ಅಜ್ಜರಕಾಡು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬ್ಯಾಗ್‌, ಡ್ರಾಯಿಂಗ್‌ ಕಿಟ್‌ ವಿತರಣೆ

| Published : Jul 15 2025, 11:45 PM IST

ಅಜ್ಜರಕಾಡು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬ್ಯಾಗ್‌, ಡ್ರಾಯಿಂಗ್‌ ಕಿಟ್‌ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಅಜ್ಜರಕಾಡು ಸರ್ಕಾರಿ ಸಂಯುಕ್ತ ಪ್ರೌಡಶಾಲೆಯಲ್ಲಿ ಉಡುಪಿ ಪೊಲೀಸ್ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಸೋಮವಾರ ಶಾಲಾ ಬ್ಯಾಗ್, ಡ್ರಾಯಿಂಗ್ ಕಿಟ್ ಹಾಗೂ ನೀರಿನ ಬಾಟಲ್ ಗಳನ್ನು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ವಿದ್ಯಾರ್ಥಿ ಜೀವನದಲ್ಲಿಯೇ ಶಿಸ್ತು, ಶ್ರದ್ಧೆ ಮತ್ತು ಚೆನ್ನಾಗಿ ಓದುವ ಹವ್ಯಾಸಗಳನ್ನು ಬೆಳೆಸಿಕೊಂಡರೆ ಭವಿಷ್ಯದ ಜೀವನದಲ್ಲಿ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯ. ವಿದ್ಯಾರ್ಥಿ ಜೀವನವನ್ನು ಸಾರ್ಥಕ ಮಾಡಿಕೊಂಡವರೇ ನಿಜವಾದ ಸಾಧಕರು ಆಗುತ್ತಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್ ಹೇಳಿದ್ದಾರೆ.

ಸೋಮವಾರ ನಗರದ ಅಜ್ಜರಕಾಡು ಸರಕಾರಿ ಸಂಯುಕ್ತ ಪ್ರೌಡಶಾಲೆಯಲ್ಲಿ ಉಡುಪಿ ಪೊಲೀಸ್ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಡ್ರಾಯಿಂಗ್ ಕಿಟ್ ಹಾಗೂ ನೀರಿನ ಬಾಟಲ್ ಗಳನ್ನು ವಿತರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪರಿಶ್ರಮದಿಂದ ವಿದ್ಯಾಭ್ಯಾಸವನ್ನು ಮಾಡುವುದರೊಂದಿಗೆ ಶಿಕ್ಷಣವಂತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿ, ತಮ್ಮ ಪೋಷಕರಿಗೆ, ಗುರುಹಿರಿಯರಿಗೆ ಒಳ್ಳೆಯ ಹೆಸರನ್ನು ತಂದುಕೊಡುವ ಜೊತೆಗೆ ಸಮಾಜದಲ್ಲಿ ಉತ್ತಮ ಸೇವೆಯನ್ನು ಮಾಡುವುದರೊಂದಿಗೆ ಜೀವನದಲ್ಲಿ ಸಾರ್ಥಕತೆಯನ್ನು ಕಾಣಬೇಕು ಎಂದರು.

ಸರ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್‌ ರಾಮಚಂದ್ರ ನಾಯಕ್ ಮಾತನಾಡಿ, ಶಿಕ್ಷಣಕ್ಕಾಗಿ ವಿವಿಧೆಡೆಯಿಂದ ಆಗಮಿಸಿದ ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗೆ ಶಿಕ್ಷಣದ ಹಾದಿ ಹಿಡಿಯುತ್ತಾರೆ. ಗುರಿ ಸಾಧಿಸುವವರೆಗೆ ಸತತ ಅಧ್ಯಯನ ಮಾಡಬೇಕು. ಬದುಕುವ ಕಲೆಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಕಲಿಕೆಯ ಜೊತೆಗೆ ಉಳಿಕೆಯ ಕಲೆಯನ್ನು ಅಭ್ಯಾಸ ಮಾಡಿಕೊಂಡಾಗ ಬದುಕು ಉತ್ತಮವಾಗಿ ರೂಪುಗೊಳ್ಳುತ್ತದೆ ಎಂದರು.ಡಿವೈಎಸ್ಪಿ ಪ್ರಭು ಡಿ.ಟಿ, ನಗರ ಪೊಲೀಸ್ ನಿರೀಕ್ಷಕ ಮಂಜುನಾಥ್ ಬಡಿಗೇರ, ವಿವಿಧ ಠಾಣೆಯ ಪೊಲೀಸ್ ಉಪನಿರೀಕ್ಷಕರುಗಳು, ಶಾಲೆಯ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಉಷಾಕಿರಣ ಸ್ವಾಗತಿಸಿದರು. ಶಿಕ್ಷಕ ರವೀಂದ್ರ ನಿರೂಪಿಸಿದರು.