ಸಹಕಾರ ಸಂಘದ ಮೂಲಕ ಗೊಬ್ಬರ ವಿತರಿಸಿ

| Published : Jul 30 2025, 12:47 AM IST

ಸಾರಾಂಶ

ಕೊಪ್ಪಳ ಜಿಲ್ಲೆಯಲ್ಲಿ ಈ ವರ್ಷ ಮಳೆ ಬೇಗೆ ಆಗಿದ್ದರಿಂದ ಭತ್ತದ ನಾಟಿ ಜತೆಗೆ ಮುಂಗಾರು ಬೆಳೆಗಳ ಬಿತ್ತನೆಯೂ ಆಗಿದೆ. ಕಳೆದ ಬಾರಿಗಿಂತಲೂ ಈ ಬಾರಿ ಬಿತ್ತನೆ ಪ್ರಮಾಣ ಹೆಚ್ಚಿದ ಪರಿಣಾಮ ರಸಗೊಬ್ಬರದ ಬೇಡಿಕೆಯೂ ಹೆಚ್ಚಾಗಿದೆ.

ಕೊಪ್ಪಳ:

ರಸಗೊಬ್ಬರ ಮಾರಾಟಕ್ಕೆ ಒಂದೇ ಕಂಪನಿ ಅಥವಾ ಏಜೆನ್ಸಿಗೆ ನೀಡಿದರೆ ರೈತರಿಗೆ ಖರೀದಿಸಲು ತೊಂದರೆಯಾಗಲಿದೆ. ಹೀಗಾಗಿ ಸಹಕಾರಿ ಸಂಘದ ಮೂಲಕ ವಿತರಿಸಲು ಕ್ರಮವಹಿಸುವಂತೆ ಕೃಷಿ ಅಧಿಕಾರಿಗಳಿಗೆ ಸಚಿವ ಶಿವರಾಜ ತಂಗಡಗಿ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲೆಯಲ್ಲಿ ರಸಗೊಬ್ಬರ ಪೂರೈಕೆಯ ಕುರಿತಾಗಿ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೆಲವೇ ಅಂಗಡಿಗಳಿಗೆ ರಸಗೊಬ್ಬರ ಮಾರಾಟ ಮಾಡಲು ಅನುಮತಿ ನೀಡಲಾಗಿದೆ ಎಂದು ರೈತರು ದೂರಿದ್ದಾರೆ. ಇದರಿಂದ ಅವರು ಸರತಿಯಲ್ಲಿ ನಿಲ್ಲುವಂತೆ ಆಗಿದೆ. ಮುದ್ದಾಬಳ್ಳಿಯಲ್ಲಿ ಒಂದೇ ಅಂಗಡಿಗೆ ಅನುಮತಿ ನೀಡಿದ್ದರಿಂದ ರಾತ್ರಿಯಿಡಿ ರೈತರು ಸರತಿ ನಿಂತಿದ್ದಾರೆ. ಕೂಡಲೆ ಜಿಲ್ಲೆಯ ಸಹಕಾರ ಸಂಘ ಹಾಗೂ ಏಜೆನ್ಸಿಗಳಿಗೆ ಸಮಾನವಾಗಿ ಗೊಬ್ಬರ ಹಂಚಿಕ್ಕೆ ಅಧಿಕಾರಿಗಳು ತ್ವರಿತವಾಗಿ ಕ್ರಮಕೈಗೊಳ್ಳಬೇಕು. ಈ ಮೂಲಕ ರೈತರ ರಕ್ಷಣೆಗೆ ಧಾವಿಸಬೇಕು ಎಂದರು.

ಪ್ರಕರಣ ದಾಖಲಿಸಿ:

ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡಿದರೆ ಅಂತಹ ಅಂಗಡಿಗಳ ವಿರುದ್ಧ ಪ್ರಕರಣ ದಾಖಲಿಸಿ ಪರವಾನಗಿ ರದ್ದುಪಡಿಸಬೇಕೆಂದು ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ಈ ವರ್ಷ ಮಳೆ ಬೇಗೆ ಆಗಿದ್ದರಿಂದ ಭತ್ತದ ನಾಟಿ ಜತೆಗೆ ಮುಂಗಾರು ಬೆಳೆಗಳ ಬಿತ್ತನೆಯೂ ಆಗಿದೆ. ಕಳೆದ ಬಾರಿಗಿಂತಲೂ ಈ ಬಾರಿ ಬಿತ್ತನೆ ಪ್ರಮಾಣ ಹೆಚ್ಚಿದ ಪರಿಣಾಮ ರಸಗೊಬ್ಬರದ ಬೇಡಿಕೆಯೂ ಹೆಚ್ಚಾಗಿದೆ ಎಂದು ಸಚಿವರು ಹೇಳಿದರು.

