ಇತ್ತೀಚೆಗೆ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಆತ ಜಗಳದ ವೇಳೆ ತಲೆಗೆ ಆದ ಗಾಯದಿಂದ ಮೃತಪಟ್ಟಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆಯ ವರದಿಯಿಂದ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಆತ ಜಗಳದ ವೇಳೆ ತಲೆಗೆ ಆದ ಗಾಯದಿಂದ ಮೃತಪಟ್ಟಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆಯ ವರದಿಯಿಂದ ಬೆಳಕಿಗೆ ಬಂದಿದೆ.

ಕೆಂಗುಂಟೆ ನಿವಾಸಿಯಾದ ವಕೀಲ ಶ್ರೀರಾಮ್ (43) ಮೃತ ವ್ಯಕ್ತಿ. ಇವರ ಸಾವಿಗೆ ಕಾರಣನಾಗಿದ್ದ ಗೊಲ್ಲರಹಟ್ಟಿ ನಿವಾಸಿಯಾದ ಆಟೋ ಚಾಲಕ ಪೃಥ್ವಿ ರಾಜ್‌ (31) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅ.9 ರಂದು ಮದ್ಯದ ಅಮಲಿನಲ್ಲಿದ್ದ ಶ್ರೀರಾಮ್‌ ಅವರು ಅಂಬೇಡ್ಕರ್ ಕಾಲೇಜು ಬಳಿ ನಡೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಆಟೋ ಚಾಲಕ ಪೃಥ್ವಿ ರಾಜ್‌ ತಮ್ಮ ಆಟೋವನ್ನು ಸ್ವಚ್ಛಗೊಳಿಸುತ್ತಿದ್ದರು. ಆಟೋ ಬಾಡಿಗೆ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿದ್ದು, ಜಗಳ ತಾರಕ್ಕೇರಿದ್ದಾಗ ಪೃಥ್ವಿ ರಾಜ್‌, ಶ್ರೀರಾಮ್‌ ಅವರ ಮೇಲೆ ಹಲ್ಲೆ ಮಾಡಿ ಕೆಳಗೆ ತಳ್ಳಿದ್ದರು. ಈ ವೇಳೆ ಆತನ ತಲೆಗೆ ಗಂಭೀರವಾದ ಗಾಯವಾಗಿತ್ತು. ನಂತರ ಅಲ್ಲಿಂದ ತೆರಳಿದ ಶ್ರೀರಾಮ್‌ ನಾಗರಭಾವಿ ರಿಂಗ್‌ ರೋಡ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಗಸ್ತಿನಲ್ಲಿದ್ದ ಹೊಯ್ಸಳ ಪೊಲೀಸರು ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅದೇ ದಿನ ಶ್ರೀರಾಮ್‌ ಮೃತಪಟ್ಟಿದ್ದರು. ಶ್ರೀರಾಮ್‌ ದೇಹದ ಮೇಲೆ ಇದ್ದ ಗಾಯದ ಗುರುತುಗಳನ್ನು ಗಮನಿಸಿದ ಕುಟುಂಬದವರು ಅನುಮಾನ ವ್ಯಕ್ತಪಡಿಸಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರಂಭದಲ್ಲಿ ಅಸಹಜ ಸಾವು ಪ್ರಕರಣ (ಯುಡಿಆರ್‌) ದಾಖಲಿಸಿಕೊಂಡಿದ್ದರು.

ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸಾವು:

ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಇತ್ತೀಚೆಗೆ ಬಂದ ವರದಿಯಲ್ಲಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಶ್ರೀರಾಮ್‌ ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು. ನಂತರ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆಟೋ ಚಾಲಕನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.