ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹಾಗೂ ಬಿಜೆಪಿ ಯುವ ಮುಖಂಡ ಡಾ.ಅರುಣ್ ಸೋಮಣ್ಣ ಅವರ ಹುಟ್ಟುಹಬ್ಬದ ಪ್ರಯುಕ್ತ ವಿ.ಸೋಮಣ್ಣ ಅಭಿಮಾನಿ ಬಳಗದಿಂದ ಶನಿವಾರ ನಗರದ 26ನೇ ವಾರ್ಡಿನ ಆಜಾದ್ ಪಾರ್ಕ್ ನಲ್ಲಿ ಜನ್ಮದಿನ ಆಚರಿಸಿ ಶಾಲಾ ಮಕ್ಕಳಿಗೆ ಬ್ಯಾಗ್, ನೋಟ್ ಪುಸ್ತಕ ವಿತರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಸಚಿವ ವಿ.ಸೋಮಣ್ಣನವರು ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ನಂತರ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಕಾರ್ಯಗತಗೊಂಡಿವೆ. ನೆನೆಗುದಿಗೆ ಬಿದ್ದಿದ್ದ ಅನೇಕ ರೈಲ್ವೆ ಯೋಜನೆಗಳಿಗೆ ಚಾಲನೆ ದೊರಕಿದೆ. ಬಹು ನಿರೀಕ್ಷೆಯ ತುಮಕೂರು-ರಾಯದುರ್ಗ ಹಾಗೂ ತುಮಕೂರು-ದಾವಣಗೆರೆ ರೈಲ್ವೆ ಮಾರ್ಗದ ಯೋಜನೆಗಳು ವೇಗ ಪಡೆದುಕೊಂಡಿವೆ ಎಂದರು.
ರೈಲು ಮಾರ್ಗವನ್ನು ಲೆವೆಲ್ ಕ್ರಾಸಿಂಗ್ ಮುಕ್ತ ಮಾಡಬೇಕೆಂದು ಸಚಿವ ಸೋಮಣ್ಣನವರು ಜಿಲ್ಲೆಯಲ್ಲಿ ಸುಮಾರು 20 ಲೆವೆಲ್ ಕ್ರಾಸಿಂಗ್ ಕಡೆ ಫ್ಲೈ ಓವರ್ ಇಲ್ಲವೆ ಅಂಡರ್ ಪಾಸ್ ನಿರ್ಮಾಣಕ್ಕೆ ಆದ್ಯತೆ ನೀಡಿ ಅವುಗಳ ಕಾಮಗಾರಿ ನಡೆಯುತ್ತಿದೆ ಎಂದರು.ತುಮಕೂರು-ಗುಬ್ಬಿ ನಡುವಿನ ಹೆದ್ದಾರಿಯನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದಾರೆ. ನಗರದ ರೈಲು ನಿಲ್ದಾಣವನ್ನು ಆತ್ಯಾಧುನಿಕವಾಗಿ ಮರುನಿರ್ಮಾಣ ಮಾಡಿ ಡಾ.ಶಿವಕುಮಾರ ಸ್ವಾಮೀಜಿಗಳ ಹೆಸರಿಡಲು ಸಂಕಲ್ಪ ಮಾಡಿದ್ದಾರೆ ಎಂದು ಹೇಳಿದರು.
ಸಚಿವ ಸೋಮಣ್ಣನವರ ಹುಟ್ಟು ಹಬ್ಬದ ಈ ಸಂದರ್ಭದಲ್ಲಿ ಅವರಿಗೆ ಎಲ್ಲಾ ರೀತಿಯ ಯಶಸು ದೊರೆಯಲಿ, ಹಿಡಿದ ಕೆಲಸ ಮಾಡಿ ಮುಗಿಸುವ ಛಲ ಹೊಂದಿರುವ ಸೋಮಣ್ಣ ಅವರ ಸೇವೆ ರಾಜ್ಯದ ಜನರಿಗೆ ದೊರೆಯಲಿ ಅವರು ಮುಂದೆ ಈ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ಧನಿಯಾಕುಮಾರ್ ಆಶಿಸಿದರು.ನಗರಪಾಲಿಕೆ ಮಾಜಿ ಸದಸ್ಯ ಪ್ರಸನ್ನಕುಮಾರ್ ಮಾತನಾಡಿ, ಸಚಿವ ಸೋಮಣ್ಣನವರಿಂದ ತುಮಕೂರು ಜಿಲ್ಲೆ ಸರ್ವತೋಮುಖವಾಗಿ ಅಭಿವೃದ್ಧಿಯಾಗುವ ಹಾದಿಯಲ್ಲಿದೆ. ಬೆಂಗಳೂರಿಗೆ ಸಮೀಪವಿರುವ ತುಮಕೂರು ನಗರದ ಅಭಿವೃದ್ಧಿ, ಮೂಲ ಸೌಕರ್ಯ ಒದಗಿಸಲು ಸೋಮಣ್ಣನವರು ಇನ್ನೂ ಹಲವಾರು ಯೋಜನೆಗಳನ್ನು ತರಲಿದ್ದಾರೆ ಎಂದು ಹೇಳಿದರು.
ಸೋಮಣ್ಣ ಅಭಿಮಾನಿ ಬಳಗದ ಕೊಪ್ಪಲ್ ನಾಗರಾಜು, ಯುವ ಮುಖಂಡ ವಿನಯ್‌ಕುಮಾರ್, ಮುಖಂಡರಾದ ಮಂಜುನಾಥ್, ಉದಯಕುಮಾರ್ ಮೊದಲಾದವರು ಭಾಗವಹಿಸಿದ್ದರು.