ದಲಿತರಿಗೆ, ಹಿಂದುಳಿದ ವರ್ಗಗಳಿಗೆ ಈ ಸರ್ಕಾರ ನ್ಯಾಯ ಕೊಡಲು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಲಿ. ಆಗ ಜನರೇ ತೀರ್ಮಾನ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸವಾಲು ಎಸೆದರು.

ಕನ್ನಡಪ್ರಭ ವಾರ್ತೆ ಮಸ್ಕಿ (ರಾಯಚೂರು)

ದಲಿತರಿಗೆ, ಹಿಂದುಳಿದ ವರ್ಗಗಳಿಗೆ ಈ ಸರ್ಕಾರ ನ್ಯಾಯ ಕೊಡಲು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಲಿ. ಆಗ ಜನರೇ ತೀರ್ಮಾನ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸವಾಲು ಎಸೆದರು.

ಜಿಲ್ಲೆ ಮಸ್ಕಿ ತಾಲೂಕಿನ ಸಂತೆಕೆಲ್ಲೂರಿನಿಂದ ಎರಡನೇ ದಿನದ ಬಿಜೆಪಿ ಬಳ್ಳಾರಿ ಚಲೋ ಬೃಹತ್ ಪಾದಯಾತ್ರೆ ಆರಂಭಕ್ಕು ಮುನ್ನ ಮಾಧ್ಯಮಗಳೊಂದಿಗೆ ಬುಧವಾರ ಮಾತನಾಡಿದ ಅವರು, ದಲಿತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಕಳೆದ ಮೂರುವರೆ ವರ್ಷದಲ್ಲಿ ಅವರಿಗೆ ಅನ್ಯಾಯ ಮಾಡು ತ್ತಲೇ ಬಂದಿದೆ. ವಾಲ್ಮೀಕಿ ನಿಗಮದಲ್ಲಿ ₹187 ಕೋಟಿ ಹಗರಣ ಮಾಡಿದರು. ಮೀಸಲಾತಿಯನ್ನು ಸರಿಯಾಗಿ ಅನುಷ್ಟಾನ ಮಾಡಲಿಲ್ಲ. ಮೀಸಲಾತಿ ನೆಪ ಹೇಳಿ ಕೊಂಡು ಯುವಕರಿಗೆ ಉದ್ಯೋಗ ನೀಡಲಿಲ್ಲ. ಕೇವಲ ದಲಿತರು ಮಾತ್ರವಲ್ಲ ಎಲ್ಲಾ ಸಮುದಾಯವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದರು. ಒಟ್ಟಾರೆ ಅಖಂಡ ಕರ್ನಾಟಕವನ್ನು ಕಡೆಗಣಿಸಿದೆ ಎಂದು ಆಪಾದಿಸಿದರು.

ಇನ್ನಷ್ಟು ವಿಕೆಟ್ ಬೀಳಲಿವೆ:ಡಿಕೆಶಿ ಸರ್ಕಾರದ ಇನ್ನೂ ಎರಡು ಮೂರು ವಿಕೆಟ್ಗಿಳು ಬೀಳಲು ತಯಾರು ಆದಂತೆ ಇದೆ. ಈ ಎಲ್ಲರಿಗೂ ಭ್ರಷ್ಟಾಚಾರ ಉರುಳಾಗಲಿದೆ. ಲಜ್ಜೆಗೆಟ್ಟ ಕಾಂಗ್ರೆಸ್ನಿವರಿಗೆ ಮಾನ, ಮರ್ಯಾದೆ ಏನೂ ಇಲ್ಲ. ಆನೆ ನಡೆದಿದ್ದೇ ದಾರಿ ಎಂದುಕೊಂಡಿದ್ದವರ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಲಾರಂ ಭಿಸಿದೆ. ನಮ್ಮೊಂದಿಗೆ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಅನ್ನದಾತರ ಸಮಸ್ಯೆಗಳನ್ನು ಆಲಿಸುವ ಕನಿಷ್ಠ ಸೌಜನ್ಯವನ್ನೂ ಸಿಎಂ ತೋರುತ್ತಿಲ್ಲ ಎಂದು ದೂರಿದರು.

