ಸುರೇಶ್ ಭಾವಚಿತ್ರವುಳ್ಳ ಮತಚೀಟಿ ವಿತರಣೆ

| Published : Apr 14 2024, 01:46 AM IST

ಸಾರಾಂಶ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಭಾವಚಿತ್ರವುಳ್ಳ ಮತದಾರರ ಮಾಹಿತಿ ಇರುವ ಚೀಟಿ ವಿತರಣೆಗೆ ಬಿಜೆಪಿ - ಜೆಡಿಎಸ್ ಮೈತ್ರಿ ಪಕ್ಷಗಳ ಕಾರ್ಯಕರ್ತರು ಆಕ್ಷೇಪ ವ್ಯಕ್ತ ಪಡಿಸಿದ ಘಟನೆ ನಗರದಲ್ಲಿ ಶನಿವಾರ ನಡೆಯಿತು.

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಭಾವಚಿತ್ರವುಳ್ಳ ಮತದಾರರ ಮಾಹಿತಿ ಇರುವ ಚೀಟಿ ವಿತರಣೆಗೆ ಬಿಜೆಪಿ - ಜೆಡಿಎಸ್ ಮೈತ್ರಿ ಪಕ್ಷಗಳ ಕಾರ್ಯಕರ್ತರು ಆಕ್ಷೇಪ ವ್ಯಕ್ತ ಪಡಿಸಿದ ಘಟನೆ ನಗರದಲ್ಲಿ ಶನಿವಾರ ನಡೆಯಿತು.

ಬಿಜೆಪಿ-ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವಿನ ವಾಕ್ಸಮರದಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಗರಸಭೆಯ 7ನೇ ವಾರ್ಡಿನಲ್ಲಿ ಬೆಳಿಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಮನೆಗಳಿಗೆ ತೆರಳಿ ಮತದಾರರ ಹೆಸರು, ಮತ ಚೀಟಿ ಸಂಖ್ಯೆ, ಮತ ಚಲಾಯಿಸಬೇಕಾದ ಬೂತ್ ಸಂಖ್ಯೆ ಇತ್ಯಾದಿ ಮಾಹಿತಿ ಜೊತೆಗೆ ತಮ್ಮ ಪಕ್ಷದ ಅಭ್ಯರ್ಥಿ ಡಿ.ಕೆ.ಸುರೇಶ್ ಭಾವಚಿತ್ರ ಮತ್ತು ಮತ ಚಲಾಯಿಸಲು ಮನವಿಯುಳ್ಳ ಚೀಟಿಗಳನ್ನು ಸ್ಥಳದಲ್ಲೇ ಹ್ಯಾಂಡ್ ಪ್ರಿಂಟರ್ ಮೂಲಕ ಮುದ್ರಿಸಿ ವಿತರಿಸುತ್ತಿದ್ದರು. ಇದನ್ನು ಕಂಡ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.

ವಿಧಾನಸಭಾ ಚುನಾವಣೆ ವೇಳೆ ಗಿಫ್ಟ್ ಕೂಪನ್ ವಿತರಿಸಿದಂತೆ ವಾಮ ಮಾರ್ಗದಲ್ಲಿ ಚುನಾವಣೆ ಗೆಲ್ಲಲು ಕುತಂತ್ರ ನಡೆಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು, ತಾವು ಮತದಾರರ ಮಾಹಿತಿಯುಳ್ಳ ಮತಚೀಟಿಗಳನ್ನು ಮಾತ್ರ ವಿತರಿಸುತ್ತಿರುವುದಾಗಿ ವಾದಿಸಿದರು. ಹೀಗೆ ಮತ ಚೀಟಿಗಳನ್ನು ಚುನಾವಣಾ ಆಯೋಗದ ಅನುಮತಿ ಇಲ್ಲದೆ ವಿತರಿಸುವುದು ಅಕ್ಷಮ್ಯ ಎಂದು ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಮತ್ತೆ ಆಕ್ಷೇಪ ವ್ಯಕ್ತಪಡಿಸಿದರು. ಕೆಲ ಕಾಲ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ವಾಕ್ಸಮರ ನಡೆಯಿತು. ಬಳಿಕ ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿಯೊಬ್ಬರು ಸ್ಥಳಕ್ಕೆ ಆಗಮಿಸಿ ಮುದ್ರಣ ಯಂತ್ರವನ್ನು ಪರಿಶೀಲಿಸಿ ಅನಮತಿ ಪತ್ರ ಪಡೆಯುವಂತೆ ಸೂಚಿಸಿದರು. ಅನುಮತಿ ಪತ್ರ ತಮ್ಮ ಬಳಿ ಇರುವುದಾಗಿ ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದರು. ಅಲ್ಲಿಗೆ ಸಮಸ್ಯೆ ತಿಳಿಯಾಯಿತು.

