ಸಾರಾಂಶ
ನಕಾರಾತ್ಮಕ ಭಾವನೆಗಳನ್ನು ಹತೋಟಿಗೆ ತರಲು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ನಡೆಯುವ ರಾಜಯೋಗವೊಂದೇ ಪರಿಹಾರ. ಎಲ್ಲರೂ ಈ ರಾಜಯೋಗದಲ್ಲಿ ಪಾಲ್ಗೊಳ್ಳುವ ಮೂಲಕ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಸ್ತುತ ಮನುಷ್ಯನಲ್ಲಿ ಹೆಚ್ಚಾಗಿರುವ ನಕಾರಾತ್ಮಕ ಸಂಕಲ್ಪ, ಭಾವನೆಗಳಿಂದ ರಾಷ್ಟ್ರ ಮತ್ತು ವಿಶ್ವದಲ್ಲಿ ವಿಕಾರಕಗಳು ವಿಜೃಂಭಿಸುತ್ತಿವೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಮಂಡ್ಯ ಶಾಖೆ ಮುಖ್ಯಸ್ಥೆ ಬಿ.ಕೆ. ಶಾರದಾ ಆತಂಕ ವ್ಯಕ್ತಪಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಕಾರಗಳಿಂದಾಗಿ ಇಂದು ಕಾಮ, ಕ್ರೋಧ, ಮಧ, ಮೋಹ, ಮತ್ಸರ, ಅಹಂಕಾರ ಹೆಚ್ಚಾಗಿವೆ. ಅದರಲ್ಲೂ ಕಾಮ ಅತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಂಚ ವಿಕಾರಗಳಿಂದ ಎಲ್ಲ ಸಮಸ್ಯೆಗಳೂ ಉಲ್ಬಣವಾಗುತ್ತಿವೆ. ಇವುಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಅನಿವಾರ್‍ಯ. ಈ ಎಲ್ಲ ಸಮಸ್ಯೆಗಳಿಗೂ ಮೂಲ ಕಾರಣ ಎಂದರೆ ಅದು ನಕಾರಾತ್ಮಕ ಭಾವನೆ. ಒಂದೇ ಒಂದು ನಕಾರಾತ್ಮಕ ಶಕ್ತಿಗಳಿಂದ ಹೊರಬಂದರೆ ವಿಕಾರಕಾರಗಳು ನಡೆಯುವುದಿಲ್ಲ ಎಂದು ಹೇಳಿದರು.ನಕಾರಾತ್ಮಕ ಭಾವನೆಗಳನ್ನು ಹತೋಟಿಗೆ ತರಲು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ನಡೆಯುವ ರಾಜಯೋಗವೊಂದೇ ಪರಿಹಾರ. ಎಲ್ಲರೂ ಈ ರಾಜಯೋಗದಲ್ಲಿ ಪಾಲ್ಗೊಳ್ಳುವ ಮೂಲಕ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಮುಂದುವರಿದ ಅಥವಾ ಅಭಿವೃದ್ಧಿ ಪಥದತ್ತ ಸಾಗುತ್ತಿರುವಾಗ ಕಂಪ್ಯೂಟರ್ ಯುಗದಲ್ಲಿ ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕಾಗಿದೆ.ತಾಂತ್ರಿಕತೆ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಬೆಳವಣಿಗೆ ಕಾಣುತ್ತಿದ್ದೇವೆ. ತಮ್ಮ ಜ್ಞಾನವನ್ನು ಒಳ್ಳೆಯದಕ್ಕೆ ಬಳಸದೆ ವಿವೇಕವನ್ನು ಕಳೆದುಕೊಳ್ಳುವಷ್ಟರ ಮಟ್ಟಿಗೆ ಸಾಗುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಯೊಬ್ಬರೂ ಪರಿಪೂರ್ಣ ಧ್ಯಾನ, ಮಾನಸಿಕ ಸ್ಥಿಮಿತತೆ, ಶಾಂತವಾಗಿರುವುದು, ಖುಷಿಯಾಗಿರುವುದನ್ನು ರೂಢಿಸಿಕೊಳ್ಳಬೇಕು. ಇಂದು ಪಾಶ್ಚಿಮಾತ್ಯ ಸಂಸ್ಕೃತಿಗೆ ನಾವು ಮಾರು ಹೋಗುತ್ತಿದ್ದೇವೆ. ಆದರೆ, ಪಾಶ್ಚಾತ್ಯರು ಭಾರತೀಯ ಸಂಸ್ಕೃತಿ ಅನುಕರಣೆಗೆ ಮುಂದಾಗಿದ್ದಾರೆ. ನಮ್ಮಲ್ಲಿ ಒಳ್ಳೆಯ ಸಂಸ್ಕೃತಿ, ಆಚಾರ ವಿಚಾರಗಳನ್ನು ಮರೆಯುತ್ತಿದ್ದೇವೆ ಎಂದು ವಿಷಾದಿಸಿದರು.ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲೂ ರಾಜಯೋಗದಂತಹ ಯೋಗ ವಿಚಾರ, ಆಧ್ಯಾತ್ಮ ವಿಚಾರಧಾರೆಗಳನ್ನು ತೆರೆದಿಡುವ ಪ್ರಯತ್ನ ಮಾಡುತ್ತಿದ್ದೇವೆ. ಮುಂದೆಯೂ ಇಂತಹ ಕಾರ್‍ಯವನ್ನು ಚುರುಕುಗೊಳಿಸುತ್ತೇವೆ ಎಂದು ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಬಿ.ಕೆ. ಶ್ವೇತ, ಬಿ.ಕೆ. ಗೀತಾಂಜಲಿ, ಬಿ.ಕೆ. ಯಶೋಧ ಇದ್ದರು.