್ಲಿ ಖಾಸಗಿ ಗುತ್ತಿಗೆದಾರರು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ನೀಡುವಲ್ಲಿ ವಿಳಂಬವಾಗುತ್ತಿದೆ. ಸಾರ್ವಜನಿಕ ಸೇವೆಯಲ್ಲಿ ವೈಫಲ್ಯ ಕಂಡುಬರುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ತುಂಗಾ ನದಿಗೆ ಸೇರುತ್ತಿರುವ ಡ್ರೈನೇಜ್ ನೀರಿನಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಅಧಿಕಾರಿಗಳು ತಡೆಗಟ್ಟಲು ತ್ವರಿತ ಕ್ರಮ ಕೈಗೊಳ್ಳಬೇಕು. ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ವ್ಯಾಪ್ತಿಯ ಅನೇಕ ಯೋಜನೆಗಳು ಅಪೂರ್ಣವಾಗಿದ್ದು, ಅವುಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಿವಮೊಗ್ಗ ನಗರವನ್ನು ಇನ್ನಷ್ಟು ಸ್ವಚ್ಛ ಹಾಗೂ ನಾವೀನ್ಯತೆಯೊಂದಿಗೆ ಅಭಿವೃದ್ಧಿಪಡಿಸಲು, ಅಗತ್ಯ ಬದಲಾವಣೆ ಹಾಗೂ ಕ್ರಮಗಳ ಬಗ್ಗೆ ಚರ್ಚೆ ನಡೆಸಿ, ಕಾರ್ಯರೂಪಕ್ಕೆ ತರಲು ಆದೇಶಿಸಿದರು.

24/7 ಕುಡಿಯುವ ನೀರಿನ ಯೋಜನೆ ಇನ್ನೂ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ, ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು. ಯೋಜನೆ ಪೂರ್ಣಗೊಳ್ಳುವವರೆಗೆ ಸಾರ್ವಜನಿಕರಿಗೆ ಯಾವುದೇ ನೀರಿನ ಬಿಲ್ ವಿಧಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಗಾಗಿ ನಿರ್ಮಿಸುತ್ತಿರುವ ನೂತನ ಲ್ಯಾಬ್ ವಿಳಂಬವಾಗಿದೆ. ತಕ್ಷಣದಲ್ಲಿ ಕಾರ್ಯಾರಂಭ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ಸೇರಿದಂತೆ ವಿವಿಧ ಹಿರಿಯ ಅಧಿಕಾರಿಗಳು ಇದ್ದರು.