ಕಾಂಗ್ರೆಸ್ ಕಾರ್ಯಕರ್ತರು ಮತದಾರರ ಮಾಹಿತಿ ಚೀಟಿ ವಿತರಣೆಗೆ ಆಕ್ಷೇಪ ವ್ಯಕ್ತಪಡಿಸಿದ ಮೈತ್ರಿ ಪಕ್ಷಗಳ ಕಾರ್ಯಕರ್ತರು ಉಪಚುನಾವಣಾಧಿಕಾರಿಗಳಿಂದ ಅನುಮತಿ ಪಡೆದಿರುವ ಸಂಗತಿ ತಿಳಿದು ಮೌನವಾದರು. ಅಲ್ಲದೆ, ಚುನಾವಣೆ ಪಾರದರ್ಶಕವಾಗಿ ನಡೆಯಬೇಕು. ಹೀಗಾಗಿ ಅಧಿಕಾರಿಗಳು ಇನ್ನು ಹೆಚ್ಚಿನ ನಿಗಾ ಇಡಬೇಕಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ಗಿಫ್ಟ್‌ಕಾರ್ಡ್ ಕೊಟ್ಟು ವಂಚಿಸಿದ್ದರು. ಇಂತಹ ವಂಚನೆ ಮರುಕಳಿಸಬಾರದು ಎಂದು ಹೇಳಿದರು.ಬಾಕ್ಸ್ ..............

ಆಯೋಗ ಏನು ಮಾಡ್ತಿದೆ?

ಮನೆ ಮನೆಗೆ ತೆರಳಿ ಮತದಾನಕ್ಕೆ ಮನವಿ ಮಾಡುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಅಧುನಿಕ ತಂತ್ರಜ್ಞಾನ ಬಳಸಿಕೊಂಡು ಮತದಾರರ ಮಾಹಿತಿಯುಳ್ಳ ಚೀಟಿಗಳನ್ನು ವಿತರಿಸುತ್ತಿದ್ದಾರೆ. ಅಸಲಿಗೆ ಈ ಕೆಲಸವನ್ನು ಚುನಾವಣಾ ಆಯೋಗ ಮಾಡಬೇಕಾಗಿತ್ತು. ರಾಜಕೀಯ ಪಕ್ಷಗಳು ಮಾಡುತ್ತಿವೆ ಎಂದು ಸಾಮಾನ್ಯ ನಾಗರಿಕರು ಪ್ರತಿಕ್ರಿಯಿಸಿದ್ದಾರೆ.

(ಈ ಕೋಟ್‌ನ್ನು ಪ್ಯಾನಲ್‌ನಲ್ಲಿ ಬಳಸಿ)

ಕೋಟ್ .........

ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮತದಾರರಿಗೆ ಮತಗಟ್ಟೆ ಸಂಖ್ಯೆ ಇತ್ಯಾದಿ ಮಾಹಿತಿಯುಳ್ಳ ಚೀಟಿ ಮುದ್ರಿಸಿಕೊಡುತ್ತಿದ್ದೇವೆ. ಉಪಚುನಾವಣಾಧಿಕಾರಿಗಳಿಂದ ಅನುಮತಿ ಪಡೆದಿದ್ದೇವೆ. ಕಾನೂನು ವ್ಯಾಪ್ತಿಯಲ್ಲೇ ಮತಚೀಟಿ ವಿತರಿಸುತ್ತಿದ್ದೇವೆ. ವಿರೋಧ ಪಕ್ಷಗಳು ವಿನಾಕಾರಣ ಆಕ್ಷೇಪವ್ಯಕ್ತಪಡಿಸಿವೆ.

-ಗುರುಪ್ರಸಾದ್, ಜಿಲ್ಲಾಧ್ಯಕ್ಷ, ಕಾಂಗ್ರೆಸ್ ಯುವ ಘಟಕ, ರಾಮನಗರ

13ಕೆಆರ್ ಎಂಎನ್ 5.ಜೆಪಿಜಿ

ಹ್ಯಾಂಡ್ ಪ್ರಿಂಟರ್ ಮತ್ತು ಡಿ.ಕೆ.ಸುರೇಶ್ ಭಾವಚಿತ್ರವುಳ್ಳ ಮತಚೀಟಿ.