ಸಾರಾಂಶ
ಸಮಸ್ಯೆಗಳನ್ನಿಟ್ಟುಕೊಂಡು ದಲಿತರು ದೂರು ನೀಡಲು ಹೋದರೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಂದಿಸುವುದಿಲ್ಲ ಎಂದು ಹಾಸನದಲ್ಲಿ ದಲಿತ ಸಂಘರ್ಷ ಸಮಿತಿ ಹಿರಿಯ ಮುಖಂಡ ಎಚ್.ಕೆ. ಸಂದೇಶ್ ಎಚ್ಚರಿಸಿದರು.
ಪ್ರತಿಭಟನೆ ಮಾಡುವುದಾಗಿ ಡಿಎಸ್‌ಎಸ್ ಮುಖಂಡ ಸಂದೇಶ್ ಎಚ್ಚರಿಕೆ ಕನ್ನಡಪ್ರಭ ವಾರ್ತೆ ಹಾಸನ
ಸಮಸ್ಯೆಗಳನ್ನಿಟ್ಟುಕೊಂಡು ದಲಿತರು ದೂರು ನೀಡಲು ಹೋದರೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಂದಿಸುವುದಿಲ್ಲ. ಹೀಗೆ ಮುಂದುವರಿದರೆ ಮುಖ್ಯಮಂತ್ರಿಗೆ ದೂರು ನೀಡಬೇಕಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ ಹಿರಿಯ ಮುಖಂಡ ಎಚ್.ಕೆ. ಸಂದೇಶ್ ಎಚ್ಚರಿಸಿದರು.ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಜಿಲ್ಲೆಯ ವಿವಿಧೆಡೆ ದಲಿತರ ಮೇಲಿನ ದೌರ್ಜನ್ಯ ನಡೆಯುತ್ತಿದ್ದರೂ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಡಳಿತ ವಿಫಲವಾಗಿದೆ. ಒಂದಲ್ಲ ಒಂದು ಕಾರಣಕ್ಕೆ ದಲಿತರು, ದುರ್ಬಲರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಅಪಮಾನ ನಡೆಯುತ್ತಲೇ ಇದೆ ಎಂದು ದೂರಿದರು.
‘ಈ ಸಂಬಂಧ ನಾವು ದೂರು ನೀಡಲು ಹೋದರೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಮ್ಮ ಸಮಸ್ಯೆ ಆಲಿಸುವುದಿರಲಿ, ಕೇಳುವುದಕ್ಕೂ ವ್ಯವಧಾನ, ಸೌಜನ್ಯ ತೋರಲಿಲ್ಲ. ಜಿಲ್ಲೆಗೆ ಬಂದಾಗ ಪ್ರತಿಯೊಬ್ಬ ನೊಂದವರ, ಬಡವರ ಹಾಗೂ ಸಮಾಜದ ನೋವು-ನಲಿವಿಗೆ ಸ್ಪಂದಿಸಲಿದ್ದಾರೆ. ದನಿಯಾಗಲಿದ್ದಾರೆ ಎಂಬ ಆಶಾಭಾವ ಇತ್ತು. ಆದರೀಗ ದಮನಿತರಿಗೆ ಆಗುತ್ತಿರುವ ಅನ್ಯಾಯ, ನೋವು ಹೇಳಲು ಹೋದರೆ ಕೇಳಿಸಿಕೊಳ್ಳುತ್ತಿಲ್ಲ. ದಲಿತರ ಮೇಲೆ ದೌರ್ಜನ್ಯ ನಡೆದರೆ ತುರ್ತು ಕ್ರಮ ಕೈಗೊಳ್ಳಿ ಎಂಬ ಸಿಎಂ ಅವರ ಆದೇಶಕ್ಕೂ ಇಲ್ಲಿ ಮಾನ್ಯತೆ ಸಿಗುತ್ತಿಲ್ಲ’ ಎಂದು ಆರೋಪಿಸಿದರು.ಮಡೆನೂರು ಬಳಿಯ ಸತ್ತಿಗನಹಳ್ಳಿ ದೇವಾಲಯಕ್ಕೆ ದಲಿತರ ಪ್ರವೇಶ ನಿರಾಕರಿಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆದರೂ ಅಲ್ಲಿಗೆ ಮೇಲಾಧಿಕಾರಿಗಳು ಬರಲಿಲ್ಲ. ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಚನ್ನರಾಯಪಟ್ಟಣ ತಾಲೂಕು ಬಂಡಿಹಳ್ಳಿ ಗ್ರಾಮದಲ್ಲಿ ರಂಗಪ್ಪ ಎಂಬ ದಲಿತನಿಗೆ ಜಮೀನು ವಿಚಾರವಾಗಿ ಸವರ್ಣೀಯರು ತೊಂದರೆ ಕೊಡುತ್ತಿದ್ದಾರೆ. ಇತ್ತೀಚೆಗೆ ಹೊಸಬೈಕ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ತೀವ್ರ ಒತ್ತಡದ ನಂತರ ಅಳೆದು ತೂಗಿ ಒಬ್ಬನನ್ನು ಮಾತ್ರ ಬಂಧಿಸಿದ್ದಾರೆ. ಉಳಿದವರನ್ನೂ ಬಂಧಿಸಬೇಕು. ಕೇವಲ ದಲಿತರಷ್ಟೇ ಅಲ್ಲ, ಎಲ್ಲ ಬಡವರ ಜೊತೆ ಜಿಲ್ಲಾಧಿಕಾರಿ, ಎಸ್ಪಿ ಮಾತನಾಡಬೇಕು. ಜಿಲ್ಲೆಯ ಆಗುಹೋಗು ಅರ್ಥ ಮಾಡಿಕೊಳ್ಳಬೇಕು. ಕೂಡಲೇ ಶಾಂತಿಗ್ರಾಮದಲ್ಲಿ ಶಾಂತಿ ಸಭೆ ಮಾಡಬೇಕು. ದೌರ್ಜನ್ಯ ಎಸಗುತ್ತಿರುವವರನ್ನು ಶಿಕ್ಷಿಸಬೇಕು. ಇಲ್ಲವಾದರೆ ಸಿಎಂಗೆ ದೂರು ಕೊಡುವುದರ ಜತೆಗೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ವಿವಿಧ ದಲಿತ ಸಂಘಟನೆ ಮುಖಂಡರಾದ ಆರ್.ಪಿ.ಐ. ಸತೀಶ್, ವಿಜಯಕುಮಾರ್, ಶಿವಮ್ಮ, ಅಂಬುಗ ಮಲ್ಲೇಶ್, ಹೆತ್ತೂರು ನಾಗರಾಜ್, ಪ್ರಸನ್ನ ಇದ್ದರು.ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿವಿಧ ದಲಿತ ಸಂಘಟನೆಗಳ ಮುಖಂಡರು.