ಜಿಲ್ಲೆಯ ೫೦ ಶಾಲೆಗಳಿಗೆ ದೂರ ತರಂಗ ಶಿಕ್ಷಣ: ಜಪಾನಂದ ಸ್ವಾಮೀಜಿ

| Published : Feb 25 2024, 01:46 AM IST

ಜಿಲ್ಲೆಯ ೫೦ ಶಾಲೆಗಳಿಗೆ ದೂರ ತರಂಗ ಶಿಕ್ಷಣ: ಜಪಾನಂದ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ತಂತ್ರಜ್ಞಾನ ಆಧಾರಿತ ಶಿಕ್ಷಣ ಪ್ರಸ್ತುತ ದಿನಗಳಲ್ಲಿ ಅತ್ಯಗತ್ಯ ಎಂಬುದನ್ನು ಮನಗಂಡು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ.

ಕನ್ನಡಪ್ರಭ ವಾರ್ತೆ ಶಿರಾ

ತಂತ್ರಜ್ಞಾನ ಆಧಾರಿತ ಶಿಕ್ಷಣ ಪ್ರಸ್ತುತ ದಿನಗಳಲ್ಲಿ ಅತ್ಯಗತ್ಯ ಎಂಬುದನ್ನು ಮನಗಂಡು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಶ್ರೀ ರಾಮಕೃಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಫೌಂಡೇಷನ್ ಸಹಕಾರದೊಂದಿಗೆ ತುಮಕೂರು ಜಿಲ್ಲೆಯ ಅತ್ಯಂತ ಹಿಂದುಳಿದ ೫೦ ಗ್ರಾಮಾಂತರ ಭಾಗಗಳಲ್ಲಿ ಈ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಶ್ರೀ ರಾಮಕೃಷ್ಣ ಸೇವಾಶ್ರಮ ಅಧ್ಯಕ್ಷ ಸ್ವಾಮಿ ಜಪಾನಂದಜೀ ಮಹಾರಾಜ್ ಹೇಳಿದರು.

ಶನಿವಾರ ತಾಲೂಕಿನ ಚಿಕ್ಕನಹಳ್ಳಿಯ ಸರ್ಕಾರಿ ಶಿಕ್ಷಕ ತರಬೇತಿ ಕೇಂದ್ರದ ಆವರಣದಲ್ಲಿರುವ ಪ.ಪೂ. ಕಾಲೇಜು ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನದ ಹಿನ್ನೆಲೆಯಲ್ಲಿ ವ್ಯವಸ್ಥೆ ಮಾಡಿರುವ ದೂರತರಂಗ ಶಿಕ್ಷಣದ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ದೂರತರಂಗ ಶಿಕ್ಷಣದ ಘಟಕದ ಪ್ರಾಯೋಜಕರಾದ ಇನ್ಫೋಸಿಸ್ ಫೌಂಡೇಷನ್ನಿನ ಸೇವೆ ಶ್ಲಾಘನೀಯ ಈ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನದ ಪರಿಚಯ ಹಾಗೂ ಸರಿಸುಮಾರು ೫೦೦೦ ನಾನಾ ರೀತಿಯ ಶಿಕ್ಷಣದ ವಿಚಾರಗಳ ಕಾರ್ಯಕ್ರಮಗಳು ಈ ದೂರತರಂಗ ಶಿಕ್ಷಣ ಸೌಲಭ್ಯದಲ್ಲಿ ಅಡಕಗೊಂಡಿವೆ ಎಂದು ತಿಳಿಸಿದರು.

ದೇಶದ ಪ್ರಗತಿಗೆ, ಅಭಿವೃದ್ಧಿಗೆ, ಮುನ್ನಡೆಗೆ ಶಿಕ್ಷಕರು ತಮ್ಮ ಅತ್ಯಮೂಲ್ಯವಾದ ಕೊಡುಗೆಯನ್ನು ನೀಡುತ್ತಾ ಬಂದಿರುವುದು ಈ ನಾಡಿನ ಶಿಕ್ಷಕರ ಸೇವೆಗೆ ಕೈಗನ್ನಡಿಯಾಗಿದೆ ಎಂದರು.

ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್.ಆರ್‌. ಗೌಡ ಮಾತನಾಡಿ, ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಅತ್ಯವಶ್ಯಕವಾಗಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡಲು ಅನುಕೂಲವಾಗುವಂತೆ ಶ್ರೀ ರಾಮಕೃಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಫೌಂಡೇಷನ್ ಸಹಕಾರದೊಂದಿಗೆ ದೂರ ತರಂಗ ಶಿಕ್ಷಣದ ಘಟಕಗಳನ್ನು ಪ್ರಾರಂಭಿಸುತ್ತಿರುವುದು ಶ್ಲಾಘನೀಯ ಕಾರ್ಯ. ಇದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಉತ್ತಮ ಕೌಶಲ್ಯ ಪಡೆಯಿರಿ ಎಂದರು.

ಇದೇ ಸಂದರ್ಭದಲ್ಲಿ ನೂತನ ಸಭಾಂಗಣ, ನೂತನ ಕಚೇರಿ ಹಾಗೂ ನೂತನ ತರಗತಿಯನ್ನು ಸ್ವಾಮೀಜಿಯವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾ ಇಲಾಖೆಯ ಎಲ್ಲ ಹಿರಿಯ ಅಧಿಕಾರಿಗಳು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಶಿಕ್ಷಕರು ಹಾಗೂ ಶಿಕ್ಷಕಿಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಡಯಟ್ ಉಪನಿರ್ದೇಶಕ ಮಂಜುನಾಥ್, ಚಿಕ್ಕನಹಳ್ಳಿಯ ಸರ್ಕಾರಿ ಶಿಕ್ಷಕ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ತಿಮ್ಮರಾಜು, ಇನ್ಫೋಸಿಸ್ ಕಂಪನಿಯ ಸಾಗರ್ ಹಾಗೂ ಶ್ರೀನಿವಾಸ್, ಎಸ್.ಕೆ.ವಿ.ಡಿ ಕಾಲೇಜಿನ ಉಪ ಪ್ರಾಂಶುಪಾಲ ರಂಗನಾಥ್, ಬಿಇಓ ಕೃಷ್ಣಪ್ಪ, ಬಿ.ಆರ್‌.ಸಿ. ಕುಮಾರ್‌, ಗ್ರಾ.ಪಂ. ಅಧ್ಯಕ್ಷೆ ರೂಪಶ್ರೀ ಜಯರಾಮ್, ಮುಖ್ಯ ಶಿಕ್ಷಕರಾದ ತಿಪ್ಪೇಸ್ವಾಮಿ ಡಿ.ಎನ್. ಸೇರಿದಂತೆ ಹಲವರು ಹಾಜರಿದ್ದರು.