ವಿದ್ಯುತ್‌ನಿಂದ ಗಾಯಗೊಂಡವರಿಗೆ ಸೂಕ್ತ ಪರಿಹಾರ ವಿತರಿಸಿ

| Published : Oct 26 2023, 01:02 AM IST

ಸಾರಾಂಶ

ನವೀನ್‌ ಪ್ರಕರಣ ಖಂಡಿಸಿ ಮಟ್ಟಿಕೋಟೆ ಗ್ರಾಮಸ್ಥರಿಂದ ಮೆಸ್ಕಾಂಗೆ ಮುತ್ತಿಗೆ ಹಾಕಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಶಿಕಾರಿಪುರ ವಿದ್ಯುತ್ ಕಂಬ ಬದಲಾವಣೆಗಾಗಿ ಕಂಬ ಏರಿದ್ದ ಸಂದರ್ಭ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ವಿದ್ಯುತ್ ಪ್ರವಹಿಸಿ ಗುತ್ತಿಗೆದಾರನ ಸಿಬ್ಬಂದಿ ಸಾವು ಬದುಕಿನ ಹೊಯ್ದಾಟದಲ್ಲಿದ್ದಾರೆ. ಈ ಘಟನೆಗೆ ನೇರವಾಗಿ ಕಾರಣಕರ್ತರಾದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮದ ಜತೆಗೆ ಪರಿಹಾರ ವಿತರಿಸುವಂತೆ ಆಗ್ರಹಿಸಿ ತಾಲೂಕಿನ ಮಟ್ಟಿಕೋಟೆ ಗ್ರಾಮದ ನೂರಾರು ಜನ ಪಟ್ಟಣದ ಮೆಸ್ಕಾಂ ವಿಭಾಗೀಯ ಕಚೇರಿಗೆ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟಿಸಿದರು. ತಾಲೂಕಿನ ಮಟ್ಟಿಕೋಟೆ ಯುವಕ ನವೀನ್ ಜತೆಗೆ 4 ಯುವಕರು ಸಂದೀಪ ಎಂಬ ವಿದ್ಯುತ್ ಗುತ್ತಿಗೆದಾರನ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. 18ರಂದು ಶಿರಾಳಕೊಪ್ಪ ಸಮೀಪದ ತಡಗುಣಿ ಬಳಿ ವಿದ್ಯುತ್ ಕಂಬ ಬದಲಾವಣೆಗಾಗಿ ನವೀನ್ ಜತೆಗೆ 3 ಯುವಕರೂ ಕಂಬ ಹತ್ತಿ ಕಾಮಗಾರಿ ಕೈಗೊಂಡಿದ್ದರು. ಈ ವೇಳೆ ಕಾಮಗಾರಿ ಪೂರ್ಣಗೊಳ್ಳುವ ಕೆಲ ಸಮಯದ ಮುಂಚೆಯೇ ಏಕಾಏಕಿ ವಿದ್ಯುತ್ ಪ್ರವಹಿಸಿ, ನವೀನ್ ತಂತಿಯಲ್ಲಿ ನೇತಾಡತೊಡಗಿದ್ದಾನೆ. ಕೂಡಲೇ ವಿದ್ಯುತ್ ಡ್ರಾಪ್ ಆಗಿ ಉಳಿದ 3 ಯುವಕರು ಅಪಾಯದಿಂದ ಪಾರಾಗಿದ್ದಾರೆ. ನವೀನ್ ಸುಟ್ಟಗಾಯಗಳಿಂದಾಗಿ ಸಾವು- ಬದುಕಿನ ಹೋರಾಟದಲ್ಲಿದ್ದಾನೆ. ಮನನೊಂದ ನವೀನ್ ತಂದೆ ವಿಷಸೇವಿಸಿದ್ದಾರೆ. ಕನಿಷ್ಠ ಮಾನವೀಯ ನೆಲೆಯಲ್ಲಿ ಆರೋಗ್ಯ ವಿಚಾರಿಸುವ ಸೌಜನ್ಯತೆಯನ್ನು ಅಧಿಕಾರಿಗಳು ತೋರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಘಟನೆಗೆ ಲೈನ್ ಮ್ಯಾನ್ ರವಿ ಹಾಗೂ ಸೆಕ್ಷನ್ ಆಫೀಸರ್ ಭೀಮಣ್ಣ ನೇರ ಕಾರಣ. ಶಿಕಾರಿಪುರ ವಿಭಾಗೀಯ ವ್ಯಾಪ್ತಿಯಲ್ಲಿ ವರ್ಷದ ಅವಧಿಯಲ್ಲಿಯೇ ಅಧಿಕಾರಿಗಳ ನಿರ್ಲಕ್ಷ್ಯದಿಂದ 5ಕ್ಕೂ ಅಧಿಕ ಅಮಾಯಕ ಬಡಕಾರ್ಮಿಕರು ಬಲಿಯಾಗಿದ್ದಾರೆ. ಪದೇಪದೆ ಇಂತಹ ಅವಘಡಗಳು ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ವರ್ತನೆಯನ್ನು ತಿದ್ದಿಕೊಳ್ಳುತ್ತಿಲ್ಲ ಎಂದು ದೂರಿದರು. ರಾಜ್ಯ ಉಗ್ರಾಣ ನಿಗಮದ ಮಾಜಿ ಅಧ್ಯಕ್ಷ ಎಚ್.