ಹನೂರಿನ ಮಾದೇಶ್ವರ ಬೆಟ್ಟದಲ್ಲಿ ಗೌರಮ್ಮನ ವಿಸರ್ಜನೆ

| Published : Sep 12 2024, 01:52 AM IST

ಸಾರಾಂಶ

ಹನೂರಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಗೌರಮ್ಮನ ವಿಸರ್ಜನೆಯ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಸಂಭ್ರಮ ಸಡಗರದಿಂದ ಅಂತರಗಂಗೆಯಲ್ಲಿ ವಿಸರ್ಜನೆ ನಡೆಯಿತು.

ಕನ್ನಡಪ್ರಭ ವಾರ್ತೆ ಹನೂರು

ಮಲೆ ಮಹದೇಶ್ವರ ಬೆಟ್ಟದಲ್ಲಿ ಗೌರಮ್ಮನ ವಿಸರ್ಜನೆಯ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಸಂಭ್ರಮ ಸಡಗರದಿಂದ ಅಂತರಗಂಗೆಯಲ್ಲಿ ವಿಸರ್ಜನೆ ನಡೆಯಿತು.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಂಪ್ರದಾಯದಂತೆ ಪ್ರತಿ ವರ್ಷ ಸಹ ಗೌರಮ್ಮನನ್ನು ದೇವಾಲಯದ ಗರ್ಭಗುಡಿ ಪಕ್ಕದ ವೀರಭದ್ರ ಸ್ವಾಮಿ ಸಮೀಪದಲ್ಲಿಯೇ ಗೌರಮ್ಮನನ್ನು ಪ್ರತಿಷ್ಠಾಪಿಸಲಾಗುತ್ತದೆ. ಐದು ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಿ ವೀರಭದ್ರ ಸ್ವಾಮಿ ಮಲೆ ಮಾದೇಶ್ವರ ಅವರಿಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಂಗಳವಾರ ಸಂಜೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿ ವಾದ್ಯ ಮೇಳ ಛತ್ರಿ ಚಾಮರ ನಂದಿ ನಂದಿ ಕಂಬ ಸತ್ತಿಗೆಗಳೊಂದಿಗೆ ವಿಜೃಂಭಣೆಯಿಂದ ಮೆರವಣಿಗೆಯಲ್ಲಿ ಗೌರಮ್ಮನನ್ನು ಅಂತರಗಂಗೆಯಲ್ಲಿ ವಿಸರ್ಜನೆ ಮಾಡಲಾಯಿತು.

ಸಿಹಿ ಪೊಂಗಲ್: ಗೌರಮ್ಮ ವಿಸರ್ಜನೆ ಮುನ್ನ ಸಿಹಿ ಪೊಂಗಲ್ ಮಾಡಿ ಪ್ರತಿ ವರ್ಷದಂತೆ ದೇವರಿಗೆ ಅರ್ಪಿಸಿ ನಂತರ ಅಂತರಗಂಗೆಯಲ್ಲಿ ವಿಸರ್ಜನೆ ಮಾಡಿ ನೆರದಿದ್ದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡುವ ಮೂಲಕ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳು ಜರುಗಿತು.ಇದೇ ವೇಳೆಯಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಹಾಗೂ ಉಪ ಕಾರ್ಯದರ್ಶಿ, ಚಂದ್ರಶೇಖರ್ ಪ್ರಧಾನ ಆಗಮಿಕರಾದ ಕರವೀರ ಸ್ವಾಮೀಜಿ, ಸರದಿ ಅರ್ಚಕ ಓ.ನಾಗಪ್ಪ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಇರುವ ಅರ್ಚಕರ ತಂಡ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ದೇವಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.