ಸಾರಾಂಶ
ಮುಂಡರಗಿ: ಇಲ್ಲಿಯ ತಾಪಂ ಸಭಾಂಗಣದಲ್ಲಿ ಇತ್ತೀಚೆಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಎಸ್‌ಸಿ-ಎಸ್‌ಪಿ ಮತ್ತು ಟಿಎಸ್‌ಪಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ, ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿಯ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಮೋದ ತುಂಬಳ ಮಾತನಾಡಿ, ಪ್ರಸ್ತುತ ವರ್ಷ ಎಸ್‌ಸಿ ವರ್ಗದ 12,500 ಮತ್ತು ಎಸ್‌ಟಿ ವರ್ಗದ 5,050 ಫಲಾನುಭವಿಗಳಿಗೆ ಬಿತ್ತನೆ ಬೀಜ ಕಾಯ್ದಿರಿಸಲಾಗಿದೆ. ಈಗಾಗಲೆ ಹೆಸರು, ತೊಗರೆ, ಮೆಕ್ಕೆಜೋಳ ಸುಮಾರು 450 ಕ್ವಿಂಟಲ್ ಬೀಜ ವಿತರಿಸಲಾಗಿದೆ ಎಂದು ತಿಳಿಸಿದರು.ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ್ ಯಲಿವಾಳ ಮಾತನಾಡಿ, ಅಧಿಕಾರಿಗಳು ಮಾಹಿತಿ ನೀಡುವಾಗ ಕೇವಲ ಅಂಕಿ-ಸಂಖ್ಯೆಗಳನ್ನಷ್ಟೇ ನಮೂದಿಸದೆ, ಇಲಾಖೆ ಸಂಪೂರ್ಣ ಯೋಜನೆಗಳನ್ನು ನಮೂದಿಸಿ ಮಾಹಿತಿ ನೀಡುವಂತೆ ತಿಳಿಸಿದರು.
ತೋಟಗಾರಿಕೆ ಇಲಾಖೆಯ ಅಧಿಕಾರಿ ಪರವಾಗಿ ಬಂದ ಸಿಬ್ಬಂದಿ ಮಾಹಿತಿ ನೀಡಿದರು. 12 ಸಾವಿರ ಗೊಬ್ಬರಕ್ಕೆ ಅನುದಾನ ಬಿಡುಗಡೆಯಾಗಿದೆ. ಈ ಅನುದಾನದಲ್ಲಿ ನಿಯಮಾನುಸಾರ ಡ್ರ್ಯಾಗನ್ ಪ್ರೂಟ್, ದಾಳಿಂಬೆ, ನುಗ್ಗೆ ಬೆಳೆದ ರೈತರಿಗೆ ಗೊಬ್ಬರ ವಿತರಣೆ ಮಾಡಲಾಗಿದೆ ಎಂದರು.ಉದಯಕುಮಾರ ಯಲಿವಾಳ ಮಾತನಾಡಿ, ನಿಮ್ಮ ಇಲಾಖೆಗೆ ಅರ್ಜಿ ಸಲ್ಲಿಸಿದ ಎಲ್ಲ ಎಸ್‌ಸಿ, ಎಸ್‌ಟಿ ಜನಾಂಗದವರಿಗೂ ನಿಯಮಾನುಸಾರ ಸೌಲಭ್ಯಗಳ ವಿತರಣೆ ಮಾಡಲು ಕ್ರಮವಹಿಸಿ. ಕೇವಲ ಸೀಮಿತ ಜನಾಂಗದವರಿಗೆ ಮಾತ್ರ ಸೌಲಭ್ಯಗಳನ್ನು ನೀಡುತ್ತೀರಿ ಎನ್ನುವ ದೂರು ಇದೆ. ಅರ್ಜಿ ಸಲ್ಲಿಸಿ ಅರ್ಹ ಫಲಾನುಭವಿಗೆ ನಿಯಮಾನುಸಾರ ಸೌಲಭ್ಯಗಳು ತಲುಪುವಂತಾಗಲಿ ಎಂದು ತಿಳಿಸಿದರು.
ಸಭೆಯಲ್ಲಿ ಕೆಆರ್‌ಐಡಿಎಲ್ ಇಲಾಖೆಯಿಂದ ಅಧಿಕಾರಿ ಪರವಾಗಿ ಆಗಮಿಸಿದ ಸಿಬ್ಬಂದಿ ಬಸವರಾಜ ಇಲಾಖೆ ಮಾಹಿತಿ ನೀಡಲು ತಡವರಿಸಿದರು. ಈ ಸಂದರ್ಭದಲ್ಲಿ ಇಲಾಖೆಯ ಕಾಮಗಾರಿಗಳು ಸರಿಯಾಗಿ ಪೂರ್ಣಗೊಳಿಸದೆ ಬೇಜಾವಾಬ್ದಾರಿತನ ತೋರಿಸುತ್ತಿದ್ದೀರಿ. ಇದರಿಂದ ಪ್ರಗತಿ ಕುಂಠಿತವಾಗುತ್ತಿದೆ. ಕಕ್ಕೂರ ತಾಂಡಾದ ಅಂಗನವಾಡಿ ಕಟ್ಟಡ ನಿರ್ಮಾಣ, ಕುಡಿಯುವ ನೀರಿನ ಪ್ಯೂರಿಫಯರ್, ಶೌಚಾಲಯ ಈ ಯಾವುದೆ ಕಾಮಗಾರಿಗಳು ಪೂರ್ಣವಾಗದೆ ಮಕ್ಕಳಿಗೆ ತೊಂದರೆಯಾಗಿದೆ. ಈ ವಿಷಯವಾಗಿ ನೋಟಿಸ್ ನೀಡಲು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೂಚಿಸಿದರು.ಸಭೆಯಲ್ಲಿ ಶಿಕ್ಷಣ ಇಲಾಖೆ, ಪಿಆರ್‌ಇಡಿ, ಲೋಕೋಪಯೋಗಿ, ಅಕ್ಷರ ದಾಸೋಹ, ಮೀನುಗಾರಿಕೆ, ಶಿಶು ಅಭಿವೃದ್ಧಿ ಇಲಾಖೆ, ಸಾಮಾಜಿಕ ಮತ್ತು ವಲಯ ಅರಣ್ಯ ಇಲಾಖೆ, ಪುರಸಭೆ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಪ್ರಗತಿ ವರದಿ ಮಾಹಿತಿ ನೀಡಿದರು.