ಪಾಂಡವಪುರ:
ಶ್ರೀರಾಮನವಮಿ ಅಂಗವಾಗಿ ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ ವಿಜೃಂಭಣೆಯಿಂದ ಶ್ರೀರಾಮ ಮಂದಿರ, ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತರು, ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ಹಾಗೂ ಕೋಸಂಬರಿ ವಿತರಣೆ ಮಾಡಲಾಯಿತು.ಪಟ್ಟಣದ ಹಿರೋಡೆ ಬೀದಿಯ ಪ್ರಸಿದ್ಧ ಶ್ರೀರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹಿರೋಡೆ ಬೀದಿ ನಿವಾಸಿ ಪಟೇಲ್ ಪ್ರಸಾದ್ ಕುಟುಂಬದ ನೇತೃತ್ವದಲ್ಲಿ ವಿಜೃಂಭಣೆಯಿಂದ ಶ್ರೀರಾಮನವಮಿ ಆಚರಣೆ ಮಾಡಲಾಯಿತು. ದೇವರಿಗೆ ವಿಶೇಷ ಹೂವುಗಳಿಂದ ಅಲಂಕಾರ ಮಾಡಿ ಬೆಳಗ್ಗೆಯಿಂದ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನದ ಆವರಣದಲ್ಲಿಯೇ ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ ಮಾಡುವ ಮೂಲಕ ಭಕ್ತಿಭಾವ ಪ್ರದರ್ಶಿಸಿದರು.
ಪಟೇಲ್ ಪ್ರಸಾದ್ ಮಾತನಾಡಿ, ಶ್ರೀರಾಮನವಮಿ ಹಬ್ಬದ ಅಂಗವಾಗಿ ನಮ್ಮ ಪೂರ್ವಿಕರ ಕಾಲದಿಂದಲೂ ನಮ್ಮ ಕುಟುಂಬಸ್ಥರು ಸೇರಿದಂತೆ ಎಲ್ಲಾ ಯಜಮಾನರು, ಬಡಾವಣೆಯ ನಿವಾಸಿಗಳು ಸೇರಿಕೊಂಡು ಶ್ರೀರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಲೋಕ ಕಲ್ಯಾಣಕ್ಕಾಗಿ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದೇವೆ. ಭಕ್ತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರಿಗೆ ಪೂಜೆಸಲ್ಲಿಸಿ ಭಕ್ತಿಭಾವ ಪ್ರದರ್ಶಿಸುತ್ತಿದ್ದಾರೆ ಎಂದರು.ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ಆರ್.ಸೋಮಶೇಖರ್, ಮಾಜಿ ಸದಸ್ಯ ಉಮಾಶಂಕರ್, ಯಜಮಾನ್ ಶಿವಣ್ಣ, ಚಂದ್ರೇಗೌಡ, ಸ್ವಾಮೀಗೌಡ, ಚನ್ನಕೇಶವ, ಬಂಕ್ ರಮೇಶ್, ಉಮಾಶಂಕರ್, ದೀಲಿಪ್(ಲೋಹಿತ್), ಚಂದ್ರಶೇಖರ್, ಲಕ್ಷ್ಮೀನಾರಾಯಣ್, ಮೊದಲಿಯಾರ್ ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಸತೀಶ್, ಬಿ.