ಪಡಿತರದಾರರಿಗೆ ತಲಾ 10 ಕೆಜಿ ಅಕ್ಕಿ ವಿತರಿಸಿ: ಮುಜಾವರ

| Published : Mar 16 2025, 01:50 AM IST

ಪಡಿತರದಾರರಿಗೆ ತಲಾ 10 ಕೆಜಿ ಅಕ್ಕಿ ವಿತರಿಸಿ: ಮುಜಾವರ
Share this Article
  • FB
  • TW
  • Linkdin
  • Email

ಸಾರಾಂಶ

ಪಡಿತರ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಜತೆಗೆ ಹಣದ ಬದಲಾಗಿ ತಲಾ 10 ಕೆಜಿ ಅಕ್ಕಿ ನೀಡಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಿರ್ಮಾನಿಸಿದೆ. ಅದರಂತೆ ಇದೇ ತಿಂಗಳಿಂದ ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿ ನೀಡಬೇಕು. ತೂಕ ಮೋಸದಲ್ಲಿ ಆಗದಂತೆ ನೋಡಿಕೊಳ್ಳಬೇಕು.

ಕನಕಗಿರಿ:

ತಾಲೂಕು ವ್ಯಾಪ್ತಿಯ ಎಲ್ಲ ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ಫಲಾನುಭವಿಗಳಿಗೆ ತಲಾ 10 ಕೆಜಿ ಅಕ್ಕಿ ನೀಡಬೇಕು ಎಂದು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ತಾಲೂಕಾಧ್ಯಕ್ಷ ಹಜರತ್ ಹುಸೇನ ಮುಜಾವರ್ ಸೂಚಿಸಿದರು.

ಅವರು ಶುಕ್ರವಾರ ಪಟ್ಟಣದ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಮಾಲೀಕರ ಜತೆ ಚರ್ಚಿಸಿ ಮಾತನಾಡಿದರು.

ಪಡಿತರ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಜತೆಗೆ ಹಣದ ಬದಲಾಗಿ ತಲಾ 10 ಕೆಜಿ ಅಕ್ಕಿ ನೀಡಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಿರ್ಮಾನಿಸಿದೆ. ಅದರಂತೆ ಇದೇ ತಿಂಗಳಿಂದ ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿ ನೀಡಬೇಕು. ತೂಕ ಮೋಸದಲ್ಲಿ ಆಗದಂತೆ ನೋಡಿಕೊಳ್ಳಬೇಕು. ಕಡ್ಡಾಯವಾಗಿ ಗಣಕೀಕರಣ ಮಾಡಿ ಅಕ್ಕಿ ಹಂಚಿಕೆ ಮಾಡಬೇಕು. ಸರ್ಕಾರದ ಪಡಿತರ ಸದ್ಬಳಕೆಯಾಗಲು ನ್ಯಾಯಬೆಲೆ ಅಂಗಡಿಯವರು ಕೆಲಸ ಮಾಡಬೇಕು. ಒಂದು ವೇಳೆ ಪಡಿತರ ದುರ್ಬಳಕೆಯಾಗಿದ್ದು ಕಂಡು ಬಂದರೆ ಮೇಲಾಧಿಕಾರಿಗಳಿಗೆ ಪತ್ರ ಬರೆಲಾಗುವುದು ಎಂದು ಎಚ್ಚರಿಸಿದರು.

ಮೂವರು ಸದಸ್ಯರು ಹೊಂದಿರುವ ಪ್ರತಿ ಅಂತ್ಯೋದಯ ಚೀಟಿಗೆ 35 ಕೆಜಿ ಅಕ್ಕಿ ಹಾಗೂ 4 ಸದಸ್ಯರಿರುವ ಚೀಟಿಗೆ 45 ಕೆಜಿ ಅಕ್ಕಿ. ಹೀಗೆ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಇಲಾಖೆಯ ನಿಯಮದಡಿ ಪಡಿತರ ವಿತರಿಸಬೇಕು. ಯಾವ ಫಲಾನುಭವಿಗೂ ಅನ್ಯಾಯವಾಗದಂತೆ ಜಾಗೃತಿವಹಿಸಬೇಕು ಎಂದು ಸೂಚಿಸಿದರು.

ಈ ವೇಳೆ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ತಾಲೂಕು ಘಟಕದ ಸದಸ್ಯ ನೀಲಕಂಠ ಬಡಿಗೇರ, ನ್ಯಾಯಬೆಲೆ ಅಂಗಡಿಗಳ ಸಿಬ್ಬಂದಿ ರಾಮು ಆಗೋಲಿ, ಮಂಜುನಾಥ ಯಾದವ, ಶಿವು ನಾಯಕ, ಪರಶುರಾಮ ಚಲುವಾದಿ, ವೀರೇಶ ಚೆನ್ನಿ, ಶರಣಪ್ಪ ಹಾದಿಮನಿ ಸೇರಿದಂತೆ ಇತರಿದ್ದರು.