ನಿಗದಿತ ದರದಲ್ಲೇ ಬೀಜ, ರಸಗೊಬ್ಬರ ಮಾರಾಟ ಮಾಡಿ

| Published : May 22 2024, 12:50 AM IST

ಸಾರಾಂಶ

ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದ ರಸಗೊಬ್ಬರ ದಾಸ್ತಾನು ಇದೆ. ಪರಿಕರ ಮಾರಾಟಗಾರರು ರಸಗೊಬ್ಬರ ಸಂಗ್ರಹಸಿಟ್ಟುಕೊಂಡು, ತಾತ್ಕಾಲಿಕ ಅಥವಾ ಕೃತಕ ಅಭಾವ ಸೃಷ್ಟಿಸಬೇಡಿ,

ಧಾರವಾಡ:

ಕೃಷಿ ಇಲಾಖೆ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆಶ್ರಯದಲ್ಲಿ ಕೃಷಿ ಪರಿಕರ ಮಾರಾಟಗಾರರ ತರಬೇತಿ ಹಾಗೂ ಸಭೆಯು ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಮಂಗಳವಾರ ಯಶಸ್ವಿಯಾಗಿ ಜರುಗಿತು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ ಮಾತನಾಡಿ, ಬೀಜ ಮತ್ತು ರಸಗೊಬ್ಬರಗಳನ್ನು ನಿಗದಿತ ದರಗಳ ಪ್ರಕಾರ ಮಾರಾಟ ಮಾಡಬೇಕು. ಕಳಪೆ ಗುಣಮಟ್ಟದ ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ಮಾರಾಟದ ಮಾಹಿತಿ ಬಂದಲ್ಲಿ ಕಠಿಣ ಕ್ರಮಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದ ರಸಗೊಬ್ಬರ ದಾಸ್ತಾನು ಇದೆ. ಪರಿಕರ ಮಾರಾಟಗಾರರು ರಸಗೊಬ್ಬರ ಸಂಗ್ರಹಸಿಟ್ಟುಕೊಂಡು, ತಾತ್ಕಾಲಿಕ ಅಥವಾ ಕೃತಕ ಅಭಾವ ಸೃಷ್ಟಿ ಮಾಡದಂತೆ ಎಚ್ಚರಿಸಿದರು.

ಕೃಷಿ ಇಲಾಖೆ ಉಪ ನಿರ್ದೇಶಕಿ ಜಯಶ್ರೀ ಹಿರೇಮಠ ಮಾತನಾಡಿ, ರೈತರಿಗೆ ಸಕಾಲಕ್ಕೆ ಬೀಜ, ಗೊಬ್ಬರ ಪೂರೈಕೆ ಮಾಡುವುದು ನಮ್ಮ ಕರ್ತವ್ಯ. ಪರ್ಯಾಯ ರಸಗೊಬ್ಬರಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ತಿಳಿಸಿದರು.

ನ್ಯಾನೋ ಯೂರಿಯಾ ಗೊಬ್ಬರ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿ, ಅದರ ಉಪಯುಕ್ತತೆ ಬಗ್ಗೆ ಕೃಷಿ ಉತ್ಪನ್ನ ಮಾರಾಟಗಾರರಲ್ಲಿ ಆಸಕ್ತಿ ಮೂಡಿಸಬೇಕು ಎಂದರು.

ಜಾರಿದಳದ ಸಹಾಯಕ ಕೃಷಿ ನಿರ್ದೇಶಕ ವಿಠಲರಾವ್, ರಸಗೊಬ್ಬರ ಕಾಯ್ದೆ, ಕೀಟನಾಶಕಿಗಳ ಕಾಯ್ದೆ, ಬೀಜ ನಿಯಂತ್ರಣ ಹಾಗೂ ಅಧಿನಿಯಮಗಳು ಕುರಿತು ಮಾಹಿತಿ ನೀಡಿದರು.

ಧಾರವಾಡ ತಾಲೂಕು ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅಣಗೌಡರ, ಮಾರಾಟ ಪರವಾನಗಿ ಇಲ್ಲದಿರುವುದು ಅಥವಾ ಪರವಾನಗಿ ನವೀಕರಸದೇ ಇರುವುದು, ರಸಗೊಬ್ಬರ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದರೆ ಕಾನೂನ ಕ್ರಮಕೈಗೊಳ್ಳುವುದಾಗಿ ಹಾಗೂ ನಿಯಮಿತವಾಗಿ ದಾಸ್ತಾನಿನಲ್ಲಿ ಇರುವ ರಸಗೊಬ್ಬರಗಳು ಫಾಸ್ ಮಿಶಿನ್‌ಗೆ ಹೊಂದಾಣಿಕೆ ಇರುವಂತೆ ನೋಡಿಕೊಳ್ಳಲು ತಿಳಿಸಿದರು.

ರೈತರಿಗೆ ಶಿಫಾರಸಿನ ಆಧಾರದಲ್ಲಿ ರಸಗೊಬ್ಬರ ಮಾರಾಟ ಮಾಡುವುದು, ನ್ಯಾನೋ ಯೂರಿಯಾದ ಕುರಿತು ಹೆಚ್ಚಿನ ಅರಿವು ಮೂಡಿಸಿ ಮಾರಾಟ ಮಾಡಲು ತಿಳಿಸಿದರು.

ರೈತ ಮುಖಂಡರಾದ ಗಂಗಾಧರ ಕುಲಕರ್ಣಿ, ಕೃಷಿ ಅಧಿಕಾರಿಗಳಾದ ಗುರುಪ್ರಸಾದ, ರೇಖಾ ಬೆಳ್ಳಟ್ಟಿ, ಮೋಹನ್ ದಂಡಗಿ, ಕೃಷಿ ಸಹಾಯಕ ಮಹದೇವ ಸರಶೆಟ್ಟಿ, ಶಿವಕುಮಾರ, ಶಂಕರ ಹಳದಮನಿ ಇದ್ದರು.