ಮೃತ ರೈತ ಕುಟುಂಬಗಳಿಗೆ ಪರಿಹಾರ ವಿತರಣೆ

| Published : Nov 17 2024, 01:15 AM IST

ಸಾರಾಂಶ

ಮೂವರು ರೈತ ಕುಟುಂಬಕ್ಕೆ ತಲಾ ₹2 ಲಕ್ಷ ಪರಿಹಾರದ ಆದೇಶ ನೀಡಲಾಯಿತು.

ಕೂಡ್ಲಿಗಿ: ತಾಲೂಕಿನಲ್ಲಿ ಸಾಲಬಾಧೆಯಿಂದ ಮತ್ತು ಹಾವು ಕಡಿತದಿಂದ ಮೃತರಾಗಿದ್ದ ನಾಲ್ವರು ರೈತ ಕುಟುಂಬದವರಿಗೆ ಕೃಷಿ ಇಲಾಖೆಯಿಂದ ನೀಡುವ ಪರಿಹಾರದ ಆದೇಶವನ್ನು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ವಿತರಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಆದೇಶ ಪತ್ರಗಳನ್ನು ವಿತರಿಸಿದರು. ತಾಲೂಕಿನ ಹಿರೇಕುಂಬಳಗುಂಟೆ ಗ್ರಾಮದ ರೈತ ಪಿ.ಹೊನ್ನೂರ್‌ಸಾಬ್ ಎಂಬುವವರು ಆ.28ರಂದು ಸಾಲಬಾಧೆಯಿಂದ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಸರ್ಕಾರದಿಂದ ₹5 ಲಕ್ಷ ಪರಿಹಾರ ನೀಡಲು ಕೃಷಿ ಇಲಾಖೆಯಿಂದ ಆದೇಶಿಸಲಾಗಿದೆ. ನರಸಿಂಹನಗಿರಿ ಗ್ರಾಮದ ರೈತ ಕೆ.ಓಬಯ್ಯ, ಗುಂಡುಮುಣುಗು ಗ್ರಾಮದ ರೈತ ಗಂಗಪ್ಪ, ವಲಸೆ ಗ್ರಾಮದ ಪಾಪಮ್ಮ ಎಂಬುವವರು ಕೃಷಿ ಚಟುವಟಿಕೆ ಮಾಡುತ್ತಿರುವ ಸಂದರ್ಭದಲ್ಲಿ ಹಾವು ಕಚ್ಚಿ ಮೃತಪಟ್ಟಿದ್ದರು. ಹೀಗಾಗಿ, ಮೂವರು ರೈತ ಕುಟುಂಬಕ್ಕೆ ತಲಾ ₹2 ಲಕ್ಷ ಪರಿಹಾರದ ಆದೇಶ ನೀಡಲಾಯಿತು.

ಸರ್ಕಾರ ಶೀಘ್ರವೇ ಪರಿಹಾರದ ಚೆಕ್‌ಗಳನ್ನು ಸಂಬಂಧಿಸಿದ ಮೃತ ರೈತ ಕುಟುಂಬದವರಿಗೆ ವಿತರಿಸಲಾಗುವುದು ಎಂದು ಶಾಸಕರು ತಿಳಿಸಿದರು.

ತೀರಾ ಕಡುಬಡವರು ಇರುವ ತಾಲೂಕಿನಲ್ಲಿ ಇಂಥ ಸಂದರ್ಭಗಳು ಎದುರಾದಾಗ ನೊಂದ ರೈತ ಕುಟುಂಬಗಳಿಗೆ ನೆರವು ದೊರಕಿಸಿಕೊಡಲು ಸಂಬಂಧಿಸಿದ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಪಂ ಆಡಳಿತಾಧಿಕಾರಿ ಮಾರ್ಕಂಡೇಯ, ತಾಪಂ ಇಒ ನರಸಪ್ಪ, ತಹಸೀಲ್ದಾರ್ ಎಂ.ರೇಣುಕಾ, ಸಹಾಯಕ ಕೃಷಿ ನಿರ್ದೇಶಕ ವಾಮದೇವ ಕೊಳ್ಳಿ, ತಾಲೂಕು ಕೃಷಿ ತಾಂತ್ರಿಕ ಅಧಿಕಾರಿ ಶ್ರವಣಕುಮಾರ್ ಸೇರಿ ಇತರರಿದ್ದರು.