ಟಿ. ಬಳಿಗಾರ್ ಮಾತನಾಡಿ, 11 ಕೆವಿ ವಿದ್ಯುತ್ ತಂತಿಯಲ್ಲಿ ಜೀವದ ಹಂಗುತೊರೆದು ಕಾರ್ಯನಿರ್ವಹಿಸುವ ಕಾರ್ಮಿಕರ ಬಗ್ಗೆ ಕನಿಷ್ಠ ಅನುಕಂಪ ಅಧಿಕಾರಿಗಳಿಗಿಲ್ಲ. 11 ಕೆವಿ ತಂತಿಯನ್ನು ನೀವೇ ಹಿಡಿದುಕೊಳ್ಳಿ. ನಾವು ನಿಮಗೆ ಪರಿಹಾರ ನೀಡುತ್ತೇವೆ. ಕನಿಷ್ಠ ಮಾನವೀಯತೆ ಇಲ್ಲದೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಘಟನೆ ಬಗ್ಗೆ ಶಿರಾಳಕೊಪ್ಪ ಠಾಣೆಗೆ ದೂರು ನೀಡಲು ತೆರಳಿದರೆ ಪಿಎಸ್‌ಐ ದೂರು ದಾಖಲಿಸದೇ ಸಂತ್ರಸ್ಥರ ಕುಟುಂಬಕ್ಕೆ ಬೆದರಿಸಿ, ಕಳುಹಿಸಿದ್ದಾರೆ. ರಾಜ್ಯಾದ್ಯಂತ ಇಂತಹ ಪ್ರಕರಣ ಹೆಚ್ಚುತ್ತಿದ್ದು, ಘಟನೆಗೆ ಅಧಿಕಾರಿಗಳನ್ನು ನೇರವಾಗಿ ಆರೋಪಿಯಾಗಿಸಿ, ಶಿಸ್ತು ಕ್ರಮ ಕೈಗೊಳ್ಳಬೇಕು. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು. ಈ ಬಗ್ಗೆ ಇಂಧನ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಬದಲ್ಲಿ ಎಇಇ ಪ್ರವೀಣ್, ಧನಂಜಯ್, ವಿದ್ಯುತ್‌ ಗುತ್ತಿಗೆದಾರ ಸಂಘದ ಜಿಲ್ಲಾ ಅಧ್ಯಕ್ಷ ಮಹಾಲಿಂಗಪ್ಪ, ಮಹಾಲಿಂಗೇಗೌಡ, ರಾಘವೇಂದ್ರಾಚಾರ್, ಉಪಾಧ್ಯಕ್ಷ ಆಂಜನೇಯ, ತಾಲೂಕು ಅಧ್ಯಕ್ಷ ದಿವಾಕರಯ್ಯ, ಶಿವಯೋಗಿಸ್ವಾಮಿ ಸಹಿತ ನೂರಾರು ಗ್ರಾಮಸ್ಥರು ಹಾಜರಿದ್ದರು. - - - ಕೋಟ್‌ ವಿದ್ಯುತ್‌ ಅವಘಡದ ಘಟನೆಯಲ್ಲಿ ಲೈನ್ ಮ್ಯಾನ್ ಹಾಗೂ ಸೆಕ್ಷನ್ ಆಫೀಸರ್ ನಿರ್ಲಕ್ಷ ಎದ್ದುಕಾಣುತ್ತಿದೆ. ಅವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಶಿಫಾರಸು ಜತೆಗೆ ತನಿಖೆ ಕೈಗೊಳ್ಳಲಾಗುವುದು - ಮಂಜಪ್ಪ, ಪ್ರಭಾರ ಕಾರ್ಯಪಾಲಕ ಎಂಜಿನಿಯರ್‌, ಮೆಸ್ಕಾಂ - - - -25ಕೆಎಸ್.ಕೆಪಿ1: ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಬುಧವಾರ ಶಿಕಾರಿಪುರ ಮೆಸ್ಕಾಂ ಕಚೇರಿಯಲ್ಲಿ ಅಧಿಕಾರಿಗಳನ್ನು ಮುಖಂಡ ಎಚ್.ಟಿ. ಬಳಿಗಾರ್ ಮತ್ತಿತರರು ತೀವ್ರ ತರಾಟೆ ತೆಗೆದುಕೊಂಡರು.