ಹಾವೇರಿ ನಗರದಲ್ಲಿ ಶುಕ್ರವಾರ ಸಂಜೆ ವಿವಿಧ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಮೆರವಣಿಗೆ ಮೂಲಕ ಕರೆತಂದು ವಿಶೇಷ ಪೂಜೆ ಸಲ್ಲಿಸಿ ವಿಸರ್ಜಿಸಲಾಯಿತು.

ಹಾವೇರಿ: ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ಹಲವು ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ಶುಕ್ರವಾರ ಸಂಭ್ರಮದಿಂದ ಬೀಳ್ಕೊಡಲಾಯಿತು.

ನಗರದ ಅಕ್ಕಮಹಾದೇವಿ ಹೊಂಡದ ಸಮೀಪ ಗಣೇಶ ವಿಸರ್ಜನೆಗಾಗಿ ತೋಡಿರುವ ಗುಂಡಿಯಲ್ಲಿ ಶುಕ್ರವಾರ ಸಂಜೆ ವಿವಿಧ ಗಜಾನನ ಸಮಿತಿ ಹಾಗೂ ಸಾರ್ವಜನಿಕರು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.

ಚೌತಿ ನಡೆದು ಐದು ದಿನಗಳಾಗುತ್ತಿದ್ದಂತೆ ಶುಕ್ರವಾರ ಸಂಜೆ ನಗರದ ವಿವಿಧ ಏರಿಯಾಗಳ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣಪ ಮೂರ್ತಿಗಳನ್ನು ಮೆರವಣಿಗೆ ನಡೆಸುವ ಮೂಲಕ ಕರೆತಂದರು. ಮೆರವಣಿಗೆ ಸಂದರ್ಭದಲ್ಲಿ ಡೊಳ್ಳುವಾದ್ಯ, ಭಜನೆ ಸೇರಿದಂತೆ ಸಕಲ ವಾದ್ಯ ವೈಭವಗಳೊಂದಿಗೆ ಶೋಭಾಯಾತ್ರೆ ನಡೆಸಿದರು.

ಇದರ ಜತೆಗೆ ಕೆಲವರು ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ಕೂಡ ಸರಳವಾಗಿ ಮೆರವಣಿಗೆ ಮಾಡುವ ಮುಖಾಂತರ ಅಕ್ಕಮಹಾದೇವಿ ಹೊಂಡಕ್ಕೆ ಕರೆತಂದು ವಿಶೇಷ ಪೂಜೆ ಸಲ್ಲಿಸಿ, ಗಣಪನನ್ನು ವಿಸರ್ಜಿಸಿದರು. ಇದಕ್ಕೂ ಮುಂಚೆ ನಗರದ ವಿವಿಧೆಡೆ ಆಯೋಜಕರು ಅನ್ನ ಸಂತರ್ಪಣೆಯನ್ನು ಏರ್ಪಡಿಸಿದ್ದರು. ಇನ್ನೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿಯೂ ಕೂಡ ಕೆಲ ಸಾರ್ವಜನಿಕ ಗಣೇಶ ಮೂರ್ತಿಗಳನ್ನು, ಮನೆಗಳಲ್ಲಿ ಪ್ರತಿಷ್ಠಾಪಿಸಿದ ಗಣಪ ಮೂರ್ತಿಗಳನ್ನು ಗ್ರಾಮದ ಬಳಿ ಇರುವ ಹೊಂಡಗಳಲ್ಲಿ, ಕೆರೆಗಳಲ್ಲಿ, ಹಳ್ಳಗಳಲ್ಲಿ ಸಾಮೂಹಿಕವಾಗಿ ವಿಸರ್ಜನೆ ಮಾಡಿದರು. ಈ ಬಾರಿ ಡಿಜೆ ಸದ್ದಿನ ಮೆರವಣಿಗೆಗೆ ಅನುಮತಿ ನೀಡದ ಹಿನ್ನೆಲೆ ಸಾಂಪ್ರದಾಯಿಕವಾಗಿ ವಿಸರ್ಜನೆ ಮಾಡುತ್ತಿರುವುದು ಕಂಡುಬಂದಿತು.

ಹೊಸರಿತ್ತಿಯಲ್ಲಿ ಗಣೇಶ ವಿಸರ್ಜನಾ ಶೋಭಾಯಾತ್ರೆ: ತಾಲೂಕಿನ ಹೊಸರಿತ್ತಿ ಗುದ್ಲೆಪ್ಪ ಹಳ್ಳಿಕೇರಿ ವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ಹೊಸರಿತ್ತಿ ಕಾ ಮಹಾರಾಜ ಗಣೇಶ ಮೂರ್ತಿಯ ಶೋಭಾಯಾತ್ರೆ ಶುಕ್ರವಾರ ನಡೆಯಿತು. ಸರ್ವಧರ್ಮ ಸಮಾನತೆಯ ಪ್ರತೀಕವಾಗಿ ಐದು ದಿನಗಳ ಕಾಲ ವಿವಿಧ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ನಡೆಸಲಾಯಿತು. ಆರ್ಕೆಸ್ಟ್ರಾ, ಸಂಗೀತ ವಾದ್ಯಮೇಳದೊಂದಿಗೆ ಗಣೇಶ ಮೂರ್ತಿಯನ್ನು ಅಲಂಕರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಸಲಾಯಿತು. ಶೋಭಾಯಾತ್ರೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಗಣಪತಿ ಬಪ್ಪನಿಗೆ ಜಯಘೋಷ ಮೊಳಗಿಸಿದರು. ವಿವಿಧ ವಾದ್ಯಗಳ ನಾದಕ್ಕೆ ಯುವಕರು ಸಂಭ್ರಮದಿಂದ ಹೆಜ್ಜೆ ಹಾಕಿದರು. ನಂತರ ಸಮೀಪದ ವರದಾ ನದಿಯಲ್ಲಿ ವಿಘ್ನೇಶ್ವರನಿಗೆ ಪೂಜೆ ಸಲ್ಲಿಸಿ, ವಿಸರ್ಜಿಸಲಾಯಿತು.