ಇದೀಗ ಕಾಟಾಚಾರದ ಬರವೀಕ್ಷಣೆ: ಬಿಜೆಪಿ ವತಿಯಿಂದ ರಾಜ್ಯದಲ್ಲಿ ಈಗಾಗಲೇ ಬರ ವೀಕ್ಷಣೆ ಮಾಡಿದ್ದೇವೆ. ಈವರೆಗೆ ಬರಗಾಲ ಪರಿಶೀಲನೆಗೆ ಹೋಗದ ಸಿಎಂ ಮತ್ತು ಡಿಸಿಎಂ ಈಗ ಬರ ವೀಕ್ಷಣೆ ಆರಂಭಿಸಿದ್ದಾರೆ. ಎ.ಸಿ. ಹಾಲಿನಲ್ಲೇ ಕುಳಿತಿದ್ದವರು ಈಗ ಅನಿವಾರ್ಯವಾಗಿ ರೈತರ ಸಮಸ್ಯೆ ಆಲಿಸಲು ಮುಂದಾಗಿದ್ದಾರೆ. ಇವರು ಹೀಗೆ ಮಾಡಲು ನಮ್ಮ ಹೋರಾಟವೇ ಕಾರಣ ಎಂದು ವಿಶ್ಲೇಷಿಸಿದರು.

ಇಷ್ಟು ದಿನ ಕತ್ತೆ ಕಾಯುತ್ತಿದ್ದರೇ?: ರಾಯಚೂರು ಭಾಗದ ಶಾಸಕರ ಸಭೆಯನ್ನು ಸಿಎಂ ಕರೆದಿದ್ದಾರಂತೆ. ಈ ಸಭೆ ರೈತರ ಸಮಸ್ಯೆ ಅರಿಯಲು ಅಲ್ಲ. ಬದಲಿಗೆ ಬಿಜೆಪಿ ಇದ್ದಾಗ ಏನೇನು ಹಗರಣ ಆಗಿದೆ ಅದನ್ನು ತಿಳಿಯಲು ಅಂತೆ, ಮೂರು ವರ್ಷದಿಂದ ಅಧಿಕಾರದಲ್ಲಿದ್ದಾಗ ನೀವೇನು ಕತ್ತೆ ಕಾಯುತ್ತಿದ್ದರೇ. ಇಂತಹ ಬೆದರಿಕೆ, ಧಮ್ಕಿಗೆ ನಾವು ಹೆದರಲ್ಲ ಎಂದು ಸವಾಲು ಹಾಕಿದರು.

ಉತ್ತರ ಕರ್ನಾಟಕದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಸಾವಿರ ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಜಾನುವಾರುಗಳಿಗೆ ಮೇವು ಇಲ್ಲದಾಗಿದೆ. ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲ. ಆದರೆ ಮುಖ್ಯಮಂತ್ರಿಗಳು ಮಾತ್ರ ರಿಯಲ್ ಎಸ್ಟೇಟ್ ಮಾಡಿಕೊಂಡು ಬೆಂಗಳೂರಿನಲ್ಲಿ ಕೂತಿದ್ದಾರೆ. ಅವರಿಗೆ ಬೆಂಗಳೂರೇ ಎಲ್ಲವೂ ಆಗಿದೆ. ಇಂತಹ ನಿರ್ಲಜ್ಜ ಧೋರಣೆಯನ್ನು ಸರಕಾರ ಬದಲಾಯಿಸಿಕೊಳ್ಳದಿದ್ದರೆ ಜನರೇ ಈ ಸರ್ಕಾರವನ್ನು ಬಡಿಗೆ ಹಿಡಿದು ಓಡಿಸಲಿದ್ದಾರೆ ಎಂದು ಎಚ್ಚರಿಸಿದರು.

