ಸಣ್ಣಪುಟ್ಟ ವಿಸ್ತೀರ್ಣದ ಜಮೀನುಗಳಿಗಾಗಿ ಪ್ರತಿಷ್ಠೆಗಳಿಗೆ ಬಿದ್ದು ಅನೇಕರು ನ್ಯಾಯಾಲಯಗಳಲ್ಲಿ ಪ್ರಕರಣಗಳಿಗೆ ತಲೆಮಾರುಗಟ್ಟಲೇ ಮತ್ತು ಅನೇಕ ವರ್ಷಾನುಗಟ್ಟಲೆ ಓಡಾಡುತ್ತಿರುವವರು ಅನೇಕರಿದ್ದಾರೆ‌. ಪ್ರತಿ ಸಣ್ಣಪುಟ್ಟ ವಿಚಾರಗಳನ್ನೂ ವ್ಯಾಜ್ಯಗಳನ್ನಾಗಿ ಪರಿವರ್ತಿಸಿಕೊಳ್ಳಬಾರದು. ಸಂಯಮದಿಂದ ಪರಿಸ್ಥಿತಿಗಳನ್ನು ನಿಭಾಯಿಸಿ ಮುಂದೆ ಎದುರಾಗುವ ಸಮಸ್ಯೆಗಳಿಗೆ ಮೂಲದಲ್ಲೇ ಕಡಿವಾಣ ಹಾಕಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಲೋಕ ಅದಾಲತ್‌ನಲ್ಲಿ ನೀಡುವ ತೀರ್ಪು ನ್ಯಾಯಾಲಯದಲ್ಲಿ ಸಹಜವಾಗಿ ನಡೆಯುವ ಪ್ರಕರಣಗಳ ತೀರ್ಪುಗಳಿಗಿಂತ ಭಿನ್ನವಾಗಿದ್ದು, ಉಭಯ ಕಕ್ಷಿದಾರರಿಗೂ ಸಮಾಧಾನ ಮತ್ತು ನೆಮ್ಮದಿ ಹಾಗೂ ಸಮಯ ಉಳಿತಾಯ ದೊರೆಯುತ್ತದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಟಿ.ಪಿ.ರಾಮಲಿಂಗೇಗೌಡ ತಿಳಿಸಿದರು.

ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮೆಗಾ ಲೋಕ ಅದಾಲತ್‌ಗೆ ಚಾಲನೆ ನೀಡಿ ಮಾತನಾಡಿ, ಅಣ್ಣ ತಮ್ಮಂದಿರು ತಮ್ಮ ಜಮೀನು, ಆಸ್ತಿಪಾಸ್ತಿಗಳ ಸಮಸ್ಯೆಗಳನ್ನು ಮೂಲದಲ್ಲೇ ಬಗೆ ಹರಿಸಿಕೊಂಡರೆ ಸಮಸ್ಯೆಗಳು ಪ್ರಕರಣಗಳಾಗಿ ನ್ಯಾಯಾಲಯದ ಮೆಟ್ಟಿಲು ಹತ್ತುವ ಅವಶ್ಯಕತೆ ಇರುವುದಿಲ್ಲ. ಕುಟುಂಬಗಳ ಹಂತದಲ್ಲೇ ಪಿತ್ರಾರ್ಜಿತ ಆಸ್ತಿಪಾಸ್ತಿಯನ್ನು ನ್ಯಾಯಯುತ ರೀತಿಯಲ್ಲಿ ಮುಕ್ತವಾಗಿ ಹಂಚಿಕೊಂಡರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದರು.