ಎಸ್.ಜಯರಾಮ್, ಅರ್ಚಕರಾದ ಪ್ರಕಾಶ್, ಗಿರೀಶ್ ಸೇರಿದಂತೆ ಹಲವರು ಇದ್ದರು.ಎಲ್ಲೆಡೆ ಮೊಳಗಿದ ರಾಮನಾಮ ಸ್ಮರಣೆ... ತೀರ್ಥ ಪ್ರಸಾದ ವಿತರಣೆ
ಕಿಕ್ಕೇರಿ: ಮರ್ಯಾದ ಪುರುಷೋತ್ತಮ ಶ್ರೀರಾಮನ ಆರಾಧನೆಯಿಂದ ಶಾಂತಿ ನೆಮ್ಮದಿ ಲಭಿಸಲಿದೆ ಎಂದು ಎಂದು ಅರ್ಚಕ ಗೌರಿಶಂಕರ ಹೇಳಿದರು.ಪಟ್ಟಣದ ಸುಬ್ಬರಾಯಛತ್ರದಲ್ಲಿ ವಿಪ್ರ ಬಾಂಧವಸೇವಾ ಸಮಿತಿ ಶುಕ್ರವಾರ ಅನಿಲ್‌ಶಾಸ್ತ್ರೀ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರಾಮದೇವರು ಹುಟ್ಟಿದ ದಿನವಾದ ರಾಮನವಮಿ ಪೂಜಾ ಸಮಾರಂಭದಲ್ಲಿ ಮಾತನಾಡಿ, ಆದರ್ಶ, ಶೌರ್ಯ, ಸಾಮರ್ಥ್ಯ, ಭಕ್ತಿಔದಾರ್ಯ, ಉದಾರತೆ, ಸರಳತೆ ಸಾರವನ್ನು ಯುವಕರು, ಕಿರಿಯರಿಗೆ ತಲುಪಿಸುವ ಕೆಲಸವಾಗಬೇಕು ಎಂದು ವಿನಂತಿಸಿದರು.
ಪಟ್ಟಾಭಿರಾಮ ದೇವರಿಗೆ ಪುಷ್ಪಾರ್ಚನೆ, ಕುಂಕುಮಾರ್ಚನೆ, ಕೀರ್ತನೆ, ಭಜನೆ, ಸುಂದರಕಾಂಡ ಪಾರಾಯಣಕಾರ್ಯಕ್ರಮ ನಡೆಯಿತು.ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.ರಾಮನವಮಿ ಕಾರ್ಯಕ್ರಮ ವಿದ್ಯುಕ್ತವಾಗಿ ಆರಂಭವಾಗಿ ಏ.5ರಂದು ಹನುಮಂತೋತ್ಸವ ಆಚರಣೆಯೊಂದಿಗೆ ರಾಮನವಮಿ ಉತ್ಸವಗಳು ಸಮಾಪ್ತಿಯಾಗಲಿದೆ ಎಂದು ಸಮಿತಿ ತಿಳಿಸಿದರು. ಅನಿಲ್‌ಶಾಸ್ತ್ರಿ, ಮಹಬಲರಾವ್, ಶ್ರೀಹರಿ, ಕೆ.ಎಸ್. ಪರಮೇಶ್ವರಯ್ಯ, ಅನಂತಸ್ವಾಮಿ, ಕೆ.ಬಿ. ವೆಂಕಟೇಶ್, ಮಹಬಲಶರ್ಮ, ನಾಗೇಂದ್ರ, ಚಂದ್ರಶೇಖರಯ್ಯ, ಸೀತಾರಾಮು, ಭಾಸ್ಕರ್, ಭಾಗ್ಯಮ್ಮ, ಹೇಮಲತಾ, ಸ್ವರ್ಣ ಇದ್ದರು.
ಪಟ್ಟಣದಚನ್ನನಕೊಪ್ಪಲು ಒಕ್ಕಲಿಗರ ರಾಮಮಂದಿರ, ಹಳೆಭಜನೆ ಮನೆ, ಜ್ಯೋತಪಣ ರಾಮಮಂದಿರ, ಮಂದಗೆರೆ, ಅಂಚೆಬೀರನಹಳ್ಳಿ ಮುಂತಾದ ಕಡೆಗಳಲ್ಲಿ ವಿಜೃಂಭಣೆಯಿಂದ ರಾಮನವಮಿ ಆಚರಣೆಯೊಂದಿಗೆ ಶ್ರೀರಾಮದೇವರ ಸ್ಮರಣೆ ಮಾಡಲಾಯಿತು.