ಸಾರಾಂಶ
ಶಾಸಕ ಮುನಿರತ್ನ ಗುತ್ತಿಗೆದಾರ ಚಲುವರಾಜ ಅವರೊಂದಿಗೆ ಹಣಕಾಸಿನ ವಿಚಾರವಾಗಿ ಮಾತುಕತೆ ವೇಳೆ ಅವಾಚ್ಯವಾಗಿ ಮಾತನಾಡಿದ್ದಲ್ಲದೆ ಜಾತಿ ನಿಂದನೆ ಮಾಡಿದ್ದಾರೆ.
ನವಲಗುಂದ:
ಅತ್ಯಾಚಾರ ಆರೋಪದಲ್ಲಿ ಬಂಧಿತರಾಗಿರುವ ಹಾಗೂ ಪರಿಶಿಷ್ಟ ಜಾತಿ ಮತ್ತು ಒಕ್ಕಲಿಗ ಸಮುದಾಯದ ಬಗ್ಗೆ ಕೀಳಾಗಿ ಮಾತನಾಡಿರುವ ಶಾಸಕ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು. ಜತೆಗೆ ಎಸ್ಸಿ-ಎಸ್ಟಿ ದೌರ್ಜನ್ಯ ತಿದ್ದುಪಡಿ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ತಾಲೂಕು ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದಿಂದ ತಹಸೀಲ್ದಾರ್ ಸುಧೀರ ಸಾವಕಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜು ದೊಡಮನಿ, ಶಾಸಕ ಮುನಿರತ್ನ ಗುತ್ತಿಗೆದಾರ ಚಲುವರಾಜ ಅವರೊಂದಿಗೆ ಹಣಕಾಸಿನ ವಿಚಾರವಾಗಿ ಮಾತುಕತೆ ವೇಳೆ ಅವಾಚ್ಯವಾಗಿ ಮಾತನಾಡಿದ್ದಲ್ಲದೆ ಜಾತಿ ನಿಂದನೆ ಮಾಡಿದ್ದಾರೆ. ಒಕ್ಕಲಿಗ ಸಮುದಾಯದ ಮಹಿಳೆಯರನ್ನು ಕೂಡ ಕೀಳಾಗಿ ಕಂಡಿದ್ದು ಅವರ ಎಸ್ಸಿ-ಎಸ್ಟಿ ದೌರ್ಜನ್ಯ ತಿದ್ದುಪಡಿ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು. ಈ ಮೂಲಕ ನೊಂದ ಸಮುದಾಯಗಳಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು.
ವಿಧಾನಸಭೆ ಅಧ್ಯಕ್ಷರು ಕೂಡಲೇ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಇದೇ ವೇಳೆ ಆಗ್ರಹಿಸಿದರು.ಈ ವೇಳೆ ವರ್ಧಮಾನಗೌಡ ಹಿರೇಗೌಡ್ರು, ಆನಂದ ಹವಳಕೋಡ, ಅಶೋಕ ದೊಡ್ಡಮನಿ, ನಾಗಲಿಂಗಪ್ಪ ದೊಡಮನಿ, ಸಂಜು ಬಸಾಪುರ, ಶಂಕರ ಬಸಾಪುರ, ಕುಮಾರ ಲಕ್ಕಮ್ಮನವರ, ದಿಲೀಪ ರತ್ನಾಕರ, ಅರುಣ ಸುಣಗಾರ, ಶಿವಾನಂದ ಚಲವಾದಿ, ನಂದಿನಿ ಹಾದಿಮನಿ, ಪ್ರಭು ಮಾದರ, ನಿಂಗಪ್ಪ ಕೆಳಗೇರಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.