ಸಾರಾಂಶ
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರ ಮುಸುಕಿನ ಗುದ್ದಾಟ ದಿನೇ ದಿನೇ ಸ್ಫೋಟಗೊಳ್ಳುತ್ತಲೇ ಇದೆ. ವಾರದ ಹಿಂದೆ ಜಿಲ್ಲಾ ವೀಕ್ಷಕರಾಗಿ ಬಂದಿದ್ದ ಕೆಪಿಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ ಪ್ರವಾಸಿ ಮಂದಿರದಲ್ಲಿ ನಡೆಸಿದ ಸಭೆಯಲ್ಲೂ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದೂರುಗಳ ಸುರಿಮಳೆಗೈದ ಬಂಡಾಯ ನಾಯಕರ ಗುಂಪು, ಮಂಗಳವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕಾರಹಳ್ಳಿಯ ಖಾಸಗಿ ತೋಟದ ಮನೆಯಲ್ಲಿ ಸಭೆ ನಡೆಸಿ ಶಾಸಕರ ವಿರುದ್ಧ ಹೈಕಮಾಂಡ್ ಗೆ ದೂರು ಸಲ್ಲಿಸಲು ತೀರ್ಮಾನ ಕೈಗೊಂಡಿದ್ದಾರೆ.
ಚಿಕ್ಕಬಳ್ಳಾಪುರ ಕಾಂಗ್ರೆಸ್ ನಲ್ಲಿ ಶಾಸಕ ಪ್ರದೀಪ್ ಈಶ್ವರ್ ಹಿರಿಯ ಕಾಂಗ್ರೆಸ್ ನಾಯಕರನ್ನು ಪರಿಗಣಿಸುತ್ತಿಲ್ಲ. ನಿಗಮ ಮಂಡಳಿಗಳಿಗೆ ಅವರ ಇಷ್ಟಬಂದವರಿಗೆ ಮಾತ್ರ ಶಿಪಾರಸ್ಸು ಮಾಡುತ್ತಿದ್ದಾರೆ. ಪಕ್ಷದ ಪದಾಧಿಕಾರಿಗಳು ಹಿರಿಯರಿಗೆ ಮರ್ಯಾದೆ ಕೊಡುತ್ತಿಲ್ಲ. ಸ್ಥಳೀಯ ಚುನಾವಣೆಗಳಲ್ಲಿ ಹೀನಾಯ ಸೋಲನುಭವಿಸಲು ಶಾಸಕರೇ ಕಾರಣ ಎಂದು ನೇರಾನೇರ ಆರೋಪ ಮಾಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಲಾಢ್ಯ ರಾಜಕಾರಣಿ ಡಾ.ಕೆ.ಸುಧಾಕರ್ ಅವರನ್ನು ಶತಾಯಗತಾಯ ಸೋಲಿಸಲೇಬೇಕು ಎಂಬ ಕೆಚ್ಚಿನಿಂದ ರಾಜಕೀಯ ಕ್ಷೇತ್ರಕ್ಕೆ ಅಂಬೆಗಾಲಿಟ್ಟು ಕಾಂಗ್ರೆಸ್ನಿಂದ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಪ್ರದೀಪ್ ಈಶ್ವರ್ ರವರನ್ನು ಇದೇ ಕಾಂಗ್ರೆಸ್ ಮುಖಂಡರು ಹಗಲು- ಇರುಳು ಅಪಾರ ಶ್ರಮವಹಿಸಿ ವಿಧಾನಸಭೆಯ ಮೆಟ್ಟಲು ಏರುವಂತೆ ಮಾಡಿದ್ದರು.
ಆದರೆ, ಪ್ರಸ್ತುತ ಚಿಕ್ಕಬಳ್ಳಾಪುರ ಕಾಂಗ್ರೆಸ್ ಪಕ್ಷದಲ್ಲಿ ಈಗ ಎಲ್ಲವೂ ಬದಲು, ಅಂದು ಶಾಸಕ ಪ್ರದೀಪ್ ರನ್ನು ಬೆಂಬಲಿಸಿದ್ದವರೇ ಇಂದು ಬಹುತೇಕ ವಿರೋಧಿಸುತ್ತಿದ್ದಾರೆ. ಇದಕ್ಕೆ ಕಾರಣ ಶಾಸಕ ಪ್ರದೀಪ್ ಈಶ್ವರ್ ತಮ್ಮ ಗೆಲುವಿಗೆ ಹಗಲಿರುಳು ಶ್ರಮಿಸಿದವರನ್ನು ಗಣನೆಗೆ ತೆಗೆದುಕೊಳ್ಳದೆ ತಮ್ಮ ಸುತ್ತ ಒಂದು ಆಪ್ತ ವಲಯವನ್ನು ಸೃಷ್ಟಿಸಿಕೊಂಡು ಅವರಿಗೆ ರಾಜಕೀಯ ಸ್ಥಾನಮಾನ ಕೊಡುತ್ತಾ ಬಂದಿರುವುದು ಕಾಂಗ್ರೆಸ್ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ.
