ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ತಾಲೂಕಿನ ನಾಗಲಮಡಿಕೆ ಹೋಬಳಿ ವ್ಯಾಪ್ತಿಯ ಬಿ.ಕೆ.ಹಳ್ಳಿ ಗ್ರಾಮದಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯಗಳ ನಡುವೆ ಗಣಪತಿ ವಿಸರ್ಜನೆ ವಿಚಾರವಾಗಿ ಗಲಾಟೆ ನಡೆದು ಎಸ್ಸಿ ಜನಾಂಗದವರು ಗಣಪತಿ ವಿಸರ್ಜನೆ ಕೈ ಬಿಟ್ಟು ಗಣಪತಿ ಮೂರ್ತಿ ಸಮೇತ ಗ್ರಾಪಂ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.ಗಣೇಶ ಹಬ್ಬದ ಹಿನ್ನೆಲೆಯಲ್ಲಿ ದಲಿತರು ಮತ್ತು ನಾಯಕ ಸಮುದಾಯದವರು ಪ್ರತ್ಯೇಕವಾಗಿ ತಮ್ಮ ಗ್ರಾಮದ ಕಾಲೋನಿಗಳಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದರು. ಸೋಮವಾರ ಈ ಎರಡು ಕಾಲೋನಿಗಳಲ್ಲಿನ ಗಣೇಶ ವಿಸರ್ಜನೆ ನಡೆಯುತ್ತಿತ್ತು. ಮೊದಲು ನಾಯಕ ಸಮಾಜವರು ಸಡಗರ ಸಂಭ್ರಮದಿಂದ ಮೆರವಣಿಗೆ ಮೂಲಕ ಗಣೇಶ ವಿಸರ್ಜನೆ ಕಾರ್ಯ ಮುಗಿಸಿದ್ದರು. ನಂತರ ಅದೇ ರಸ್ತೆಯಲ್ಲಿ ದಲಿತರು ಗಣೇಶ ವಿಸರ್ಜನೆಗೆ ಬರುತ್ತಿದ್ದಂತೆ ನಾಯಕ ಸಮಾಜದವರು ಅಡ್ಡಿಪಡಿಸಿದ್ದರಿಂದ ದಲಿತರು ಸೋಮವಾರ ತಡರಾತ್ರಿಯಿಂದಲೇ ವಿಸರ್ಜನೆ ಕಾರ್ಯ ಕೈಬಿಟ್ಟು, ಗಣೇಶ ವಿಗ್ರಹ ಸಮೇತ ಗ್ರಾಪಂ ಕಚೇರಿಯ ಬಳಿ ಪ್ರತಿಭಟನೆ ಕೈಗೊಂಡಿದ್ದರು. ವಿಚಾರ ತಿಳಿಯುತ್ತಿದ್ದಂತೆ ದಲಿತ ಪರ ಸಂಘಟನೆಯ ಅನೇಕ ಮುಖಂಡರು ತೆರಳಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಆಸ್ಪೃಶ್ಯತೆ ಆಚರಣೆ ವಿರುದ್ಧ ಧ್ವನಿ ಎತ್ತಿದ್ದರು. ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ವಿಚಾರ ತಿಳಿಯುತ್ತಿದ್ದಂತೆ ತುಮಕೂರು ಅಡಿಷನಲ್ ಎಸ್‌ಪಿ ಖಾದರ್, ಡಿವೈಎಸ್‌ಪಿ ರಾಮಚಂದ್ರಪ್ಪ, ತಹಸೀಲ್ದಾರ್ ವರದರಾಜ್ ಹಾಗೂ ಸಿಪಿಐ ಸುರೇಶ್ ಪ್ರತಿಭಟನೆ ಸ್ಥಳಕ್ಕೆ ಧಾವಿಸಿ ಘಟನೆ ಬಗ್ಗೆ ಎರಡು ಗುಂಪುಗಳಿಂದ ಮಾಹಿತಿ ಕಲೆಹಾಕಿದ ಬಳಿಕ ಗ್ರಾಮದಲ್ಲಿ ಶಾಂತಿ ಸಂಧಾನ ಸಭೆ ನಡೆಸಿದರು.
