ಪ್ರತಿ ಶುಕ್ರವಾರ ಎಸಿ ನ್ಯಾಯಾಲಯದಲ್ಲಿ ಪ್ರಕರಣಗಳ ಇತ್ಯರ್ಥ: ಕೆ.ಆರ್.ಶ್ರೀನಿವಾಸ್

| Published : Oct 22 2024, 12:07 AM IST / Updated: Oct 22 2024, 12:08 AM IST

ಪ್ರತಿ ಶುಕ್ರವಾರ ಎಸಿ ನ್ಯಾಯಾಲಯದಲ್ಲಿ ಪ್ರಕರಣಗಳ ಇತ್ಯರ್ಥ: ಕೆ.ಆರ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾಮಾಣಿಕ ಸೇವೆ ಮತ್ತು ಸ್ವಚ್ಛ ಆಡಳಿತ ನನ್ನ ಗುರಿ. ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಅಲೆದಾಟ ನಿಲ್ಲಬೇಕು. ನನ್ನ ನಡೆ ಜನರ ಬಳಿಗೆ. ಇದಕ್ಕಾಗಿ ಕಂದಾಯ ಇಲಾಖೆಯಲ್ಲಿನ ಎಲ್ಲಾ ಸಿಬ್ಬಂದಿಯನ್ನು ಸಜ್ಜುಗೊಳಿಸಿ ಕಡತ ವಿಲೇವಾರಿ ಕಾರ್ಯ ನಡೆಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರತಿ ಶುಕ್ರವಾರ ಪಟ್ಟಣದ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ಇತ್ಯರ್ಥ ಪಡಿಸುವುದಾಗಿ ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಕಡತ ವಿಲೇವಾರಿ ನಡೆಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ತಾಲೂಕಿಗೆ ಸಂಬಂಧಿಸಿದ ಎ.ಸಿ.ನ್ಯಾಯಾಲಯದ ಎಲ್ಲಾ ಕಡತಗಳನ್ನು ಪ್ರತಿ ಶುಕ್ರವಾರ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ನ್ಯಾಯಾಲಯದ ಕಲಾಪ ನಡೆಸಿ ಇತ್ಯರ್ಥ ಪಡಿಸುತ್ತೇನೆ ಎಂದರು.

ಎ.ಸಿ ಕಚೇರಿಯಲ್ಲಿನ ಕಡತಗಳ ವಿಲೇವಾರಿಗಾಗಿ ಇಲ್ಲಿನ ಜನ ಪಾಂಡವಪುರದ ಎ.ಸಿ.ಕಚೇರಿಗೆ ಬರುವ ಅಗತ್ಯವಿಲ್ಲ. ನ್ಯಾಯಾಲಯದ ಕಲಾಪದ ಜೊತೆಗೆ ಪ್ರತಿ ಶುಕ್ರವಾರ ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೂ ನಾನು ಲಭ್ಯನಿರುತ್ತೇನೆ ಎಂದರು.

ತಾಲೂಕಿನ ರೈತರು ಹಾಗೂ ಸಾರ್ವಜನಿಕರು ಕಂದಾಯ ಇಲಾಖೆಯಲ್ಲಿನ ಯಾವುದೇ ಸಮಸ್ಯೆಗಳಿದ್ದರೂ ಪ್ರತಿ ಶುಕ್ರವಾರ ತಾಲೂಕು ಆಡಳಿತಕ್ಕೆ ಸೌಧಕ್ಕೆ ಆಗಮಿಸಿ ನನ್ನನ್ನು ಭೇಟಿ ಮಾಡಬಹುದು ಎಂದರು.

ಪ್ರಾಮಾಣಿಕ ಸೇವೆ ಮತ್ತು ಸ್ವಚ್ಛ ಆಡಳಿತ ನನ್ನ ಗುರಿ. ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಅಲೆದಾಟ ನಿಲ್ಲಬೇಕು. ನನ್ನ ನಡೆ ಜನರ ಬಳಿಗೆ. ಇದಕ್ಕಾಗಿ ಕಂದಾಯ ಇಲಾಖೆಯಲ್ಲಿನ ಎಲ್ಲಾ ಸಿಬ್ಬಂದಿಯನ್ನು ಸಜ್ಜುಗೊಳಿಸಿ ಕಡತ ವಿಲೇವಾರಿ ಕಾರ್ಯ ನಡೆಸಲಾಗುತ್ತಿದೆ ಎಂದರು.

ಯಾವುದೇ ಕಡತಗಳು ಕಚೇರಿಯಲ್ಲಿ ವಿಲೇ ಆಗದೆ ಉಳಿಯಬಾರದು. ಇಂದು 150 ಕಡತಗಳನ್ನು ಪರಿಶೀಲಿಸಿ ವಿಲೇ ಮಾಡಲಾಗಿದೆ. ಕಂದಾಯ ಇಲಾಖೆಯಲ್ಲಿ ಶೇ.10 ರಷ್ಟು ಕಾರ್ಯಲೋಪವಿಬಹುದು. ಆದರೆ, ಶೇ.90 ರಷ್ಟು ಒಳ್ಳೆಯ ಕೆಲಸ ಆಗಿದೆ ಎಂದರು.

ತಾಲೂಕಿನ ಲಕ್ಷಾಂತರ ರೈತರ ಪಹಣಿಗಳನ್ನು ಆಧಾರ್ ಲಿಂಕ್ ಮಾಡಲಾಗುತ್ತಿದೆ. ರೈತರು ಕಡ್ಡಾಯವಾಗಿ ತಮ್ಮ ಹೆಸರಿನ ಪಹಣಿಗಳಿಗೆ ಆಧಾರ್ ಲಿಂಕ್ ಮಾಡಿಸಬೇಕು. ಜಿಲ್ಲಾಧಿಕಾರಿಗಳು ಮತ್ತು ಅಪರ ಜಿಲ್ಲಾಧಿಕಾರಿಗಳ ಸಲಹೆ ಸೂಚನೆ ಮತ್ತು ಮಾರ್ಗದರ್ಶನದ ಮೇರೆಗೆ ಜನರ ಬಳಿಗೆ ಸ್ವಚ್ಛ ಆಡಳಿತ ನೀಡುವ ಕಾರ್ಯಕ್ಕೆ ಕಂದಾಯ ಇಲಾಖೆಯನ್ನು ತೆಗೆದುಕೊಂಡು ಹೋಗುವ ಗುರಿ ಹೊಂದಿದ್ದೇನೆ ಎಂದರು.

ಈ ವೇಳೆ ತಹಸೀಲ್ದಾರ್ ಲೆಪ್ಟಿನೆಂಟ್ ಕರ್ನಲ್ ಡಾ.ಎಸ್.ಯು ಅಶೋಕ್, ಗ್ರೇಡ್-.2 ತಹಸೀಲ್ದಾರ್ ಬಿ.ಆರ್.ಲೋಕೇಶ್, ಉಪ ತಹಸೀಲ್ದಾರ್ ರವಿ, ಲಕ್ಷ್ಮೀಕಾಂತ್, ಜಿಲ್ಲಾ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.