ಬೇಡಿಕೆಗೆ ತಕ್ಕಂತೆ ಪೂರೈಸಿ:

ರೈತರ ಬೇಡಿಕೆಗೆ ತಕ್ಕಂತೆ ಯೂರಿಯಾ ಪೂರೈಸಬೇಕು. ಜಿಲ್ಲೆಗೆ ಬರಲಿರುವ ಯೂರಿಯಾ ಪ್ರಮಾಣದ ಬಗ್ಗೆಯೂ ಅವರಿಗೆ ಮಾಹಿತಿ ನೀಡಿ ಅವಶ್ಯವಿರುವ ಪ್ರಮಾಣದಲ್ಲಿ ಮಾತ್ರ ಗೊಬ್ಬರ ಖರೀದಿಸುವಂತೆ ಮನವೊಲಿಸಬೇಕು. ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಯಾವುದೇ ಸಮಸ್ಯೆಯಿಲ್ಲ ಮತ್ತು ಮುಂದೆಯೂ ಕೊರತೆ ಆಗದು ಎಂದು ಮಾಹಿತಿ ನೀಡಬೇಕು ಎಂದರು.

ಭತ್ತ, ಮೆಕ್ಕೆಜೋಳ ಮತ್ತು ಇತರೆ ಬೆಳೆಗಳಿಗೂ ಯೂರಿಯಾ ಗೊಬ್ಬರದ ಅವಶ್ಯಕತೆ ಇರುವುದರಿಂದ ಬೇಡಿಕೆ ಹೆಚ್ಚಾಗಿದೆ. ಬೇಡಿಕೆ ಹೆಚ್ಚಿರುವ ಕಡೆ ಅಧಿಕಾರಿಗಳು ಒತ್ತು ನೀಡಿ ಗೊಬ್ಬರ ಪೂರೈಸಬೇಕು. ಇದರ ಮೇಲ್ವಿಚಾರಣೆಗೆ ಸಮಿತಿ ರಚಿಸಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ ಜಿಲ್ಲಾಮಟ್ಟದ ಅಧಿಕಾರಿ ನಿಯೋಜಿಸಬೇಕು. ತಾಲೂಕು ಮಟ್ಟದಲ್ಲಿ ತಹಸೀಲ್ದಾರ್‌, ಸಂಬಂಧಿಸಿದ ತಾಲೂಕುಗಳ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಮಿತಿ ರಚಿಸಿ ಕಾರ್ಯಪ್ರವೃತ್ತರಾಗುವಂತೆ ಜಿಲ್ಲಾಧಿಕಾರಿ ಕ್ರಮ ವಹಿಸಬೇಕು. ರಸಗೊಬ್ಬರ ಪೂರೈಕೆಯಲ್ಲಿ ಸಮಸ್ಯೆ ಉಂಟಾದಲ್ಲಿ ಸಂಬಂಧಿಸಿದ ತಾಲೂಕು ಕೃಷಿ ಇಲಾಖೆ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿ ಮಾಡುವ ಜತೆಗೆ ತಹಸೀಲ್ದಾರ್‌ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು.

ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುತ್ತಿರುವ ಕುರಿತು ದೂರುಗಳು ಬರುತ್ತಿದ್ದು, ಇದರ ಕಡಿವಾಣಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಈ ಬಗ್ಗೆ ತಹಸೀಲ್ದಾರ್‌ರು ಗೊಬ್ಬರ ಮಾರಾಟ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಮಾತನಾಡಿ, ಕಳೆದ ವರ್ಷ 2.41 ಲಕ್ಷ ಹೆಕ್ಷೇರ್ ಬಿತ್ತನೆಯಾಗಿದ್ದರೆ, ಈ ವರ್ಷ 3.26 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಹೆಚ್ಚುವರಿಯಾಗಿ 85 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದರಿಂದ ರಸಗೊಬ್ಬರದ ಬೇಡಿಕೆ ಹೆಚ್ಚಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ, ಜಿಪಂ ಸಿಇಒ ವರ್ಣಿತ ನೇಗಿ, ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿಶ್ರೀನಿವಾಸ, ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ, ಉಪ ನಿರ್ದೇಶಕ ಎಲ್. ಸಿದ್ದೇಶ ಸೇರಿದಂತೆ ಅಧಿಕಾರಿಗಳು ಇದ್ದರು.