ಎಲ್ಲಕ್ಕೂ ಲಂಚ ಕೊಡಬೇಕು: ಈ ಸರ್ಕಾರದಲ್ಲಿ ಎಲ್ಲಕ್ಕೂ ಲಂಚ ಕೊಡಬೇಕು. ಅದು ವಾಸ್ತವಿಕ ಸತ್ಯ. ಲಂಚ ಕೊಡದೆ ಏನೂ ಆಗಲ್ಲ. ಈಗ ಕೇವಲ 101 ತಾಲೂಕು ಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಣೆ ಮಾಡಿದ್ದಾರೆ. ಇನ್ನೂ ಹಲವು ತಾಲೂಕುಗಳು ಬರಪೀಡಿತವಾಗಿವೆ. ಅವುಗಳನ್ನೂ ಬರಪೀಡಿತ ಎಂದು ಘೋಷಣೆ ಮಾಡಲು ರೈತರು ಲಂಚ ಕೊಡಬೇಕಾದ ಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದರು.

ಪಾದಯಾತ್ರೆಯುದ್ದಕ್ಕೂ ಕಾಂಗ್ರೆಸ್‌ ವಿರುದ್ಧ ಕಿಡಿ: ಬಿಜೆಪಿ ಕೈಗೊಂಡಿರುವ ಬಳ್ಳಾರಿ ಚಲೋ ಬೃಹತ್‌ ಪಾದಯಾತ್ರೆಯ ಎರಡನೇ ದಿನದ ಪಾದಯಾತ್ರೆಯುದ್ದಕ್ಕೂ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶದ ಕಿಡಿ ಚಿಮ್ಮಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪಕ್ಷದ ಪ್ರಮುಖ ನಾಯಕರಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರು ಕಾಂಗ್ರೆಸ್‌ ವಿರುದ್ಧ ನಿರಂತರವಾಗಿ ಘೋಷಣೆಗಳನ್ನು ಮೊಳಗಿಸಿದರು.

-----

ಬಿಜೆಪಿ ಬಳ್ಳಾರಿ ಚಲೋ ಬೃಹತ್‌ ಪಾದಯಾತ್ರೆಯ ಬಿಸಿಯು ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ತಟ್ಟಿದೆ. ಅದಕ್ಕಾಗಿಯೇ ಮುಖ್ಯಮಂತ್ರಿಗಳು ಗದಗಕ್ಕೆ ಹಾಗೂ ಡಿಸಿಎಂ ಮೈಸೂರಿಗೆ ಹೋಗಿದ್ದಾರೆ. ಈಗ ಸರ್ಕಾರ ರೈತರ ಸಮಸ್ಯೆಗಳನ್ನು ಆಲಿಸಲೇಬೇಕಾಗಿದೆ. ದಲಿತರಿಗೆ, ಯುವಕರಿಗೆ ಕಾಂಗ್ರೆಸ್‌ ಅನ್ಯಾಯ ಮಾಡಿದೆ. ಸಚಿವರಿಗೆ ಬೆಂಗಳೂರೇ ಉತ್ತರ ಕರ್ನಾಟಕ ಆಗಿದೆ. ಯಾರೂ ಜಿಲ್ಲೆಗಳಿಗೆ ಭೇಟಿ ಕೊಡುತ್ತಿಲ್ಲ. ಸರ್ಕಾರ ವಿಸರ್ಜನೆ ಮಾಡಿ ಚುನಾವಣೆಗೆ ಹೋಗೋಣ, ಜನ ತೀರ್ಮಾನ ಮಾಡುತ್ತಾರೆ.

- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

---

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭಷ್ಟ ಕಾಂಗ್ರೆಸ್‌ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಪಾದಯಾತ್ರೆ ನಡೆಸುತ್ತಿದ್ದು, ಬಿ.ನಾಗೇಂದ್ರ ವಿರುದ್ಧ ಬಿ.ಶ್ರೀರಾಮುಲು ಅವರು ಚುನಾವಣೆಯಲ್ಲಿ ನಿಲ್ಲುತ್ತಾರೆ. ರಾಮುಲು ಅವರೇ ಗೆಲುವು ಸಾಧಿಸುತ್ತಾರೆ. ಈ ಪಾದಯಾತ್ರೆಯು 2028ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ವೇದಿಕೆಯಾಗಲಿದೆ.

- ರಾಜೂಗೌಡ, ಬಿಜೆಪಿ ಮಾಜಿ ಶಾಸಕ