ಮಾಜಿ ಶಾಸಕ ಎಸ್. ಎಂ. ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಂದಿ.ಎಂ.ಆಂಜನಪ್ಪ, ಕೋಚಿಮುಲ್ ಮಾಜಿ ನಿರ್ದೇಶಕ ಭರಣಿ ವೆಂಕಟೇಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಂಚೇನಹಳ್ಳಿ ಪ್ರಕಾಶ್, ನಗರಸಭೆ ಸದಸ್ಯ ಕಣಿತಹಳ್ಳಿ ವೆಂಕಟೇಶ್, ಮಂಡಿಕಲ್ ಕಾಂಗ್ರೆಸ್ ಮುಖಂಡ ಅಜಿತ್ ಪ್ರಸಾದ್, ಕೆಪಿಸಿಸಿ ಮಾಜಿ ಸದಸ್ಯ ಲಾಯರ್ ನಾರಾಯಣಸ್ವಾಮಿ, ಅಡ್ಡಗಲ್ ಗ್ರಾಮ ಪಂಚಾಯತ್ ಸದಸ್ಯ ಎನ್.ವಿ. ಶಂಕರ್, ನಗರಸಭೆ ಮಾಜಿ ಸದಸ್ಯ ಮಿಲ್ಟನ್ ವೆಂಕಟೇಶ್, ಮಂಡಿಕಲ್ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಿ.ವಿ. ರಾಜೇಶ್, ಕೋಡೇಸ್ ವೆಂಕಟೇಶ್, ಮಿಲ್ಟನ್ ವೆಂಕಟೇಶ್, ಆವಲರೆಡ್ಡಿ ಸೇರಿ ಇನ್ನೂ ಅನೇಕ ಮಂದಿ ಕಾಂಗ್ರೆಸ್ ಮುಖಂಡರು ಅತೃಪ್ತರ ಸಭೆ ನಡೆಸಿದ್ದು, ಕ್ಷೇತ್ರದಲ್ಲಿ ಏನೇ ತೀರ್ಮಾನಗಳು, ಸಭೆ- ಸಮಾರಂಭಗಳು ನಡೆಸಬೇಕಾದರೆ ಅಥವಾ ನಿಗಮ ಮಂಡಳಿಗಳ ಪದಾಧಿಕಾರಿಗಳ ಬದಲಾವಣೆ ಮಾಡಬೇಕಾದರೆ ನಮ್ಮ ಗಮನಕ್ಕೆ ತರಬೇಕು. ಕ್ಷೇತ್ರದಲ್ಲಿ ಪಕ್ಷ ಗೆಲ್ಲಬೇಕಾದರೆ ನಮ್ಮ ಶ್ರಮವೂ ಇದೆ, ಇದನ್ನೆಲ್ಲಾ ಪರಿಗಣಿಸಬೇಕು ಎಂದು ಚರ್ಚೆ ಮಾಡಿದ್ದಾರೆ.
ಶಾಸಕರಾಗಿ ಅಧಿಕಾರ ವಹಿಸಿಕೊಂಡು ಎರಡು ತಿಂಗಳಾಗುತ್ತಿದ್ದಂತೆ ಮಾಜಿ ಶಾಸಕ ಎಸ್.ಎಂ.ಮುನಿಯಪ್ಪನವರು ಪ್ರದೀಪ್ ಈಶ್ವರ್ ವಿರುದ್ಧ ತಿರುಗಿಬಿದ್ದಿದ್ದರಿಂದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದರ ಬೆನ್ನಲ್ಲೇ ಅವರ ಮಗ ಎಸ್.ಎಂ.ಜಗದೀಶ್ ಬಹಿರಂಗವಾಗಿ ಪ್ರದೀಪ್ ಈಶ್ವರ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಹಿರಿಯ ಕಾಂಗ್ರೆಸ್ ನಾಯಕ ಎನ್.ವಿ. ನಾರಾಯಣಸ್ವಾಮಿ ಸಹ ಬಹಿರಂಗವಾಗಿ ಶಾಸಕರ ವಿರುದ್ಧ ಹೇಳಿಕೆ ನೀಡಿದ್ದರು.
