ಕೂಸಿನ ಮನೆಯಲ್ಲಿ ಗುಣಮಟ್ಟದ ಆಹಾರ ವಿತರಿಸಿ

| Published : Jul 26 2025, 01:30 AM IST

ಸಾರಾಂಶ

ಕೂಸಿನ ಮನೆಗೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಕೆರ್ ಟೇಕರ್ ಮನೆ-ಮನೆ ಭೇಟಿ ನೀಡಿ ಕರೆದುಕೊಂಡು ಬರಬೇಕು. ಜಿಲ್ಲಾ ಪಂಚಾಯಿತಿಯಲ್ಲಿ ನಿರ್ಧರಿಸಿದ ಆಹಾರ ಪಟ್ಟಿಯ ಪ್ರಕಾರ ಪೌಷ್ಟಿಕ ಆಹಾರ ನೀಡಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ಕುಕನೂರು:

ತಾಲೂಕಿನ ತಳಕಲ್, ಮಂಡಲಗೇರಿ, ಇಟಗಿ, ರಾಜೂರ, ಮಸಬಹಂಚಿನಾಳ, ಬೆಣಕಲ್ ಮತ್ತು ಭಾನಾಪೂರದ ಕೂಸಿನ ಮನೆಗಳಿಗೆ ಮೊಬೈಲ್ ಕ್ರೆಶ್ ಸಂಸ್ಥೆ ಬೆಂಗಳೂರು ತಂಡ ಭೇಟಿ ಪರಿಶೀಲಿಸಿತು.

ತಂಡದ ಶಶಿಧರ ಮಾತನಾಡಿ, ಕೂಸಿನ ಮನೆಯಲ್ಲಿ ಮಕ್ಕಳ ಹಾಜರಾತಿ, ಗುಣಮಟ್ಟದ ಆಹಾರ ವಿತರಣೆ, ದಾಖಲಾತಿಗಳ ನಿರ್ವಹಣೆ, ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಮಾಹಿತಿ, ಹಾಡು, ನೃತ್ಯ, ಆರೋಗ್ಯ ತಪಾಸಣೆ, ಪೋಷಕರ ಸಭೆ ಮತ್ತು ಕೂಸಿನ ಮನೆ ಮೇಲ್ವಿಚಾರಣಾ ಸಭೆ ಮಾಡಬೇಕು ಎಂದರು.

ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಕೆರ್ ಟೇಕರ್ ಮನೆ-ಮನೆ ಭೇಟಿ ನೀಡಿ ಕರೆದುಕೊಂಡು ಬರಬೇಕು. ಜಿಲ್ಲಾ ಪಂಚಾಯಿತಿಯಲ್ಲಿ ನಿರ್ಧರಿಸಿದ ಆಹಾರ ಪಟ್ಟಿಯ ಪ್ರಕಾರ ಪೌಷ್ಟಿಕ ಆಹಾರ ನೀಡಬೇಕು ಎಂದು ಹೇಳಿದರು.

ರಜಿನಿ ಎಚ್. ಮಾತನಾಡಿ, ಪ್ರತಿತಿಂಗಳು ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಬೇಕು. ಕಡಿಮೆ ತೂಕದ ಮಕ್ಕಳು ಕಂಡುಬಂದಲ್ಲಿ ಅಂತಹವರಿಗೆ ಹೆಚ್ಚುವರಿ ಆಹಾರ ಒದಗಿಸಬೇಕು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಟಿಕೆ ಸಾಮಗ್ರಿ ಇರುವಂತೆ ನೋಡಿಕೊಳ್ಳಬೇಕು. ಪ್ರತಿ ತಿಂಗಳು ಪೋಷಕರ ಸಭೆ, ಕೂಸಿನ ಮನೆ ಮೇಲುಸ್ತುವಾರಿ ಸಮಿತಿ ಸಭೆಯನ್ನು ಕಡ್ಡಾಯವಾಗಿ ಆಯೋಜಿಸಿದರೆ ಕೂಸಿನ ಮನೆಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಯಶಸ್ವಿಯಾಗಿ ನಿರ್ವಹಣೆಯಾಗುತ್ತವೆ. ಕೇಂದ್ರ ಗ್ರಾಮ ಪಂಚಾಯಿತಿಗೆ ಒಂದೇ ಇರುವುದರಿಂದ ಎಲ್ಲ ಗ್ರಾಮಗಳ ಜನರ 3 ವರ್ಷದೊಳಗಿನ ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ತಳಕಲ್ ಗ್ರಾಮಕ್ಕೆ ತಂಡವು ಭೇಟಿ ನೀಡಿದಾಗ ಪಿಡಿಒ ವೀರನಗೌಡ ಚೇನ್ನವೀರಗೌಡ್ರ, ಕೂಸಿನ ಮನೆಗಳು ಗ್ರಾಮದ 3 ವರ್ಷದೊಳಗಿನ ಮಕ್ಕಳಗೆ ಆರೈಕೆ, ಪೌಷ್ಟಿಕ ಆಹಾರ, ಶಿಕ್ಷಣ ಒದಗಿಸುವ ಕೇಂದ್ರಗಳಾಗಿವೆ. ಇದರೊಂದೊಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 8 ಜನ ಆರೈಕೆದಾರರಿಗೆ ನಿರಂತರ 100 ದಿನ ಕೆಲಸ ಸಿಗಲಿದೆ ಎಂದರು.

ಈ ವೇಳೆ ತಾಪಂ ಗ್ರಾಮೀಣ ಸಹಾಯಕ ನಿರ್ದೇಶಕ ಶರಣಪ್ಪ ಕೆಳಗಿನಮನಿ, ಪಿಡಿಒ, ಕೂಸಿನ ಮನೆಯ ಕೇರ್ ಟೇಕರ್ ಇದ್ದರು.