ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ ಹಿಂದೂ ಮಹಾ ಗಣಪತಿ ಯುವಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಮಹಾ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಮುಸ್ಲಿಂ ಸಮಾಜದ ಆನೇಕ ಯುವಕರಿಂದ ಸುಮಾರು ಎಂಟುನೂರಕ್ಕಿಂತ ಹೆಚ್ಚು ಮಂದಿಗೆ ಕೇಸರಿಬಾತ್, ಪಲಾವ್ ಹಾಗೂ ಕುಡಿಯುವ ನೀರಿನ ಪಾಕೇಟ್ ವಿತರಿಸಿ ಶುಭಕೋರಿದ ಪ್ರಸಂಗ ತಾಲೂಕಿನ ವೈ.ಎನ್. ಹೊಸಕೋಟೆ ಗ್ರಾಮದಲ್ಲಿ ನಡೆಯಿತು.ತಾಲೂಕಿನ ವೈ.ಎನ್. ಹೊಸಕೋಟೆಯ ಹಿಂದೂ ಮಹಾ ಗಣಪತಿ ವಿಸರ್ಜನೆಯ ವೇಳೆ ವೈ.ಎನ್.ಹೊಸಕೋಟೆಯ ಹಳೇ ಸರ್ಕಾರಿ ಆಸ್ಪತ್ರೆಯ ಮಸೀದಿ ಬಳಿ ಮೆರವಣಿಗೆ ತೆರಳುತ್ತಿದ್ದಂತೆ ಅಪಾರ ಸಂಖ್ಯೆಯ ಮುಸ್ಲಿಂ ಯುವಕರು ಒಂದೆಡೆ ಸೇರಿ ಹಿಂದೂ ಮಹಾ ಗಣಪತಿ ವಿಸರ್ಜನೆಯಲ್ಲಿ ಭಾಗವಹಿಸಿದ್ದ ಆನೇಕ ಮಂದಿ ಹಿಂದೂಗಳಿಗೆ ಕೇಸರಿಬಾತ್ ಹಾಗೂ ಬಿಸಿಬಿಸಿ ಪಲಾವ್, ಕುಡಿಯುವ ನೀರಿನ ಪಾಕೇಟ್‌ಗಳನ್ನು ವಿತರಿಸಿ ಗಣಪತಿ ಹಬ್ಬದ ಶುಭಾಶಯ ಕೋರಿದ್ದಾರೆ. ಪುರಬೀದಿಯ ಪ್ರಮುಖ ರಸ್ತೆಗಳ ಮೂಲಕ ಶಾಂತಿ ರೀತಿಯಲ್ಲಿ ಸಡಗರ ಸಂಭ್ರಮದಿಂದ ಮೆರವಣಿಗೆ ಕಾರ್ಯಕ್ರಮ ನಡೆಸಿದರು.ರಾತ್ರಿ 7 ಗಂಟೆಯ ಬಳಿಕ ಮೇಗಳಪಾಳ್ಯಕ್ಕೆ ಹೋಗುವ ರಸ್ತೆ ಪಕ್ಕದಲ್ಲಿರುವ ಕೆರೆಯೊಂದರಲ್ಲಿ ಗಣೇಶನ ವಿಸರ್ಜನಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಲಾಯಿತು.ತುಮಕೂರು ಜಿಲ್ಲಾ ಅಡಿಷನಲ್ ಎಸ್‌ಪಿ ಖಾದರ್, ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ ಹಾಗೂ ನಗರ ಸಿಪಿಐ ಸುರೇಶ್, ಪಿಎಸ್ಐ ಮಾಳಪ್ಪನಾಲ್ವಡಿ ಸೇರಿದಂತೆ 80ಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತಿನಲ್ಲಿ ಇದ್ದರು.