ಹೀಗೆ ದಿನದಿಂದ ದಿನಕ್ಕೆ ಶಾಸಕರಿಂದ ದೂರ ಉಳಿಯುವ ನಾಯಕರ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದ್ದು ಇಂದು ನಡೆದ ಬಂಡಾಯ ಸಭೆಯಲ್ಲೂ ನೂರೈವತ್ತಕ್ಕೂ ಹೆಚ್ಚು ಮುಖಂಡರಿದ್ದರು ಎನ್ನಲಾಗಿದ್ದು, ಇವರ ಈ ಬೆಳವಣಿಗೆಯಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಏನಾಗುತ್ತೋ ಕಾದು ನೋಡಬೇಕಿದೆ.
ಶಾಸಕರಿಗೆ ಅಧಿಕಾರದ ಮದ ತಲೆಗೇರಿದೆ:
ಕೆಪಿಸಿಸಿ ಮಾಜಿ ಸದಸ್ಯರೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ, ಏನು ಇಲ್ಲದ ಪ್ರದೀಪ್ ಈಶ್ವರ್ ನನ್ನು ಶಾಸಕರನ್ನಾಗಿ ಮಾಡಿದ್ದು ನಾವು. ಆದರೆ ಅವರಿಗೆ ಅಧಿಕಾರದ ಮದ ತಲೆಗೆ ಏರಿದೆ. ಅವರು ಆನೆ ನಡೆದಿದ್ದೆ ದಾರಿ ಎಂಬಂತೆ ತಮಗೆ ಇಷ್ಟ ಬಂದಂತೆ ವರ್ತಿಸುತ್ತಾ, ತಮ್ಮ ಗೆಲುವಿಗೆ ಕಾರಣೀಕರ್ತರಾದ ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಅವರಿಗೆ ತಿಳಿ ಹೇಳಿದ್ದಾಯಿತು, ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷದಿಂದ ಇಲ್ಲಿಗೆ ಆಗಮಿಸಿದ್ದ ವೀಕ್ಷಕರ ಮುಂದೆಯೂ ಇವರ ಕಾರ್ಯವರ್ತನೆಯ ವಿರುದ್ಧ ದೂರು ಸಲ್ಲಿಸಿದ್ದೂ ಆಯಿತು. ಆದರೂ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ಆರೋಪಿಸಿದರು.
ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿನ ನೀರಸ ಫಲಿತಾಂಶದೊಂದಿಗೆ ಕಾಂಗ್ರೆಸ್ ನ ಅವನತಿ ಆರಂಭಗೊಂಡಿದೆ. ನಗರಸಭೆ, ಪಿಎಲ್ ಡಿ ಬ್ಯಾಂಕ್, ಕೃಷಿ ವ್ಯವಸಾಯೋತ್ಪನ್ನ ಮಾರುಕಟ್ಟೆಯ ಸಮಿತಿ ಮುಂತಾದ ಚುನಾವಣೆಗಳಲ್ಲಿ ಕಾಂಗ್ರೆಸ್ ದಯನೀಯವಾಗಿ ಸೋತಿದೆ. ಪ್ರದೀಪ್ ಈಶ್ವರ್ ಅವರು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ಜಿಲ್ಲೆಯಲ್ಲಿ ಉಳಿಗಾಲವಿಲ್ಲ ಎಂಬುದು ಮೂಲ ಕಾಂಗ್ರೆಸ್ಸಿಗರ ಮಾತಾಗಿದೆ.
ಇನ್ನು ಕೆಲವೇ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಬರುತ್ತಿವೆ. ಈ ಚುನಾವಣೆಗಳಲ್ಲಿ ಕಾಂಗ್ರೆಸ್ ವರಿಷ್ಠರು ಪಕ್ಷದಿಂದ ಸ್ಪರ್ಧಿಸುವ ಸ್ಪರ್ಧಿಗಳಿಗೆ ಬಿ ಫಾರಂ ಅನ್ನು ಶಾಸಕರಿಗೆ ಕೊಡಬಾರದು ಎಂಬ ಸಂದೇಶವನ್ನು ರವಾನೆ ಮಾಡಿದ್ದರು.
ಮುಂದಿನ ದಿನಗಳಲ್ಲಿ ಶಾಸಕರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ವಿರೋಧ ವ್ಯಕ್ತಪಡಿಸುವುದಾಗಿಯೂ ಹೆಸರು ಹೇಳಲು ಇಚ್ಛಿಸದ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ತಮ್ಮ ಅಸಮಾಧಾನವನ್ನು ನೇರವಾಗಿ ವ್ಯಕ್ತಪಡಿಸಿದರು.