ಈ ವೇಳೆ ಗ್ರಾಪಂ ಮಾಜಿ ಸದಸ್ಯ ರಾಮಪ್ಪ ಮಾತನಾಡಿ ಬಿ.ಕೆ.ಹಳ್ಳಿ ಗ್ರಾಮದಲ್ಲಿ ಜಾತಿ ಪದ್ಧತಿ ಜೀವಂತವಾಗಿದ್ದು ಗಣೇಶ ಹಬ್ಬ ಸೇರಿದಂತೆ ಯಾವುದೇ ಹಬ್ಬ ಆಚರಣೆ ಮಾಡಿದರೂ ಮೇಲ್ಜಾತಿಯವರು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಗಣೇಶ ವಿಸರ್ಜನೆ ವೇಳೆ ವಿನಾಕಾರಣ ಎಸ್‌ಟಿ ಸಮಾಜದವರು ತಗಾದೆ ತೆಗೆದು ಮೆರವಣಿಗೆ ಅಡ್ಡಿಪಡಿಸಿದ್ದಾರೆ. ನಾವು ಯಾರ ತಂಟೆಗೊ ಹೋಗಲ್ಲ. ಆದರೆ ನಾವು ಊರ ಕಟ್ಟೆ ಮೇಲೆ ಕೂರೋ ಹಾಗಿಲ್ಲ. ಧೈರ್ಯವಾಗಿ ಓಡಾಡೋ ಹಾಗಿಲ್ಲ. ನಮ್ಮ ಮೇಲೆ ಪದೇ ಪದೇ ದೌರ್ಜನ್ಯ ನಡೆಯುತ್ತಿರುವುದು ಸಾಮಾನ್ಯವಾಗಿದ್ದು ನಮಗೆ ಸೂಕ್ತ ಬಂದೋಬಸ್ತ್ ಹಾಗೂ ನ್ಯಾಯ ಕಲ್ಪಿಸುವಂತೆ ಪೊಲೀಸ್ ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಿದರು.ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಪಾಳೇಗಾರ ಲೋಕೇಶ್ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಈ ಎರಡು ಒಂದೇ. ಕಾಲ ಬದಲಾಗಿದೆ. ದೌರ್ಜನ್ಯ ದಬ್ಬಾಳಿಕೆ ಸೂಕ್ತವಲ್ಲ .ಸಂವಿಧಾನದ ಆಶಯಗಳ ಅಡಿ ಬದುಕು ರೂಪಿಸಿಕೊಳ್ಳಬೇಕು. ವಿದ್ಯಾವಂತರಾಗಿ ಒಳ್ಳೆಯ ಹುದ್ದೆಗಳತ್ತ ಆಸಕ್ತಿವಹಿಸುವಂತೆ ದಲಿತ ಮತ್ತು ನಾಯಕರಿಗೆ ಕರೆ ನೀಡಿದರು.ಸಮಸ್ಯೆ ಅಲಿಸಿದ ಬಳಿಕ ಡಿವೈಎಸ್‌ಪಿ ರಾಮಚಂದ್ರಪ್ಪ ಮಾತನಾಡಿ, ಗ್ರಾಮದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳಬೇಕು. ದೌರ್ಜನ್ಯ ದ್ವೇಷ ಇವುಗಳಿಂದ ದೂರ ಸರಿಯಬೇಕು. ಜಾತಿ ತಾರತಮ್ಯ ಸರಿಯಲ್ಲ, ನಾವೆಲ್ಲಾ ಒಂದೇ ಎಂಬ ಭಾವನೆ ರೂಪಿಸಿಕೊಳ್ಳಬೇಕು. ಸಮಾನತೆಯ ಪರಿಕಲ್ಪನೆಯಲ್ಲಿ ಬದುಕು ಕಟ್ಟಿಕೊಳ್ಳಬೇಕು. ಸಂವಿಧಾನದ ಆಶಯಗಳಂತೆ ವಿದ್ಯಾವಂತರಾಗಿ ಅಭಿವೃದ್ಧಿ ಕಾಣುವಂತೆ ಸಲಹೆ ನೀಡಿದರು. ತಹಸೀಲ್ದಾರ್ ವರದರಾಜ್, ಸಿಪಿಐ ಸುರೇಶ್, ತಿರುಮಣಿ ಪೊಲೀಸ್ ಠಾಣೆ ಪಿಎಸ್‌ಐ ಲಕ್ಷ್ಮಣ್,ದಲಿತ ಸಂಘಟನೆಯ ಮುಖಂಡರಾದ ಸಿ.ಕೆ.ತಿಪ್ಪೇಸ್ವಾಮಿ,ವಳ್ಳೂರು ನಾಗೇಶ್, ಬಿ.ಪಿ.ಪೆದ್ದನ್ನ, ಕಡಮಲಕುಂಟೆ ಹನುಮಂತರಾಯಪ್ಪ, ಬಿಎಸ್‌ಪಿ ಮಂಜುನಾಥ್, ಮೀನಗುಂಟೆನಹಳ್ಳಿ, ಕಡಪಲಕರೆ ನರಸಿಂಹಪ್ಪ, ಭಾಸ್ಕರ್‌ನಾಯಕ, ಬೇಕರಿ ನಾಗರಾಜ್, ಪಿಡಿಒ ಮುತ್ಯಾಲಪ್ಪ, ಅನಿಲ್‌ಕುಮಾರ್ ಇತರೆ ಆನೇಕ ಮಂದಿ ಗಣ್ಯರು ಉಪಸ್ಥಿತರಿದ್ದರು.