ಮೂಲದಲ್ಲೇ ಕಡಿವಾಣ ಹಾಕಿ

ಸಣ್ಣಪುಟ್ಟ ವಿಸ್ತೀರ್ಣದ ಜಮೀನುಗಳಿಗಾಗಿ ಪ್ರತಿಷ್ಠೆಗಳಿಗೆ ಬಿದ್ದು ಅನೇಕರು ನ್ಯಾಯಾಲಯಗಳಲ್ಲಿ ಪ್ರಕರಣಗಳಿಗೆ ತಲೆಮಾರುಗಟ್ಟಲೇ ಮತ್ತು ಅನೇಕ ವರ್ಷಾನುಗಟ್ಟಲೆ ಓಡಾಡುತ್ತಿರುವವರು ಅನೇಕರಿದ್ದಾರೆ‌. ಪ್ರತಿ ಸಣ್ಣಪುಟ್ಟ ವಿಚಾರಗಳನ್ನೂ ವ್ಯಾಜ್ಯಗಳನ್ನಾಗಿ ಪರಿವರ್ತಿಸಿಕೊಳ್ಳಬಾರದು. ಸಂಯಮದಿಂದ ಪರಿಸ್ಥಿತಿಗಳನ್ನು ನಿಭಾಯಿಸಿ ಮುಂದೆ ಎದುರಾಗುವ ಸಮಸ್ಯೆಗಳಿಗೆ ಮೂಲದಲ್ಲೇ ಕಡಿವಾಣ ಹಾಕಬೇಕು. ಪ್ರಕರಣಗಳು ದಾಖಲಾಗುವುದರಿಂದ ಅಮೂಲ್ಯವಾದ ಸಮಯ, ಹಣ, ನೆಮ್ಮದಿ ಹಾಳಾಗುತ್ತದೆ ಎಂದರು. ನ್ಯಾಯಾಲಯಗಳಲ್ಲೂ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗಿರುವುದರಿಂದ ನ್ಯಾಯಾಲಯಗಳ ಮೇಲೂ ಒತ್ತಡ ಅಧಿಕವಾಗಿ ಹೊರೆಯೂ ಹೆಚ್ಚಾಗುತ್ತಿದೆ. ಇದರಿಂದ ಪ್ರಕರಣಗಳನ್ನು ಇತ್ಯರ್ಥಪಡಿಸುವುದು ಸಹಜವಾಗಿ ತಡವಾಗುತ್ತದೆ. ಕೆಲವೊಮ್ಮೆ ದೀರ್ಘಕಾಲ ಹಿಡಿಯುತ್ತದೆ, ಇದನ್ನು ತಡೆಗಟ್ಟವ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ರಾಷ್ಟ್ರೀಯ ಲೋಕ ಅದಾಲತ್ ಆರಂಭಿಸಿದೆ. ಈ ಅದಾಲತ್ ಮೂಲಕ ನ್ಯಾಯಾಲಯದಲ್ಲಿ ಹಾಲಿ ಇರುವ ವಿವಿಧ ಕೆಲವು ಪ್ರಕರಣಗಳು, ವ್ಯಾಜ್ಯಪೂರ್ವ ಪ್ರಕರಣಗಳನ್ನು ವಕೀಲರ ಸಹಕಾರದೊಂದಿಗೆ ಕಕ್ಷಿದಾರರ ಪರಸ್ಪರ ರಾಜಿ, ಸಂಧಾನದೊಂದಿಗೆ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದೆ ಎಂದರು.

ಅದಾಲತ್‌ನಲ್ಲಿ ವಿವಾದ ಸುಖಾಂತ್ಯ

ಲೋಕ ಅದಾಲತ್‌ನಲ್ಲಿ ಪ್ರಕರಣಗಳನ್ನು ಸ್ವಯಂ ಪ್ರೇರಿತರಾಗಿ ಇತ್ಯರ್ಥಪಡಿಸಿಕೊಳ್ಳಲು ಎರಡೂ ಕಡೆಯವರಿಗೂ ಒಪ್ಪಿಗೆಯಾಗುವಂತೆ ಪ್ರಕರಣ ತೀರ್ಮಾನವಾಗುವುದರಿಂದ ಇಬ್ಬರ ನಡುವಿನ ಬಾಂಧವ್ಯ ಉಳಿದು ವಿವಾದವು ಸುಖಾಂತ್ಯಗೊಳ್ಳುತ್ತದೆ. ನ್ಯಾಯಾಲಯದಲ್ಲಿ ದಾಖಲಾಗದೇ ಇರುವ ವ್ಯಾಜ್ಯ ಪೂರ್ವ ಪ್ರಕರಣಗಳನ್ನೂ ಸಹ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶವಿರುತ್ತದೆ. ಸಂಧಾನಕಾರರು ಸೂಚಿಸುವ ಪರಿಹಾರ ಸಮ್ಮತಿಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು. ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಲೋಕ ಅದಾಲತ್ ವಿಶೇಷ ಎಂದರು.

ಪ್ರಕರಣಕ್ಕೆ ಶೀಘ್ರ ಮುಕ್ತಿ

ಅದಾಲತ್ ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಕಕ್ಷಿದಾರರು ಮುಂದಾಗುವುದರಿಂದ ಪ್ರಕರಣಗಳಿಗೆ ಶೀಘ್ರ ಮುಕ್ತಿ ದೊರೆಯುತ್ತದೆ. ಹಣ,ಸಮಯ ಉಳಿಯುವ ಜೊತೆಗೆ ಪದೇ ಪದೇ ನ್ಯಾಯಾಲಯಕ್ಕೆ ಅಲೆಯುವುದು ತಪ್ಪುತ್ತದೆ.ಕಕ್ಷಿದಾರರ ನಡುವಿನ ವೈಮನ್ಯಸ್ಸು,ಭಿನ್ನಾಭಿಪ್ರಾಯ, ದ್ವೇಷ ಕಡಿಮೆಯಾಗಿ ಇಬ್ಬರ ನಡುವೆ ಸಾಮರಸ್ಯ, ಸೌಹಾರ್ದತೆಯ ವಾತಾವರಣ ನಿರ್ಮಾಣವಾಗಿ ಸಮಾಜದಲ್ಲಿ ಶಾಂತಿ ನೆಮ್ಮದಿಯೂ ನಿರ್ಮಾಣವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ನ್ಯಾಯಾಧೀಶರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಭಿಲಾಷ್ ಸೇರಿದಂತೆ ವಕೀಲರು, ಕಕ್ಷಿದಾರರು ಇದ್ದರು.