ಸಾರಾಂಶ
ಜಿಲ್ಲಾಡಳಿತ ನಡೆಸಿದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಕನ್ನಡಭಾಷೆಗೆ ಮೆರಗು ತಂದ ಬಸವಣ್ಣ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಶರಣರ ಭಾವಚಿತ್ರಗಳನ್ನು ಮುದ್ರಿಸಬೇಕು ಹಾಗೂ ಶರಣರ ಹೆಸರಿನಲ್ಲಿ ಮಹಾದ್ವಾರಗಳನ್ನು ನಿರ್ಮಾಣ ಮಾಡಿ ಗೌರವಿಸಬೇಕೆಂದು ಮನವಿ ನೀಡಿದ್ದರೂ ಸಹ ಕಸಾಪ ರಾಜ್ಯಾಧ್ಯಕ್ಷರು ಉದ್ದೇಶ ಪೂರ್ವಕವಾಗಿ ಕಡೆಗಣಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರವನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಪೋಸ್ಟರ್ ಹಾಗೂ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸದೆ ಅಗೌರವ ತೋರಿಸಲಾಗಿದೆ ಎಂದು ಕಲ್ಯಾಣ ಬಸವೇಶ್ವರ ಮಠದ ಪೀಠಾಧ್ಯಕ್ಷ ಓಂಕಾರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲಾಡಳಿತ ನಡೆಸಿದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಕನ್ನಡಭಾಷೆಗೆ ಮೆರಗು ತಂದ ಬಸವಣ್ಣ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಶರಣರ ಭಾವಚಿತ್ರಗಳನ್ನು ಮುದ್ರಿಸಬೇಕು ಹಾಗೂ ಶರಣರ ಹೆಸರಿನಲ್ಲಿ ಮಹಾದ್ವಾರಗಳನ್ನು ನಿರ್ಮಾಣ ಮಾಡಿ ಗೌರವಿಸಬೇಕೆಂದು ಮನವಿ ನೀಡಿದ್ದರೂ ಸಹ ಕಸಾಪ ರಾಜ್ಯಾಧ್ಯಕ್ಷರು ಉದ್ದೇಶ ಪೂರ್ವಕವಾಗಿ ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದಾರೆ.
12ನೇ ಶತಮಾನದಲ್ಲಿ ವಚನಸಾಹಿತ್ಯ ರಚನೆ ಮೂಲಕ ಕನ್ನಡಭಾಷೆ ದೈವೀಕರಿಸಿ ದೇಶ ವಿದೇಶಗಳಲ್ಲಿ ಕನ್ನಡದ ಕಂಪು ಬೀರಿದ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿದರ ಫಲವಾಗಿ ವಿವಿಧ ದೇಶ ಮತ್ತು ನಾಡಿನಿಂದ 770 ಅಮರ ಗಣಂಗಳು ಮತ್ತು ಒಂದು ಲಕ್ಷದ 96 ಸಾವಿರ ಶರಣರು ಸೇರಲು ಕಾರಣೀಭೂತರಾಗಿ ಕರ್ನಾಟಕದ ಕೀರ್ತಿ ವಿದೇಶದಲ್ಲೆಲ್ಲಾ ಹರಡಲು ಕಾರಣರಾಗಿದ್ದಾರೆ ಎಂದು ತಿಳಿಸಿದ್ದಾರೆ.ವಿದೇಶ, ವಿವಿಧ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದ ಪರಭಾಷಿಕರಿಗೆ ಕನ್ನಡವನ್ನು ಕಲಿಸಿ ಕನ್ನಡದ ಪ್ರಥಮ ಅಭಿಮಾನಿಯಾದವರು ವಿಶ್ವಗುರು ಬಸವಣ್ಣನವರು. ವಿಧಾನಸೌಧದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಅನಾವರಣ ಮಾಡುವುದರ ಮೂಲಕ ಕರ್ನಾಟಕದ ಸಂಸ್ಕೃತಿಕ ನಾಯಕ ಎಂದು ಘೋಷಿಸಿದ್ದರೂ ಸಾಹಿತ್ಯ ಸಮ್ಮೇಳನದಲ್ಲಿ ಕಡೆಗಣಿಸುತ್ತಿರುವುದು ಖಂಡನೀಯ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಸಾಹಿತ್ಯ ಸಮ್ಮೇಳನದಲ್ಲಿ ವಿಶ್ವಗುರು ಬಸವಣ್ಣನವರನ್ನು ಕುರಿತು ಹಾಗೂ ಬಸವಾದಿ ಶರಣರನ್ನು ಕುರಿತು ವಿಚಾರಗೋಷ್ಠಿ ಉಪನ್ಯಾಸ ವಚನ ನೃತ್ಯ ಏರ್ಪಡಿಸಬೇಕು. ಸಮಾನತೆಯ ತತ್ವ ಪ್ರಚುರಪಡಿಸಬೇಕು. ಸಮ್ಮೇಳನದಲ್ಲಿ ಬಸವಣ್ಣನವರ ಹೆಸರಿನಲ್ಲಿ ದ್ವಾರ ಹಾಗೂ ಸಭಾ ಮಂಟಪ, ವಿಚಾರಗೋಷ್ಠಿಗಳನ್ನು ಏರ್ಪಡಿಸಿ ಸಾಂಸ್ಕೃತಿಕ ನಾಯಕನಿಗೆ ಗೌರವ ಹೆಚ್ಚಿಸುವ ಕೆಲಸವನ್ನು ಜಿಲ್ಲಾಡಳಿತ ಹಾಗೂ ಸರ್ಕಾರ ಮಾಡಬೇಕೆಂದು ಒತ್ತಾಯಿಸಿದ್ದಾರೆ.