ಸಾರಾಂಶ
ಕನ್ನಡಪ್ರಭ ವಾರ್ತೆ ಗುಡಿಬಂಡೆ
ರಸ್ತೆ ಅಗಲೀಕರಣದ ಸಮಯದಲ್ಲಿ ಮನೆಗಳನ್ನು ಕಳೆದುಕೊಂಡವರು, ನಿವೇಶನಗಳಿಗಾಗಿ ಮಂಜೂರಾಗಿರುವ ಭೂಮಿಯಲ್ಲಿ ಪ್ರತಿಭಟಿಸಿದರೆ ದಲಿತರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರುವುದು ಸರಿಯಲ್ಲ ಎಂದು ಪೊಲೀಸರ ವಿರುದ್ಧ ದಲಿತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತವು ಪ್ರತಿಭಟನಾಕಾರರೊಂದಿಗೆ ಸಂಧಾನ ಸಭೆಯನ್ನು ಏರ್ಪಡಿಸಿದ್ದು, ಈ ವೇಳೆ ಮಾತನಾಡಿದ ದಲಿತ ಮುಖಂಡರು, ದಲಿತರು ತಮ್ಮ ನಿವೇಶನಗಳಿಗಾಗಿ ಸರ್ಕಾರ ಮೀಸಲಿಟ್ಟಿರುವ ಭೂಮಿಯಲ್ಲಿ ತ್ವರಿತವಾಗಿ ನಿವೇಶನಗಳನ್ನು ನೀಡಬೇಕೆಂದು ಒತ್ತಾಯಿಸಿ ಪ್ರತಿಭಟಿಸಿದರು, ಪ್ರತಿಭಟನೆ ಮಾಡಿರುವುದೇ ತಪ್ಪಾ, ತಮ್ಮ ಹಕ್ಕನ್ನು ಕೇಳುವುದು ಬಿಟ್ಟರೆ ಬೇರೆ ಯಾವುದೇ ಕಾನೂನು ಉಲ್ಲಂಘಿಸಿರುವ ಕೆಲಸ ಮಾಡಿಲ್ಲ. ಆದರೂ ಸಹ ಪೊಲೀಸರು ಬಡವರ ಮೇಲೆ ದೂರು ದಾಖಲಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಸದರಿ ಜಮೀನಿನ ವಿಚಾರ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವುದರಿಂದ ಅ ಜಮೀನಿಗೆ ಪ್ರವೇಶ ಮಾಡಬಾರದು, ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಪ್ರಕರಣ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ಉತ್ತರ ನೀಡಿದರು.ನಂತರ ಪ್ರತಿಭಟನಾಕಾರರು ಮಾತನಾಡಿ, ತಾಲೂಕಿನ ಅನೇಕ ಗ್ರಾಮಗಳಲ್ಲಿ ಸ್ಮಶಾನಗಳು ಇಲ್ಲ, ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಜಾಗ ನೀಡಿಲ್ಲ, ಬಡ ದಲಿತರ ದರಖಾಸ್ತು ಜಮೀನು ಮಂಜೂರು ಮಾಡುವುದು, ಇಲಾಖೆಗಳಲ್ಲಿ ಆಗಿರುವ ಆಕ್ರಮಗಳನ್ನು ತನಿಖೆ ಮಾಡುವುದು ಸೇರಿ ಇತರೆ ಬೇಡಿಕೆಗಳನ್ನು ಈಡೇರಿಸಬೇಕು, ಇಲ್ಲವಾದಲ್ಲಿ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ತಿಳಿಸಿದರು.
ತಹಸೀಲ್ದಾರ್ ಸಿಗ್ಬತ್ ವುಲ್ಲಾ ಮಾತನಾಡಿ, ತಮ್ಮ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತೇವೆ, ಈ ಬಗ್ಗೆ ದಲಿತ ಮುಖಂಡರೊಂದಿಗೆ ಸಭೆ ನಡೆಸಬೇಕೆಂದು ತಿಳಿಸಿದ್ದು, ಈ ಸಭೆಯಲ್ಲಿನ ಅಂಶಗಳನ್ನು ಜಿಲ್ಲಾ ಅಧಿಕಾರಿಗಳು ನಡೆಸುವ ಸಭೆಯಲ್ಲಿ ಚರ್ಚಿಸುತ್ತೇವೆಂದು ತಿಳಿಸಿದರು.ತಾಪಂ ಇಒ ನಾಗಮಣಿ, ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ ಲಕ್ಷ್ಮೀಪತಿ ರೆಡ್ಡಿ, ಗ್ರೇಡ್-2 ತಹಸೀಲ್ದಾರ್ ತುಳಸಿ, ಪಪಂ ಮುಖ್ಯಾಧಿಕಾರಿ ಸಬಾ ಶಿರೀನ್, ಆರಕ್ಷಕ ಉಪ ನಿರೀಕ್ಷಕ ಗಣೇಶ್ ಸೇರಿ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ತ್ವರಿತವಾಗಿ ಬೇಡಿಕೆಗಳನ್ನು ಈಡೇರಿಸುತ್ತೇವೆಂದು ದಲಿತ ಮುಖಂಡರಿಗೆ ಆಶ್ವಾಸನೆ ನೀಡಿದರು.
ದಲಿತ ಮುಖಂಡರಾದ ಜಿ.ವಿ.ಗಂಗಪ್ಪ, ರಮಣ, ಇಸ್ಕೂಲು ನರಸಿಂಹಪ್ಪ, ರಾಜು, ಆದಿನಾರಾಯಣಪ್ಪ ಸೇರಿ ಇತರರು ಇದ್ದರು.