ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಬೀರೇನಹಳ್ಳಿ ಸರ್ಕಾರಿ ಪ್ರೌಢಶಾಲೆ ನೂರಾರು ವಿದ್ಯಾರ್ಥಿಗಳಿಗೆ ವಿಂಡ್ ಎನರ್ಜಿ ಉದ್ಯಮಿ ವಿಜಯ್ ಗುಂಜಾಲ್ ಹುಟ್ಟುಹಬ್ಬದ ಪ್ರಯುಕ್ತ ಬ್ಯಾಗ್, ಕ್ರೀಡಾ ಸಾಮಗ್ರಿ ವಿತರಿಸಲಾಯಿತು.ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ ಬಸವರಾಜ್ ಮಾತನಾಡಿ, ತಾಲೂಕಿನ ಬೀರೇನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಇಲ್ಲದ್ದು, ಹಾಸ್ಟೆಲ್ ಸಹ ಇಲ್ಲದಿರುವುದು ನೋವಿನ ಸಂಗತಿ. ಈ ಸರ್ಕಾರಿ ಪ್ರೌಢಶಾಲೆಯಲ್ಲಿ ನೂರಾರು ಗ್ರಾಮೀಣ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಅವರಿಗೆ ಸೂಕ್ತ ಮೂಲಭೂತ ಸೌಲಭ್ಯ ಒದಗಿಸಿಕೊಡಬೇಕಿದೆ. ತಾಲೂಕಿನ ಹರಿಯಬ್ಬೆ ಗ್ರಾಮದವರಾದ ನಿವೃತ್ತ ಸರ್ಕಾರಿ ನೌಕರರಾದ ಪಾರ್ಥಸಾರಥಿ ಹಾಗೂ ಶಾಂತಮ್ಮ ದಂಪತಿ ಪುತ್ರ ವಿಜಯ್ ಗುಂಜಾಲ್ ಬಾಂಬೆ ಐಐಟಿಯಲ್ಲಿ ಉನ್ನತ ಶಿಕ್ಷಣ ಪಡೆದು ಭಾರತೀಯ ಪೆಟ್ರೋಲಿಯಂನಲ್ಲಿ ಸಿವಿಲ್ ವಿಭಾಗದಲ್ಲಿ ಮುಖ್ಯಸ್ಥರಾಗಿ ನಂತರ ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸಿ ಇದೀಗ ವಿಂಡ್ ಎನರ್ಜಿ ಉದ್ಯಮಿಯಾಗಿ ರಾಜ್ಯದ ಹಲವಾರು ಕಡೆ ವಿಂಡ್ ಎನರ್ಜಿ ಮೂಲಕ ಯಶಸ್ವಿಯಾಗಿ ವಿದ್ಯುತ್ ತಯಾರು ಮಾಡುತ್ತಿದ್ದಾರೆ. ಬೀರೇನಹಳ್ಳಿಯಲ್ಲಿ ಕೃಷಿಯ ಜೊತೆಗೆ ಡೈರಿ ಪ್ರಾರಂಭಿಸಿರುವ ಅವರು ಬಹುಮುಖ ಪ್ರತಿಭೆವುಳ್ಳವರಾಗಿದ್ದಾರೆ. ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಬೀರೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನೂರಾರು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಬ್ಯಾಗ್ ಹಾಗೂ ಕ್ರೀಡಾ ಸಾಮಗ್ರಿಗಳನ್ನು ಕೊಡುಗೆ ನೀಡಿರುವುದನ್ನು ನಾವೆಲ್ಲಾ ಸ್ಮರಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು, ಗ್ರಾಮದ ಮುಖಂಡರು, ಶಿಕ್ಷಕರು, ಶಿಕ್ಷಕರು,ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು ಹಾಜರಿದ್ದರು.