ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರುಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಹತ್ತಿರ ಗುರುವಾರ ಕೆಎಸ್ಆರ್‌ಟಿಸಿ ಬಸ್-ಶಾಲಾ ವಾಹನ ನಡುವೆ ಅಪಘಾತ ಹಿನ್ನಲೆಯಲ್ಲಿ ಶುಕ್ರವಾರ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ನಗರದ ರಿಮ್ಸ್ ಬೋಧಕ ಹಾಗೂ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳು ವಿದ್ಯಾರ್ಥಿಗಳ ಆರೋಗ್ಯವನ್ನು ಶುಕ್ರವಾರ ವಿಚಾರಿಸಿದರು.
ಈ ವೇಳೆ ಮಾತನಾಡಿದ ಅವರು, ಶಾಲಾ ಮಕ್ಕಳ ವಾಹನ ಅಪಘಾತವು ನೋವುಂಟು ಮಾಡಿದೆ. ಅಪಘಾತದಲ್ಲಿ ಮೃತಪಟ್ಟ ಇಬ್ಬರು ಬಾಲಕರ ಕುಟುಂಬಕ್ಕೆ ಸರ್ಕಾರ ತಲಾ ₹5 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಗಂಭೀರ ಗಾಯಗೊಂಡಿರುವ ವಿದ್ಯಾರ್ಥಿಗಳಿಗೆ ₹3 ಲಕ್ಷ ಪರಿಹಾರ ಘೋಷಣೆಯಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಮೂವರು ವಿದ್ಯಾರ್ಥಿಗಳು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.ವಿದ್ಯಾರ್ಥಿನಿ ಮಧುಶ್ರೀ ಹಾಗೂ ಮಂಜುನಾಥ ಸ್ಥಿತಿ ಗಂಭೀರವಾಗಿದೆ. ಓರ್ವ ಬಾಲಕಿಗೆ ತಲೆಗೆ ಬಲವಾಗಿ ಪೆಟ್ಟು ಬಿದ್ದಿದೆ. ಬಾಲಕಿಗೆ ಬೆಂಗಳೂರಿನ ನರಶಸ್ತ್ರ ಚಿಕಿತ್ಸಕ ಸಮಾಲೋಚನೆ (ನ್ಯೂರೋ ಸರ್ಜನ್ ಕನ್ಸಲ್ಟ್) ಮಾಡಿದ್ದೇವೆ. ವಿದ್ಯಾರ್ಥಿ ನಂದೀಶ್ ನ ಎರಡು ಕೈ ಗಾಯ ಆಗಿದೆ. ಘಟನೆಗೆ ಕಾರಣವೇನೆಂದು ತಿಳಿಯಲು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪೊಲೀಸ್ ಇಲಾಖೆ ಎಫ್ಐಆರ್ ಮಾಡಿದ್ದು, ವರದಿ ಸಲ್ಲಿಸಲು ತಿಳಿಸಲಾಗಿದೆ. ಎಲ್ಲ ಶಾಲೆಗಳ ಬಸ್‌ಗಳ ಫಿಟ್ನೆಸ್ ಹಾಗೂ ಚಾಲಕರ ಫಿಸಿಕಲ್ ಫಿಟ್ನೆಸ್, ಲೈಸೆನ್ಸ್ ಬಗ್ಗೆ ಆರ್‌ಟಿಒ ದಿಂದ ವರದಿ ಪಡೆಯಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
* ಕುರ್ಡಿ ಗ್ರಾಮಕ್ಕೆ ಭೇಟಿ, ಪರಿಹಾರ ಚೆಕ್ ವಿತರಣೆ: ನಂತರ ಮಾನ್ವಿ ತಾಲೂಕಿಗೆ ತೆರಳಿದ ಸಚಿವರು, ಮೃತಪಟ್ಟ ಬಾಲಕರಾದ ಸಮರ್ಥ, ಶ್ರೀಕಾಂತ್ ಅವರ ಕುಟುಂಬಗಳಿಗೆ ತಲಾ ₹5 ಲಕ್ಷ ಚೆಕ್ ವಿತರಿಸಿದರು. ಈ ವೇಳೆ ಮಾತನಾಡಿ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಲು ಬಂದಿದ್ದೇವೆ. ಇಂತಹ ಘಟನೆಗಳು ಮತ್ತೆ ನಡೆಯದಂತೆ ಕ್ರಮ ಕೈಗೊಳ್ಳುತ್ತೇವೆ. ಗಾಯಗೊಂಡವರಿಗೆ ₹3 ಲಕ್ಷ ಪರಿಹಾರ ನೀಡಲಾಗುವುದು. ಗಾಯಗೊಂಡವರಿಗೆ ಸರ್ಕಾರವೇ ಚಿಕಿತ್ಸೆಯ ವೆಚ್ಚ ಭರಿಸಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶಾಸಕರಾದ ಬಸನಗೌಡ ಬದ್ದಲ್, ಹಂಪಯ್ಯ ನಾಯಕ, ಹಂಪನಗೌಡ ಬಾದರ್ಲಿ, ಎಂಎಲ್‌ಸಿ ಎ.ವಸಂತ ಕುಮಾರ, ಜಿಲ್ಲಾಧಿಕಾರಿ ನಿತೀಶ್ ಕೆ, ಜಿಪಂ ಸಿಇಒ ಪಾಂಡ್ವೆ ರಾಹುಲ್ ತುಕರಾಮ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಮುಖಂಡರು ಇದ್ದರು.
ಎನ್.ಎಸ್ ಬೋಸರಾಜು ಫೌಂಡೇಷನ್ ನಿಂದ ತಲಾ ₹1ಲಕ್ಷ ವಿತರಣೆ
ಕಾಂಗ್ರೆಸ್ ರಾಜ್ಯ ಯುವ ಮುಖಂಡ ರವಿ ಬೋಸರಾಜು ಅವರು ಕುರ್ಡಿ ಗ್ರಾಮಕ್ಕೆ ತೆರಳಿ, ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಸಾಂತ್ವನ ಹೇಳಿ ಎನ್.ಎಸ್ ಬೋಸರಾಜು ಫೌಂಡೇಶನ್ ವತಿಯಿಂದ ತಲಾ 1 ಲಕ್ಷ ರು. ನಗದು ನೀಡಿದರು. ಈಗಾಗಲೇ ಕೆಎಸ್ಆರ್‌ಟಿಸಿ ಯಿಂದ ₹5 ಲಕ್ಷ ಪರಿಹಾರ ನೀಡಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಹೆಚ್ಚಿನ ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು.